Advertisement

Karnataka: ಗಡಿ ಕನ್ನಡಿಗರ ಅರಣ್ಯರೋದನ

01:22 AM Nov 01, 2023 | Team Udayavani |

ಬೆಳಗಾವಿ: ಕರ್ನಾಟಕ ಎಂದು ಮರು ನಾಮಕರಣದ ಸುವರ್ಣ ವರ್ಷಾ ಚರಣೆ ಸಂದರ್ಭದಲ್ಲಿ ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಗಡಿ ಕನ್ನಡಿಗರ ಹಿತ ರಕ್ಷಣೆ ವಿಷಯದಲ್ಲಿ ರಾಜ್ಯ ಸರಕಾರದ

Advertisement

ಬದ್ಧತೆ ಏನು?
ಇದು ಗಡಿ ಪ್ರದೇಶದ ಕನ್ನಡಿಗರು ಕೇಳುತ್ತಿರುವ ಪ್ರಶ್ನೆ. ಬೆಳಗಾವಿ ವಿಷಯವಾಗಿ ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ಸರಕಾರ ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಪರಿಗಣಿಸಲಿದೆ ಎಂದು ಹೇಳಿದ್ದರು. ಹಾಗಿದ್ದರೆ ಎರಡನೇ ರಾಜಧಾನಿಯನ್ನಾಗಿ ಮಾಡುವತ್ತ ನಿಮ್ಮ ಹೆಜ್ಜೆಗಳೇನು ಎಂಬುದು ಕನ್ನಡ ಹೋರಾಟಗಾರರ ಪ್ರಶ್ನೆ. ಕೇರಳಕ್ಕೆ ಸೇರಿರುವ ಕಾಸರಗೋಡಿನ ಕನ್ನಡಿಗರು ಕೂಡ ಇದೇ ಧೋರಣೆಯನ್ನು ಅನುಭವಿಸುತ್ತಿದ್ದಾರೆ.

ನನೆಗುದಿಗೆ ಬಿದ್ದ ನೀರಾವರಿ ಯೋಜನೆ ಗಳಿಗೆ ಕಾಯಕಲ್ಪ ಇಲ್ಲ. ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಶಾಲೆಗಳಿದ್ದರೆ ಶಿಕ್ಷಕರಿಲ್ಲ. ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಆಸ್ಪತ್ರೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಸರಕಾರಕ್ಕೆ ಗಡಿ ಭಾಗದ ಬಗ್ಗೆ ಇರುವ ಕಾಳಜಿಯೇ ಎಂಬ ಪ್ರಶ್ನೆಯನ್ನು ಗಡಿ ಕನ್ನಡಿಗರು ಮಾಡುತ್ತಿದ್ದಾರೆ. ಈ ಹಿಂದೆ ಎಸ್‌.ಎಂ. ಕೃಷ್ಣ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ.ವೈ. ಘೋರ್ಪಡೆ ಗಡಿ ಭಾಗಕ್ಕೆ ಭೇಟಿ ನೀಡಿದಾಗ ಇನ್ನು ಮುಂದೆ ಗಡಿ ಪ್ರದೇಶದ ಅಭಿವೃದ್ಧಿಗೆ ಪ್ರತೀ ವರ್ಷ 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಇದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಪ್ರತೀ ಬಾರಿ ರಾಜ್ಯೋತ್ಸವ ಆಚರಣೆ ಸಂದರ್ಭ ಬಂದಾಗ ಗಡಿ ಭಾಗದ ಕನ್ನಡಿಗರು, ವಿಶೇಷವಾಗಿ ಹೋರಾಟಗಾರರು ಈ ಪ್ರಶ್ನೆ ಕೇಳುತ್ತಲೇ ಇದ್ದಾರೆ. ಆದರೆ ಇಂದಿಗೂ ಈ ಪ್ರಶ್ನೆಗಳಿಗೆ ಯಾವ ಸರಕಾರಗಳಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ.

ನಿಲ್ಲದ ಮಹಾರಾಷ್ಟ್ರದ ಕಿತಾಪತಿ
ಗಡಿ ವಿವಾದ ವಿಷಯ ಮುಂದಿಟ್ಟು ಕೊಂಡು ಬೆಳಗಾವಿ ಭಾಗದಲ್ಲಿ ಮರಾಠಿ ಭಾಷಿಕ ಜನರನ್ನು ಪ್ರಚೋದಿಸುತ್ತ ಬಂದಿ ರುವ ಮಹಾರಾಷ್ಟ್ರ ಸರಕಾರ ಹಾಗೂ ಅಲ್ಲಿನ ವಿಪಕ್ಷಗಳು ರಾಜಕೀಯವಾಗಿ ಬಹಳ ಲಾಭ ಪಡೆದುಕೊಂಡಿವೆ.

Advertisement

ಕಾಸರಗೋಡು ಕನ್ನಡಿಗರು ಮಲಯಾಳದ ಹೇರಿಕೆಯನ್ನು ವಿವಿಧ ರೂಪಗಳಲ್ಲಿ ಅನುಭವಿಸುತ್ತಿದ್ದಾರೆ. ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವಾಗುತ್ತಿದೆ. ಈಗ ಲೋಕಸಭೆ ಮತ್ತು ಅಲ್ಲಿನ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಮಹಾರಾಷ್ಟ್ರ ಸರಕಾರ ಗಡಿ ವಿಷಯ ಕೆದಕಿ ಬೆಳಗಾವಿಗೆ ಹೊಂದಿಕೊಂಡಿರುವ ಚಂದಗಢದಲ್ಲಿ ಪ್ರಾದೇಶಿಕ ಕೇಂದ್ರ ತೆರೆಯಲು ನಿರ್ಧರಿಸಿದೆ. ಕರ್ನಾಟಕದಲ್ಲಿರುವ ಗಡಿ ಭಾಗದ ಮರಾಠಿ ಭಾಷಿಕರಿಗೆ ಆರೋಗ್ಯ ಕಾರ್ಡ್‌ ವಿತರಿಸಲು ಮುಂದಾಗಿದೆ. ಮುಂಬಯಿಯಿಂದ ಚಂದಗಢಕ್ಕೆ ಬರಲು ಮಹಾರಾಷ್ಟ್ರ ಸರಕಾರಕ್ಕೆ ಸಾಧ್ಯವಾಗುವುದಾದರೆ ಕರ್ನಾಟಕ ಸರಕಾರಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಬರಲು ಏಕೆ ಸಾಧ್ಯವಿಲ್ಲ ಎಂಬುದು ಕನ್ನಡ ಹೋರಾಟಗಾರರ ಪ್ರಶ್ನೆ.

ಬಳಕೆಯಾಗದ ಸುವರ್ಣ ವಿಧಾನಸೌಧ
ಸುವರ್ಣ ವಿಧಾನಸೌಧದ ಬಗ್ಗೆ ಹೇಳುವಾಗ ನಿರಾಸೆಯ ಮಾತು ಬಿಟ್ಟರೆ ಬೇರೆ ಏನೂ ಕೇಳುವುದೇ ಇಲ್ಲ. ನೂರಾರು ಕೋಟಿ ರೂ. ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣ ಮಾಡಿ 11 ವರ್ಷಗಳಾದವು. ಇದರ ಉದ್ಘಾಟನೆ ಮಾಡಿದ್ದ ಆಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಈ ಭವ್ಯ ಸೌಧ ಸದಾ ಸಕ್ರಿಯವಾಗಿರಬೇಕು. ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಟ್ಟಡವಾಗಬೇಕು ಎಂದಿದ್ದರು. ಆದರೆ ಇವತ್ತಿನವರೆಗೂ ಜನರ ಆಶೋತ್ತರಗಳು ಅರಣ್ಯರೋದನವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next