Advertisement

ನವಭಾರತದ ಮುಂಗಾಣ್ಕೆಯ ದಿನ

11:25 AM Aug 15, 2017 | |

ದೇಶವನ್ನು ದಿಢೀರ್‌ ಎಂದು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸುವ ಮಂತ್ರದಂಡ ಯಾರ ಬಳಿಯೂ ಇಲ್ಲ. ಆದರೆ ಹಂತ ಹಂತವಾಗಿ ಸಮಸ್ಯೆ ನಿವಾರಿಸಲು ಕ್ರಾಂತಿಕಾರಿ ಚಿಂತನೆಗಳು ಮತ್ತು ಅವುಗಳನ್ನು ಅನುಷ್ಠಾನಿಸುವ ದಿಟ್ಟತನ ಇರಬೇಕು.

Advertisement

ಗಡಿ ಭಾಗದಲ್ಲಿ ಯಾವುದೇ ಕ್ಷಣದಲ್ಲೂ ಯುದ್ಧ ಸ್ಫೋಟವಾದೀತು ಎಂಬ ಸ್ಥಿತಿಯಲ್ಲೇ ನಾವು ಈ ಸಲದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಒಂದೆಡೆ ಚೀನ, ಇನ್ನೊಂದೆಡೆ ಪಾಕಿಸ್ಥಾನ ನಿರಂತರವಾಗಿ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡುತ್ತಿದ್ದರೂ ಜನರ ಸ್ವಾತಂತ್ರ್ಯ ಸಂಭ್ರಮಕ್ಕೆ ಇದು ಅಡ್ಡಿಯಾಗಿಲ್ಲ. ಸ್ವಾತಂತ್ರ್ಯೋತ್ಸವ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. ಸ್ವಾತಂತ್ರ್ಯ ಲಭಿಸಿ 70 ವರ್ಷವಾಯಿತು ಎನ್ನುವುದು ಒಂದು ಕಾರಣವಾದರೆ ಎಪ್ಪತ್ತರ ಹರೆಯದಲ್ಲಿ ದೇಶ ಸಾಗಿ ಬಂದಿರುವ ಹಾದಿಯನ್ನೊಮ್ಮೆ ಹೊರಳಿ ನೋಡುವುದಕ್ಕೂ ಇದು ಸಕಾಲ. 70 ವರ್ಷಗಳಲ್ಲಿ ದೇಶ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ , ವೈಜ್ಞಾನಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದೆ ಎನ್ನಬಹುದು. ಸಾಮಾಜಿಕವಾಗಿ ದೇಶ ಭಾರೀ ಮುಂದುವರಿದಿದೆ ಎಂದು ಹೇಳುವಂತಿಲ್ಲ. ಆದರೂ ಜಾತೀಯತೆಯಂತಹ ಅನಿಷ್ಟ ಪಿಡುಗುಗಳು ಸಮಾಜದ ಮುಖ್ಯವಾಹಿನಿಯಿಂದ ಮರೆಗೆ ಸರಿಯುತ್ತಿವೆ. ಆರ್ಥಿಕವಾಗಿ ಜಗತ್ತೇ ಹುಬ್ಬೇರಿಸುವಂತಹ ಸಾಧನೆಯನ್ನು ಮಾಡಿದ್ದೇವೆ. ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ದೇಶದ ಆರ್ಥಿಕತೆ ಹೊಸ ಆಯಾಮಗಳತ್ತ ಹೊರಳಿಕೊಂಡಿದೆ. ಇದೀಗ ಜಗತ್ತಿನ ಸೂಪರ್‌ ಪವರ್‌ ಎಂದು ಕರೆಸಿಕೊಳ್ಳುವ ದೇಶಗಳ ಜತೆಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿರುವುದು ನಿಜಕ್ಕೂ ಮೆಚ್ಚತಕ್ಕ ಸಾಧನೆ. ಶಿಕ್ಷಣ ಕ್ಷೇತ್ರದಲ್ಲೂ ದೇಶದ ಸಾಧನೆ ಕಳಪೆಯಲ್ಲ. ಶಿಕ್ಷಣ ಹಕ್ಕು ಕಾಯಿದೆಯಿಂದ ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ವೈಜ್ಞಾನಿಕವಾಗಿ ಭಾರತದ ಸಾಧನೆಯನ್ನು ಕಂಡು ಜಗತ್ತು ನಿಬ್ಬೆರಗಾಗಿದೆ. ಅದರಲ್ಲೂ ಇಸ್ರೊ ಮಾಡಿರುವ ಸಾಧನೆಗಳು ಅದ್ಭುತವಾದದ್ದು. ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳ ಉಡಾವಣೆ, ಚಂದ್ರಯಾನ, ಮಂಗಳಯಾನ ದಂತಹ ದೊಡ್ಡ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ದೇಶ ದಾಪುಗಾಲಿಟ್ಟು ಸಾಗುತ್ತಿದೆ. 

ದೇಶಕ್ಕಿದು ಸ್ಥಿತ್ಯಂತರದ ಕಾಲಘಟ್ಟ. ರಾಜಕೀಯವಾಗಿ ಮಾತ್ರವಲ್ಲದೆ ಎಲ್ಲ ಕ್ಷೇತ್ರದಲ್ಲೂ ದೇಶ ಹೊಸತನಕ್ಕೆ ತೆರೆದು ಕೊಳ್ಳುತ್ತಿದೆ. ರಾಜಕೀಯದಲ್ಲಿ ಹೊಸ ಸಿದ್ಧಾಂತದ ಕೈಗೆ ಅಧಿಕಾರದ ಚುಕ್ಕಾಣಿ ಸಿಕ್ಕಿದೆ. ಈ ಬದಲಾವಣೆ ಇತರ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಫ‌ಲಿಸುತ್ತಿದೆ. ಹೀಗಾಗಿಯೇ ಈ ಸಲದ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರೀಯತೆ ಮತ್ತು ದೇಶಭಕ್ತಿ ಹೆಚ್ಚು ವಿಜೃಂಭಿಸುತ್ತಿದೆ. ದೇಶವನ್ನು ದಿಢೀರ್‌ ಎಂದು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸುವ ಮಂತ್ರದಂಡ ಯಾರ ಬಳಿಯೂ ಇಲ್ಲ. ಆದರೆ ಹಂತಹಂತವಾಗಿಯಾದರೂ ಸಮಸ್ಯೆಗಳನ್ನು ನಿವಾರಿಸಲು ಕ್ರಾಂತಿಕಾರಿ ಚಿಂತನೆಗಳು ಮತ್ತು ಅವುಗಳನ್ನು ಅನುಷ್ಠಾನಿಸುವ ದಿಟ್ಟತನ ಇರಬೇಕು. ಈಗಿನ ಆಡಳಿತದಲ್ಲಿ ಈ ಎರಡೂ ಗುಣಗಳು ಇರುವುದರಿಂದ ದೇಶ ಬದಲಾಗಬಹುದು ಎಂಬ ನಿರೀಕ್ಷೆಯಂತೂ ಹುಟ್ಟಿದೆ. ಕ್ವಿಟ್‌ ಇಂಡಿಯಾ ಆಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಅರ್ಥದಲ್ಲೇ ಮಾತನಾಡಿದ್ದಾರೆ. 2022ಕ್ಕಾಗುವಾಗ ಅಂದರೆ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಬಳುವಳಿಯಾಗಿ ಬಂದಿರುವ ಬಡತನ, ಭ್ರಷ್ಟಾಚಾರ, ಕೋಮುವಾದ, ಜಾತೀಯತೆ ಇನ್ನಿತರ ಪಿಡುಗುಗಳೆಲ್ಲ ನಿವಾರಣೆಯಾಗಿ ನವಭಾರತ ನಿರ್ಮಾಣವಾಗಬೇಕೆಂಬ ಕನಸನ್ನು ಬಿತ್ತಿದ್ದಾರೆ. ಉತ್ಕೃಷ್ಟ ಗುಣಮಟ್ಟದ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಒಟ್ಟು ಚಿತ್ರಣವನ್ನು ಬದಲಿಸುವ ದೂರದೃಷ್ಟಿ ಅವರಲ್ಲಿದೆ. ಪ್ರತೀ ಪ್ರಜೆ ಕೈಜೋಡಿಸಿದರೆ ಅದು ಸಾಕಾರಗೊಳ್ಳುವುದು ಕಷ್ಟದ ಕೆಲಸವಲ್ಲ. 

ಪ್ರತೀ ಸ್ವಾತಂತ್ರ್ಯೋತ್ಸವವೂ ದೇಶಕ್ಕೊಂದು ಯುಗಾದಿಯ ಹಾಗೆ. ಸಿಹಿ-ಕಹಿಗಳ ನೆನಪನ್ನು ಮಾಡಿಕೊಂಡು ಹೊಸ ಹಾದಿಯ ಮುಂಗಾಣ್ಕೆಯನ್ನು ಕಂಡು ಅದರಲ್ಲಿ ಹೆಜ್ಜೆಯೂರಲೊಂದು ದಿನ ಇದು. ನವಭಾರತದ ಕನಸು ಮತ್ತು ಅದನ್ನು ನನಸಾಗಿಸುವತ್ತ ದುಡಿಯಲು ಸ್ಥಿರ ಮನಸ್ಕರಾಗುವ ದಿನ.

Advertisement

Udayavani is now on Telegram. Click here to join our channel and stay updated with the latest news.

Next