Advertisement
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗ್ರಾಮೀಣ ಕಲಾವಿದರನ್ನು ಗುರುತಿಸಿ ಬೆಂಗಳೂರು ಸೇರಿ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು ಹಾಗೂ ನಗರದ ಜನತೆಗೆ ಗ್ರಾಮೀಣ ಜಾನಪದ ಕಲೆಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಜಾನಪದ ಜಾತ್ರೆ ಆರಂಭಿಸಲಾಗಿತ್ತು. ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ಶನಿವಾರ “ಜಾನಪದ ಜಾತ್ರೆ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Related Articles
Advertisement
ಈ ಕುರಿತಂತೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು ಜೂ.10ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು, “ಜಾನಪದ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸರ್ಕಾರವೇ ಅಧಿಕೃತ ಅಕಾಡೆಮಿ ಸ್ಥಾಪಿಸಿದ್ದು, ಅಕಾಡೆಮಿಗೆ ಅಧ್ಯಕ್ಷರು, ಸದಸ್ಯರಿದ್ದಾರೆ. ಎಲ್ಲ ಜಿಲ್ಲೆಯ ಜಾನಪದ ಕಲಾವಿದರ ಮಾಹಿತಿಯೂ ಅಕಾಡೆಮಿಯ ಬಳಿ ಇರುವುದರಿಂದ ಕಾರ್ಯಕ್ರಮ ಆಯೋಜನೆಯೂ ಸುಲಭವಾಗುತ್ತದೆ ಹಾಗೂ ಕಲಾವಿದರಿಗೆ ಹೆಚ್ಚಿನ ಸಂಭಾವನೆ ನೀಡಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಸೂಚನೆಯಂತೆ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಜಾನಪದ ಅಕಾಡೆಮಿ ಅಧ್ಯಕ್ಷರು ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಕಲಾ ಸಂಘಟಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ರಧಾನ ಕಾರ್ಯದರ್ಶಿ ಆದೇಶವನ್ನೇ ಮೂಲೆಗುಂಪು ಮಾಡಲು ಹೊರಟಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ.
ಇದಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳಿಂದ ರಚನೆಯಾಗುವ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರ ಸಂಭಾವನೆ, ಭತ್ಯೆ ಸೇರಿ ಇತರ ಕಾರ್ಯಗಳಿಗೆ ಅನಗತ್ಯ ವೆಚ್ಚ ಮಾಡುವುದರಿಂದ ಬಡ ಜಾನಪದ ಕಲಾವಿದರಿಗೆ ನೀಡುವ ಸಂಭಾವನೆ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಮಾಹಿತಿಯನ್ನು ಕೆಲವು ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆಂದು ತಿಳಿದು ಬಂದಿದೆ.
ಜಾನಪದ ಅಕಾಡೆಮಿಯ ವಾದ ಮತ್ತು ಕಲಾ ಸಂಘಟಕರ ಒತ್ತಡದ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಯಾರಿಂದ ಕಾರ್ಯಕ್ರಮ ಆಯೋಜನೆ ಮಾಡಿಸುವುದು ಎಂಬ ಗೊಂದಲದಲ್ಲಿದ್ದಾರೆ. ಜಾನಪದ ಜಾತ್ರೆಯನ್ನು ಯಾರು ಆಯೋಜಿಸಬೇಕೆಂಬ ಕುರಿತು ಇನ್ನೂ ತೀರ್ಮಾನವಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಜಾನಪದ ಜಾತ್ರೆಯನ್ನು ಅಕಾಡೆಮಿಯಿಂದ ಮಾಡುವುದೇ ಸೂಕ್ತ ಎಂದು ಇಲಾಖೆಗೆ ಮನವಿ ಮಾಡಿಕೊಂಡಿದ್ದೇವೆ. ಹೊರಗಿನವರ ಸಮಿತಿ ರಚನೆ ಮಾಡುವುದರಿಂದ ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ. ಅದು ಕಲಾವಿದರ ಸಂಭಾವನೆ ಕಡಿತಕ್ಕೆ ಕಾರಣವಾಗಬಹುದು.-ಬಿ.ಟಾಕಪ್ಪ, ಜಾನಪದ ಅಕಾಡೆಮಿ ಅಧ್ಯಕ್ಷರು ಜಾನಪದ ಜಾತ್ರೆ ಹೆಸರಿನಲ್ಲಿ ಕೆಲವೇ ಕೆಲವು ಜನರು ಕೆಲವೇ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದಾರೆ. ಜಾನಪದ ಅಕಾಡೆಮಿ ಸರ್ಕಾರದ ಇಲಾಖೆಯ ಅಧೀನದಲ್ಲಿಯೇ ಇದೆ. ಅಲ್ಲದೇ ಕಲಾವಿದರ ದಾಖಲೆ ಹಾಗೂ ಸಂಭಾವನೆ ಅವರೇ ನೀಡಬೇಕಿರುವುದರಿಂದ ಅಕಾಡೆಮಿಯನ್ನು ಬಳಸಿಕೊಳ್ಳಬೇಕು.
-ಪಿಚ್ಚಳ್ಳಿ ಶ್ರೀನಿವಾಸ್, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಣಿತ ತಜ್ಞರ ಸಮಿತಿ ರಚಿಸಿ ಕಾರ್ಯಕ್ರಮ ಆಯೋಜಿಸಬೇಕು. ಹಿಂದಿನ ಜಾನಪದ ಜಾತ್ರೆ ಹೇಗೆ ಯಶಸ್ವಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದೇ ಮಾದರಿಯಲ್ಲಿ ಒಬ್ಬ ನಿರ್ದೇಶಕರನ್ನು ನೇಮಿಸಿದರೆ, ಅವರು ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುತ್ತದೆ.
-ಶ್ರೀನಿವಾಸ ಜಿ. ಕಪ್ಪಣ್ಣ, ರಂಗಕರ್ಮಿ * ಶಂಕರ ಪಾಗೋಜಿ