Advertisement

ಫರ್ಸಿ ನಾಡಲ್ಲಿ ಮಂಜು ಮುಸುಕಿದ ವಾತಾವರಣ

11:25 AM Dec 20, 2018 | |

ಶಹಾಬಾದ: ವಿಶ್ವದ ಭೂಪಟದಲ್ಲಿಯೇ ಫರ್ಸಿ ನಾಡು, ಕಲ್ಲಿನ ಗಣಿ ಹಾಗೂ ಸಿಮೆಂಟ ಉದ್ಯಮಗಳ ಮೂಲಕ ತನ್ನ ಛಾಪು
ಮೂಡಿಸಿರುವ ನಗರದಲ್ಲಿ ಬುಧವಾರ ಬೆಳಗ್ಗೆ ಮಂಜು ದಟ್ಟವಾಗಿ ಆವರಿಸಿ ರಸ್ತೆ ಕಾಣದಂತೆ ಆಗಿದ್ದು ನೋಡುಗರಿಗೆ
ಆಶ್ಚರ್ಯ ಉಂಟಾದರೆ, ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಿದಂತಾಗಿತ್ತು.

Advertisement

ನಗರದಲ್ಲಿ ಬೆಳಗ್ಗೆ 6 ರಿಂದ 8ರ ವರೆಗೆ ಯಾವುದೇ ದಿಕ್ಕಿಗೂ ಕಣ್ಣು ಹಾಯಿಸಿದರೂ ಮಂಜು ಮುಸುಕಿದ ವಾತಾವರಣದಿಂದ ಎಲ್ಲಿಲ್ಲದ ಅಚ್ಚರಿ ಉಂಟಾಯಿತು. ವಾಯು ವಿಹಾರಕ್ಕೆ ಹೊರಟ ಜನರಿಗೆ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಜನರು, ಎಲ್ಲವೂ ಅಸ್ಪಷ್ಟವಾಗಿ, ಅದೃಶ್ಯವಾಗಿ ಕಾಣುತ್ತಿದ್ದನ್ನು ಕಂಡು ರೋಮಾಂಚನವಾಯಿತು. 

ವಾಯುವಿಹಾರಕ್ಕೆ ಹೊರಟ ಶಿಕ್ಷಕ ಹಾಗೂ ಯೋಗಪಟು ನಾಗರಾಜ ದಂಡಾವತಿ ತಕ್ಷಣ “ಉದಯವಾಣಿ’ಗೆ ತಿಳಿಸಿದರು. ತಮ್ಮ ಮೊಬೈಲ್‌ ಕ್ಯಾಮಾರದಿಂದ ಈ ಭಾಗದಲ್ಲಿ ಮೂಡುವ ಅಪರೂಪದ ಕ್ಷಣದ ದೃಶ್ಯಗಳನ್ನು ಸೆರೆಹಿಡಿದು “ಉದಯವಾಣಿ’ಗೆ ನೀಡಿದರು.

ಸುಣ್ಣದ ಅಂಶವನ್ನು ಹೊಂದಿರುವ ಇಲ್ಲಿನ ಭೂಮಿ ಬೇಸಿಗೆಯಲ್ಲಿ ಶಾಖದಿಂದ ಇನ್ನಷ್ಟು ಸೆಕೆಯನ್ನು ಉತ್ಪತ್ತಿ ಮಾಡಿದರೆ, ಮಳೆಗಾಲದಲ್ಲಿ ಸ್ವಲ್ಪ ಮಳೆಯಾದರೆ ಬಾಣೆಲೆ ಮೇಲೆ ನೀರು ಹಾಕಿದಂತಾಗುತ್ತದೆ. ಬಿಸಿಲ ನಾಡೆಂದೇ ಪ್ರಖ್ಯಾತಿ ಪಡೆದ ಈ ಭಾಗದಲ್ಲಿ ಇಂತಹ ರೋಚಕ ಕ್ಷಣಗಳು ಕಾಣುವುದೇ ಅಸಾಧ್ಯ ಎಂದು ತಿಳಿದುಕೊಂಡವರಿಗೆ ಪ್ರಕೃತಿ ಬದಲಾವಣೆಯ ಪಾಠ ಕಲಿಸಿದೆ ಎಂದು ಹೇಳುತ್ತಾರೆ ನಾಗರಾಜ.

ಮಡಿಕೇರಿ, ಶೈಂಗೇರಿ, ಆಗುಂಬೆ, ಚಾರ್ಮುಡಿ ಘಾಟ್‌ಗಳಲ್ಲಿ ಮಂಜು ಮುಸುಕಿದ ವಾತಾವರಣ ಸರ್ವೇ ಸಾಮಾನ್ಯವಾಗಿ ಕಂಡು ಬರುವ ದೃಶ್ಯಗಳು. ಇಂತಹ ಅಪರೂಪದ ಕ್ಷಣ ನಗರದಲ್ಲಿ ಸೃಷ್ಟಿಯಾಗಿ ಕೆಲ ಸಮಯದವರೆಗೆ ಕಣ್ಣನ್ನು
ಮಿಟುಕಿಸದೇ ಪ್ರಕೃತಿ ಸೊಬಗನ್ನು ಜನರು ಆಸ್ವಾದಿಸಿದರು. ಈ ಮಂಜು ಮುಸುಕಿದ ವಾತಾವರಣದಿಂದ ಸಣ್ಣೂರ ರಸ್ತೆಯಲ್ಲಿ ವಾಹನ ಚಾಲಕರಿಗೆ ತೊಂದರೆಯಾದರೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ಸವಾರರು ಬಿದ್ದು ಸಣ್ಣ ಪುಟ್ಟ ಅಪಘಾತಗಳಾಗಿವೆ ಎಂದು ತಿಳಿದು ಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next