Advertisement

ಬಿಜೆಪಿ ಚಿತ್ತ ವರಿಷ್ಠರತ್ತ

02:12 AM Jul 25, 2019 | Team Udayavani |

ಬೆಂಗಳೂರು: ಮೈತ್ರಿ ಸರಕಾರ ಪತನವಾದ ಬೆನ್ನಲ್ಲೇ ಸರಕಾರ ರಚನೆಗೆ ಉತ್ಸುಕವಾಗಿರುವ ರಾಜ್ಯ ಬಿಜೆಪಿಯು ವರಿಷ್ಠರ ಸೂಚನೆಯ ನಿರೀಕ್ಷೆಯಲ್ಲಿದೆ.

Advertisement

ರಾಜ್ಯದಲ್ಲಿ ಗೊಂದಲರಹಿತವಾದ ಸುಭದ್ರ ಸರಕಾರ ರೂಪಿಸಲು ಉದ್ದೇಶಿಸಿರುವ ಬಿಜೆಪಿ ವರಿಷ್ಠರು, ಹತ್ತು ಹಲವು ಆಯಾಮಗಳಲ್ಲಿ ಯೋಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಒಂದೆಡೆ ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಸ್ಪೀಕರ್‌ ಕೈಗೊಳ್ಳುವ ಕ್ರಮವನ್ನು ಆಧರಿಸಿ ವರಿಷ್ಠರು ಹೆಜ್ಜೆ ಇಡುವ ಸೂಚನೆಗಳಿವೆ.

ಸರಕಾರ ಪತನಗೊಂಡ ಮಂಗಳವಾರ ಸಂಜೆ ರಾಜ್ಯ ಬಿಜೆಪಿಯಲ್ಲಿದ್ದ ಉಮೇದು ಬುಧವಾರ ಕೊಂಚ ಕಡಿಮೆಯಾಗಿದ್ದು, ಇದಕ್ಕೆ ವರಿಷ್ಠರ ‘ಲೆಕ್ಕಾಚಾರ’ದ ಹೆಜ್ಜೆಯೇ ಕಾರಣ ಎನ್ನಲಾಗಿದೆ. ಈ ನಡುವೆ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ, ಶಾಸಕ ಜೆ.ಸಿ.ಮಾಧು ಸ್ವಾಮಿ ನಿಯೋಗ ಬುಧವಾರ ದಿಲ್ಲಿಗೆ ತೆರಳಿದೆ. ಅಲ್ಲಿ ವರಿಷ್ಠರನ್ನು ಭೇಟಿಯಾಗಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದೆ.

ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕೇಶವ ಕೃಪಾಗೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ನಾಯಕರನ್ನು ಭೇಟಿಯಾಗಿ ಚರ್ಚಿಸಿ ಆಶೀರ್ವಾದ ಪಡೆದು ಬಂದಿದ್ದಾರೆ.

ಬಿಜೆಪಿ ಎಚ್ಚರಿಕೆಯ ನಡೆ
ಸದ್ಯ ಕಾಂಗ್ರೆಸ್‌, ಜೆಡಿಎಸ್‌ನ 15 ಶಾಸಕರ ರಾಜೀನಾಮೆ ಪ್ರಕರಣ ಇನ್ನೂ ಸ್ಪೀಕರ್‌ ಮುಂದಿದೆ. ಶಾಸಕರ ರಾಜೀನಾಮೆ ಅಂಗೀಕಾರವಾಗುವುದೋ, ತಿರಸ್ಕೃತಗೊಳ್ಳುವುದೋ ಅಥವಾ ಶಾಸಕರು ಅನರ್ಹತೆಗೆ ಒಳಗಾಗುವರೋ ಎಂಬುದು ಸ್ಪೀಕರ್‌ ನಿಲುವಿನ ಮೇಲೆ ಅವಲಂಬಿತವಾಗಿದೆ. ಈ ಪ್ರಕರಣ ಇತ್ಯರ್ಥವಾದರೆ ಅದರ ಸಾಧಕ-ಬಾಧಕ ಆಧರಿಸಿ ಮುಂದುವರಿಯಲು ಅನುಕೂಲವಾಗಲಿದೆ ಎಂಬುದು ವರಿಷ್ಠರ ಲೆಕ್ಕಾಚಾರ. ಹಾಗಾಗಿ ಆತುರದ ನಿರ್ಧಾರ ಕೈಗೊಳ್ಳದೆ ಎಚ್ಚರಿಕೆಯ ಹೆಜ್ಜೆ ಇಡಲು ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದಾರೆ. ಹಾಗಾಗಿ ರಾಜ್ಯ ಬಿಜೆಪಿ ನಾಯಕರು ರಾಜಭವನದ ಮೊರೆ ಹೋಗುವ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಬಹುದು ಎಂದು ಮೂಲಗಳು ಹೇಳಿವೆ.

Advertisement

ವಿಪಕ್ಷ ಸ್ಥಾನಕ್ಕೆ ಪೈಪೋಟಿ
ಅಧಿಕಾರ ಕಳೆದುಕೊಂಡು 24 ಗಂಟೆ ಕಳೆಯುವ ಮುನ್ನವೇ ಕಾಂಗ್ರೆಸ್‌ನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌, ಆರ್‌.ವಿ. ದೇಶಪಾಂಡೆ ಮತ್ತು ಎಚ್.ಕೆ. ಪಾಟೀಲ್ ನಡುವೆ ಪೈಪೋಟಿ ಸೃಷ್ಟಿಯಾಗಿದ್ದು, ಹೈಕಮಾಂಡ್‌ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಉಪಚುನಾವಣೆಯಲ್ಲಿ ಮೈತ್ರಿಗೆ ಒಲವು
ಜೆಡಿಎಸ್‌ ಶಾಸಕರು ಕೂಡ ಬುಧವಾರ ಸಭೆ ನಡೆಸಿದ್ದು, ಮುಂದಿನ ನಡೆ ಬಗ್ಗೆ ಚರ್ಚಿಸಿದರು. ಆಡಳಿತ ಪಕ್ಷಗಳ ಶಾಸಕರ ರಾಜೀನಾಮೆಯಿಂದ ಎದುರಾಗುವ ಉಪಚುನಾವಣೆಗೆ ಸೀಮಿತವಾಗಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದಾರೆ. ಆ ಮೂಲಕ ಮೈತ್ರಿ ಸರಕಾರದ ಪತನಕ್ಕೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಜೆಪಿಯನ್ನು ಯೋಚನೆಗೀಡು ಮಾಡಿರುವ ಅಂಶಗಳು

1 ಮ್ಯಾಜಿಕ್‌ ಸಂಖ್ಯೆ 113ನ್ನು ಹೊಂದಿಸಿಕೊಳ್ಳುವುದು ಬಿಜೆಪಿ ಮುಂದಿರುವ ಮುಖ್ಯ ಸವಾಲು. ಈಗ ಪಕ್ಷೇತರರನ್ನು ಸೇರಿಸಿಕೊಂಡರೆ 107 ಸದಸ್ಯ ಬಲ ಆಗುತ್ತದೆ. ಸದ್ಯಕ್ಕೆ 13 ಮಂದಿ ಶಾಸಕರು ರಾಜೀ ನಾಮೆ ನೀಡಿರುವುದರಿಂದ ಬಹುಮತ ಸಾಬೀತು ಪಡಿಸಲು ಅಡ್ಡಿ ಇಲ್ಲ. ಆದರೆ, ಮುಂದೆ…?
2 ರಾಜೀನಾಮೆ ನೀಡಿದ ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಬಿಜೆಪಿಗೆ ಮುಖ್ಯ ಸವಾಲು. ಇದರ ಜತೆಗೆ ಅವರ ಅನರ್ಹತೆ ಪ್ರಸ್ತಾವ ಸ್ಪೀಕರ್‌ ಅಂಗಣದಲ್ಲಿರುವುದರಿಂದ ಈ ಬಗ್ಗೆ ಕಾನೂನು ನೆರವು ನೀಡಿ, ಅನರ್ಹತೆಯನ್ನು ತಪ್ಪಿಸಬೇಕು.
3 ಅತೃಪ್ತರ ರಾಜೀನಾಮೆಯಿಂದ ಮುಂದಿನ ದಿನಗಳಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ.
4 ಅತೃಪ್ತರು ಬಿಜೆಪಿಗೆ ಸೇರಿಕೊಂಡಲ್ಲಿ ಮೂಲ ನಿವಾಸಿಗಳ ಅತೃಪ್ತಿಯನ್ನು ನಿಭಾಯಿಸುವ ಅಗತ್ಯ
5 ಮೈತ್ರಿ ಸರಕಾರದಲ್ಲಾದ ಗೊಂದಲಗಳು ಪುನರಾವರ್ತನೆಯಾಗದಂತೆ ನೋಡಿಕೊಂಡು ಜನರ ವಿಶ್ವಾಸ ಗಳಿಸಿಕೊಳ್ಳುವುದು ಬಹುದೊಡ್ಡ ಸವಾಲು. ಇಲ್ಲದೆ ಇದ್ದರೆ ಮುಂಬರುವ ಚುನಾವಣೆಯಲ್ಲಿ “ಆಡಳಿತ ವಿರೋಧಿ ಅಲೆ’ ಎದುರಿಸಬೇಕಾಗಬಹುದು.
6 ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ರಿವರ್ಸ್‌ ಆಪರೇಷನ್‌ ಮಾಡದಂತೆ ನೋಡಿಕೊಳ್ಳುವುದು ಸಹ ಸವಾಲುಗಳಲ್ಲಿ ಒಂದು.

Advertisement

Udayavani is now on Telegram. Click here to join our channel and stay updated with the latest news.

Next