Advertisement
ಗುಡ್ಡದ ತಗ್ಗಿನ ನದಿದಂಡೆಯಲ್ಲಿ ಗೋವಿನ ಹಿಂಡು ಮೇಯಿಸುತ್ತ ಕೊಳಲನೂದುವ ಶ್ರೀಕೃಷ್ಣನಿಗೂ, ನದಿ ಸೀಮೆಗೆಲ್ಲ ಸಿಹಿ ಸಿಹಿ ಕಬ್ಬನ್ನು ಕೊಳಲಾಗಿಸಿ ಆರ್ಥಿಕತೆಯ ಹೊಸ ಧ್ವನಿ ಹೊರಡಿಸಿದ ಕೃಷ್ಣಾ ನದಿಗೂ ಯಾವುದೇ ಸಂಬಂಧವಿಲ್ಲ. ಆದರೆ, ನದಿ ನೀರು ಒಂದು ಬೆಳೆಯನ್ನು ವಿಸ್ತರಿಸಿದ ರೀತಿ ನೋಡಲು ಕೃಷ್ಣಾ ನದಿ ಕಾರಣವಾಗಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಎಲ್ಲೆಂದರಲ್ಲಿ ಕಬ್ಬು, ಕಬ್ಬು ಕಬ್ಬು. ಕಳೆದ ಎರಡು ಮೂರು ದಶಕಗಳ ಬದಲಾವಣೆ ಹೇಗಿದೆಯೆಂದರೆ ತಮ್ಮ ಹೊಲದಲ್ಲಿ ಹಿಂದೆ ಯಾವ ಬೆಳೆಯಿತ್ತೆಂಬ ಅರಿವೇ ಮರೆಯುವಷ್ಟರ ಮಟ್ಟಿಗೆ ಆ ಜಿಲ್ಲೆಗಳಲ್ಲಿ ಕಬ್ಬು ಸರ್ವವ್ಯಾಪಿಯಾಗಿದೆ. ಒಂದಿಡೀ ಪ್ರದೇಶದ ಆಹಾರ ಸಂಸ್ಕೃತಿ, ಜೀವನ ವಿಧಾನವನ್ನೇ ಬೆಳೆ ಬದಲಿಸಿದೆ. ಮಲೆನಾಡಿನಲ್ಲಿ ಭತ್ತ ನಷ್ಟದ ಬೇಸಾಯವೆಂದು ಅಡಿಕೆ ಹಣದ ಬೆಳೆಯಾಗಿ 70ರ ದಶಕದ ನಂತರ ಕಣಿವೆ ಬದಲಿಸಿದಂತೆ ಇಲ್ಲಿ ಬಿಳಿಜೋಳ, ಹತ್ತಿ, ಸೂರ್ಯಕಾಂತಿ, ತೊಗರಿ, ಸಜ್ಜೆ ಬೆಳೆಯುತ್ತಿದ್ದ ನೆಲವೀಗ ಕಬ್ಬಿನ ಬೆಳೆಗೆ ಹಂದಗೊಂಡಿದೆ. ಹಿಂಗಾರು ಮುಂಗಾರಿ ಮಳೆಗೆ ತಕ್ಕಂತೆ ಮೂರು ನಾಲ್ಕು ತಿಂಗಳ ಅಲ್ಪಾವಧಿ ಬೆಳೆ ಕಾಣುತ್ತಿದ್ದ ಪರಿಸರದಲ್ಲಿ ಈಗ ಕಬ್ಬು ಎಲ್ಲರ ಉಸಿರು. ಊರಿನ ಆರ್ಥಿಕ ಜೀವನಾಡಿಯಂತೆ ಕಬ್ಬು ಕಾರ್ಖಾನೆಯತ್ತ ಹೋಗುವ ನೋಟ ನೋಡಬಹುದು.
Related Articles
Advertisement
ಕೃಷ್ಣಾ ಅಂದರೆ ಕಪ್ಪು ಎನ್ನುತ್ತೇವೆ. ಈಗ “ಕಬ್ಬು’ ಎನ್ನಬೇಕಾಗಿದೆ. ನಮ್ಮ ರಾಜ್ಯದಲ್ಲಿ 45 ಸಕ್ಕರೆ ಕಾರ್ಖಾನೆಗಳಿವೆ. ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ವಿಜಯಪುರ, ಬೀದರ್, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಬ್ಬಿನ ಬೆಳೆ ಇದೆ. ವಿಶೇಷವೆಂದರೆ, ಸುಮಾರು 28 ಸಕ್ಕರೆ ಕಾರ್ಖಾನೆಗಳು ಕೃಷ್ಣಾ ಕಣಿವೆಯ ಬೆಳಗಾವಿ, ಬಾಗಲಕೋಟೆಗಳಲ್ಲಿವೆ. ಪ್ರತಿ ಕಾರ್ಖಾನೆಗೆ ದಿನಕ್ಕೆ 500-600 ಟ್ರ್ಯಾಕ್ಟರ್‌ಗಳಷ್ಟು ಕಬ್ಬು ಬೇಕು. ಒಂದು ಟ್ರ್ಯಾಕ್ಟರ್ ಲೋಡ್ ಕಬ್ಬು ಕಡಿಯಲು ಸುಮಾರು 8 ಜನ ಕಾರ್ಮಿಕರು ದುಡಿಯುತ್ತಾರೆ. ಅಂದರೆ ಒಂದು ಕಾರ್ಖಾನೆ ಅವಲಂಬಿಸಿ ಏಳೆಂಟು ಸಾವಿರ ಕಾರ್ಮಿಕರು ಬದುಕುತ್ತಾರೆ. 150-180 ದಿನಗಳ ಕಾಲ ಕಾರ್ಖಾನೆಗಳು ಕಬ್ಬು ಅರೆಯುತ್ತವೆ. ಒಂದು ಕಾರ್ಖಾನೆ ನಡೆಯಲು ಸುತ್ತಲಿನ 35-40 ಸಾವಿರ ಎಕರೆಯಲ್ಲಿ ಕಬ್ಬು ಬೆಳೆಯಬೇಕು. ಕಾವೇರಿ ಕಣಿವೆಯ ಮಂಡ್ಯ, ಮೈಸೂರು ಪ್ರದೇಶಗಳಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಕಬ್ಬು ಬೆಳೆಯಲಾಗುತ್ತಿತ್ತು. ಕೆಆರ್‌ಎಸ್ ಅಣೆಕಟ್ಟೆಯಿಂದ ಇಂದು ಸಾಧ್ಯವಾಯಿತು. ಯಾವ ಬೃಹತ್ ನೀರಾವರಿ ಯೋಜನೆಯೂ ಇಲ್ಲದ ಮಾಂಜಾÅ ನದಿ ಕಣಿವೆಯ ಬೀದರ್‌ನಲ್ಲಿ ತೆರೆದ ಬಾವಿಯ ನೀರು ಬಳಸಿ ಕಬ್ಬು ಬೆಳೆಯಲಾಗುತ್ತಿತ್ತು.
ಬೆಳಗಾವಿಯಲ್ಲಿ ಸುಮಾರು 40 ವರ್ಷಗಳ ಹಿಂದೆ ಹೂಗಾರ್ ಶುಗರ್, ಗೋಧಾವರಿ ಶುಗರ್ ಆರಂಭದಿಂದ ರೈತರ ಕಬ್ಬಿನ ಕನಸು ಶುರುವಾಯಿತು. ಆಲಮಟ್ಟಿ, ಹಿಡ್ಕಲ್ ಅಣೆಕಟ್ಟೆಯ ಅನುಕೂಲತೆಯಿಂದ ಅಲ್ಲೆಲ್ಲಾ ನೀರಾವರಿ ಯೋಜನೆಗಳ ವಿಸ್ತರಣೆಯಾಗಿ ಕಬ್ಬಿನ ಸಾಮ್ರಾಜ್ಯ ಬೆಳೆದಿದೆ. ಜಮಖಂಡಿಯ ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಾಣದ ಆರಂಭದಲ್ಲಿ ನಡೆದ ಒಂದು ಘಟನೆ ಹೇಳಬೇಕು. ಅಲ್ಲಿನ ಭೂಮಿಗೆ ನೀರಾವರಿ ಅನುಕೂಲತೆ ದೊರಕಿದ ಬಳಿಕ ರೈತರು ಕಬ್ಬು ಬೆಳೆಯಲು ಶುರುಮಾಡಿದಾಗ ಇಲ್ಲಿನ ಹಳಂಗಳಿ ಗ್ರಾಮೀಣ ಬ್ಯಾಂಕ್ ಕ್ರಿ.ಶ. 1988-89 ರಲ್ಲಿ ಒಂದು ಗ್ರಾಮದ ರೈತರಿಗೆ ನೀಡಿದ ಸಾಲ 9 ಕೋಟಿ ರೂಪಾಯಿಗಳು! ಹೊಲಕ್ಕೆ ನೀರು ಹರಿದರೆ ಆರ್ಥಿಕ ಬದಲಾವಣೆ ಹೇಗೆ ಸಾಧ್ಯವೆಂದು ಇದರಿಂದ ಅರಿಯಬಹುದು. ಉತ್ತಮ ಬಿಸಿಲು, ಮಣ್ಣು, ನೀರಿನ ಅನುಕೂಲತೆ, ಕೃಷಿಗೆ ಉಚಿತ ವಿದ್ಯುತ್ ಸೌಲಭ್ಯದಿಂದ ಕೃಷ್ಣಾ ಕಬ್ಬು ರಾಜ್ಯಕ್ಕೇ ಹೆಸರಾಗಿದೆ. ಕಬ್ಬಿನ ನಾಟಿ, ನೀರಾವರಿಯಲ್ಲಿ ಇಂದು ಸಾಕಷ್ಟು ತಾಂತ್ರಿಕ ಪ್ರಗತಿಯನ್ನು ಇಲ್ಲಿ ನೋಡಬಹುದು. ಕಬ್ಬಿನ ಸಾಲಿನ ನಡುವೆ 6-8 ಅಡಿ ಅಂತರ ಹೆಚ್ಚಿಸಿ ನಡುವಿನ ಭೂಮಿಯಲ್ಲಿ ತರಕಾರಿ ಬೆಳೆಯುವ ಜಾಣ್ಮೆ ಇದೆ. ಹದಿನೈದು ಹದಿನೆಂಟು ತಿಂಗಳಿಗೆ ದೊರೆಯುವ ಕಬ್ಬಿನ ಆದಾಯದ ಮಧ್ಯೆ ಮೂರು ತಿಂಗಳ ತರಕಾರಿ ಆರ್ಥಿಕ ಹೊಸ ಶಕ್ತಿ ತುಂಬಿದೆ.
ಕೃಷ್ಣಾ ನದಿ ಮೂಲದ ಮಹಾರಾಷ್ಟ್ರ ಕಬ್ಬಿನ ಕೃಷಿಗೆ ಮೊದಲು ಹೆಜ್ಜೆ ಇಟ್ಟಿತು. ಇಲ್ಲಿನ ಸತಾರ, ಸಾಂಗ್ಲಿ, ಕೊಲ್ಹಾಪುರ ಪ್ರದೇಶದಲ್ಲಿ ರಾಜ್ಯದ ಶೇ.30ರಷ್ಟು ಕಬ್ಬಿದೆ. ಕ್ರಿ.ಶ 1964ರಲ್ಲಿ ಕೊಯ್ನಾ ಅಣೆಕಟ್ಟು ನಿರ್ಮಾಣದಿಂದ ಶುರುವಾದ ಕಬ್ಬಿನ ಪ್ರೀತಿ ಫಲವಾಗಿ ಇಂದು ಅಂದಾಜು ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಇಲ್ಲಿ ಬೆಳೆದಿದೆ. ಇದೇ ಕೃಷಿ ವಿಜಾnನ ಕರ್ನಾಟಕಕ್ಕೂ ಹರಿದಿದೆ. ನಮ್ಮ ರಾಜ್ಯದಲ್ಲಿ ಅಂದಾಜು 7 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬಿನ ಬೆಳೆ ಇದೆ. ಇದರಲ್ಲಿ ಸಿಂಹಪಾಲು ಬೆಳಗಾವಿ, ಬಾಗಲಕೋಟೆ, ವಿಜಯಪುರದ ಕೃಷ್ಣಾ ಕಣಿವೆಯಲ್ಲಿದೆ. ಒಂದು ಟನ್ ಕಬ್ಬು ಬೆಳೆಯಲು 200 ಟನ್ ನೀರು ಬೇಕು. ನದಿ, ನಾಲಾ, ಕೊಳವೆ ಬಾವಿಗಳಿಂದ ನೀರಾವರಿ ನಡೆದಿದೆ. 400 ಮಿಲಿ ಮೀಟರ್‌ದಿಂದ 700 ಮಿಲಿ ಮೀಟರ್ ವಾರ್ಷಿಕ ಮಳೆ ಸುರಿಯುವ ಪ್ರದೇಶಗಳಲ್ಲಿಯೂ ಕಬ್ಬು ಹಬ್ಬಿದೆ. ಎರಡು ದಶಕಗಳಿಂದ ನಿರಂತರವಾಗಿ ನೀರಾವರಿ ಕಬ್ಬು ಬೆಳೆಯುತ್ತಿದ್ದ ನೆಲಗಳು ಇಂದು ಸವುಳು-ಜವುಳು ಸಮಸ್ಯೆಯಿಂದ ಬಳಲುತ್ತಿವೆ. ಎಕರೆಗೆ 80-90 ಟನ್ ಕಬ್ಬು ಬೆಳೆಯುತ್ತಿದ್ದ ಅಥಣಿ, ಜಮಖಂಡಿ ಪ್ರದೇಶಗಳ ಭೂಮಿಯಲ್ಲಿ ಈಗ 30 ಟನ್ ದೊರಕುವುದು ಕಷ್ಟವಾಗುತ್ತಿದೆ. ಭೂಮಿಯ ಜವುಗು ನೀರು ಹೊರತೆಗೆಯಲು ಕಾಲುವೆ, ಪೈಪ್ ನಿರ್ಮಿಸುವ ಕೆಲಸಗಳು ನಡೆಯುತ್ತಿವೆ. ಒಂದು ಅಂದಾಜಿನ ಪ್ರಕಾರ 50,000 ಹೆಕ್ಟೇರ್ ಭೂಮಿ ಇಲ್ಲಿ ಸವುಳು ಜವುಳು ಸಮಸ್ಯೆಯಿಂದ ಯಾವ ಬೆಳೆಯನ್ನೂ ಬೆಳೆಯದ ಸ್ಥಿತಿ ತಲುಪಿದೆ.
ಚಿಕ್ಕೋಡಿಯ ಮಾಂಜ್ರಿ ಗ್ರಾಮದ 4700 ಎಕರೆ ಭೂಮಿಯಲ್ಲಿ ಈಗಾಗಲೇ ಒಂದು ಸಾವಿರ ಎಕರೆ ಏನೂ ಬೆಳೆಯದ ಹಂತ ತಲುಪಿದೆ. ಸರಕಾರಿ ವರದಿಯಂತೆ ನೀರಾವರಿ ನೆಲೆಯ ಶೇಕಡಾ 15-20ರಷ್ಟು ಪ್ರದೇಶ ತೀವ್ರ ಸಮಸ್ಯೆಯಿಂದ ಬಳಲುತ್ತಿದೆ. ನೀರಾವರಿ ಯೋಜನೆಗೆ ಹೋರಾಡಿದ ರೈತರು ಈಗ ಸವುಳು-ಜವುಳು ಸಮಸ್ಯೆ ನಿವಾರಣೆಗೆ ಬಸಿಗಾಲುವೆಗೆ ಹೋರಾಡುತ್ತಿದ್ದಾರೆ. ಭೂಮಿಗೆಷ್ಟು ನೀರು ಬೇಕೆಂದು ಅರಿಯದೇ ಪ್ರವಾಹ ನೀರಾವರಿಯ ಪ್ರಹಾರಕ್ಕೆ ನೆಲ ನಂಜಾಗಿದೆ. ಯೋಜನಾ ತಜ್ಞರು, ನೀರಾವರಿ ಸಲಹಾ ಸಮಿತಿ, ಕೃಷಿ ತಜ್ಞರೆಲ್ಲ ತುಂಬಿದ ನಾಡಿನಲ್ಲಿ ಹೀಗಾದದ್ದು ಏಕೆ?
ಮುಂದಿನ ಭಾಗ :– ನೀರಾ’ವರಿ’ – ಹೇಳ್ಳೋರು ಯಾರು? ಕೇಳ್ಳೋರ್ಯಾರು?
– ಶಿವಾನಂದ ಕಳವೆ