Advertisement

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

10:53 PM Jun 19, 2021 | Team Udayavani |

ಚಿಕ್ಕವಳಿದ್ದಾಗ ನೀರಿನಲ್ಲಿ ತೇಲುವ ಹಡಗು, ದೋಣಿಗಳು, ಈಜುವ ನೀರು ಪಕ್ಷಿಗಳನ್ನು ನೋಡಿದಾಗ  ಅದರ ತಣ್ತೀ ಅರಿಯದ ಕುತೂಹಲ ಉಂಟಾಗುತ್ತಿತ್ತು. ಕಾಲಕ್ರಮೇಣ ತಣ್ತೀ ಅರಿತರೂ ಕುತೂಹಲ ತಣಿಯಲಿಲ್ಲ. ಕುತೂಹಲ ನಿರಂತರವಾಗಿದ್ದರೆ ಮನುಷ್ಯ ಒಂದಷ್ಟು ಅರಿಯಲು, ಬೆಳೆಯಲು ಅನುಕೂಲವಾಗುತ್ತದೆ. ಇಲ್ಲವಾದರೆ ನಾವೇ ಏನೋ ಮಾಡಿರುವ ಚಿಕ್ಕಪುಟ್ಟ ಕೆಲಸಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಇದರಿಂದ ಜಗತ್ತಿನಲ್ಲಿರುವ ಅದೆಷ್ಟೋ ಅಚ್ಚರಿಗಳು ಎಂದೂ ಅರಿಯಲಾಗದು.

Advertisement

2010ರ ತ್ರಿಪೋಲಿ ಲಿಬಿಯಾದ ದಿನಗಳವು. ನಮಗೆಲ್ಲ ಸುದ್ದಿ ಸಿಕ್ಕಿದ್ದು ಅದಾವುದೋ ಹಡಗು ಬಂದರಿಗೆ ಬರುತ್ತದೆಯಂತೆ, ಬಹಳ ವಿಶಿಷ್ಟವಂತೆ, ಒಂದಷ್ಟು ದಿನ ಅಲ್ಲೆ ನಿಲ್ಲುವುದಂತೆ, ಬೆಳಗ್ಗೆ 9ರಿಂದ ರಾತ್ರಿ 11 ಗಂಟೆವರೆಗೆ ಎಲ್ಲರಿಗೂ ಹಡಗು ನೋಡಲು ಅವಕಾಶವಿದೆಯಂತೆ…. ಇತ್ಯಾದಿ.

ಸಾಧಾರಣವಾಗಿ ಐಷಾರಾಮಿ ಹಡಗುಗಳ ವಿಚಾರ ಕೇಳಿರುತ್ತೇವೆ. ಈಜುಕೊಳ, ಜಿಮ…, ಲೈವ್‌ ಮ್ಯೂಸಿಕ್‌, ಊಟ- ತಿಂಡಿ ಇನ್ನು ಹತ್ತು ಹಲವು ವೈಭವೀಕರಣ ಒಳಗೊಂಡ ಹಡಗುಗಳು ಒಂದು ಬಂದರಿನಿಂದ ಇನ್ನೊಂದು ಕಡೆ ಸಮುದ್ರಯಾನ ಮಾಡುತ್ತಿರುತ್ತವೆ. ಇದನ್ನು ಓದಿರುತ್ತೇವೆ, ಕೇಳಿರುತ್ತೇವೆ, ಮಾಧ್ಯಮಗಳ ಮೂಲಕ ನೋಡಿರುತ್ತೇವೆ. ಇನ್ನೂ ಕೆಲವರು ಯಾನವನ್ನೂ ಮಾಡಿರುತ್ತಾರೆ. ಆದರೆ ಇಲ್ಲಿಗೆ ಬಂದಿದ್ದು ಕೇವಲ ಐಷಾರಾಮಿ ಹಡಗು ಅಲ್ಲ. ಅದೊಂದು ತೇಲುವ ಗ್ರಂಥಾಲಯ.

ಈ ತೇಲುವ ಗ್ರಂಥಾಲಯದ ವಿಶೇಷವೇನು? ಮಕ್ಕಳಿಗಂತೂ ಎಲ್ಲಿಲ್ಲದ ಕುತೂಹಲ, ಪ್ರತಿದಿನ ಹಡಗು ಬಂತಾ ಎಂದು ವಿಚಾರಿಸುತ್ತಿದ್ದರು. ಅಂತೂ ಬಂದರಿಗೆ ಬಂದ ಹಡಗು ಲಂಗರು ಹಾಕಿತ್ತು. ನಾವು ಸಾಮಾನ್ಯವಾಗಿ ಭೇಟಿ ನೀಡುವ ಸ್ಥಳದಲ್ಲೇ ಹಡಗು ಬೀಡುಬಿಟ್ಟತ್ತು. ಮೊದಲ ವಾರ ಜನರ ನೂಕುನುಗ್ಗುಲು ಹೀಗಾಗಿ ಎರಡನೇ ವಾರ ನಾವಲ್ಲಿಗೆ ಭೇಟಿ ನೀಡಿದೆವು.

ಹಡಗಿನ ಹೆಸರು ಲೋಗೊಸ್‌ಹೋಪ್‌ . ಇದರ ಪ್ರಮುಖ ಆಕರ್ಷಣೆ ಇದರಲ್ಲಿರುವ ಗ್ರಂಥಾಲಯ, ಪುಸ್ತಕದ ಮಾರುಕಟ್ಟೆ. ಈ ಕಾರಣಕ್ಕಾಗಿಯೇ ಇದು ಬಹಳ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಇದನ್ನು ತೇಲುವ ಗ್ರಂಥಾಲಯ ಎಂದೇ ಕರೆಯುತ್ತಾರೆ.

Advertisement

ಹಿನ್ನೆಲೆ

ಹಡಗನ್ನು ಹತ್ತಿ ನಾವು ಮೊದಲು ನೋಡಿದ್ದು ಹಡಗಿನ ಇತಿಹಾಸ, ಹಿನ್ನೆಲೆ. ಇದರ ವಿವರಗಳನ್ನು ಸಂಪೂರ್ಣ ಫೋಟೋ ಮತ್ತು ಬರಹದ ಮೂಲಕ ಅಲ್ಲಿ ವಿವರಿಸಿದ್ದರು. 1973ರಲ್ಲಿ ಈ ಹಡಗು ಕಾರ್ಯಾರಂಭಿಸಿತು. ಸರಳ ಒಂದು ದೋಣಿ ಕಾರಿನ ರೂಪದಲ್ಲಿ ಸ್ವೀಡಿಶ್‌ನ ಮಾಲ್ಮೋ ನಗರದಿಂದ ಜರ್ಮನ್‌ ಪ್ರಾಂತ್ಯದವರೆಗೆ ಯಾನ ಮಾಡುತ್ತಿತ್ತು. 1983ರಲ್ಲಿ ಇದನ್ನು ಐಸ್‌ಲ್ಯಾಂಡ್‌ ಶಿಪ್ಪಿಂಗ್‌ ಕಂಪೆನಿ ಗೆ ಮಾರಾಟ ಮಾಡಲಾಯಿತು. 2004ರಲ್ಲಿ ಇದನ್ನು ಖರೀದಿಸಿದ ಮಾಲಕರು ಈ ಹಡಗಿಗೆ  Logos Hope ಎಂದು ನಾಮಕರಣ ಮಾಡಿದರು.ಈಗ ಹಡಗು ಜರ್ಮನ್‌ ಕ್ರಿಶ್ಚಿಯನ್‌ ಚಾರಿಟೆಬಲ್‌ ಆರ್ಗನೈಸೇಶನ್‌, ಜಿಬಿಎ ಶಿಪ್ಸ್‌  ಮಾಲಕರ ವಶದಲ್ಲಿದೆ. ಜಿಬಿಎ ಅಂದರೆ ಜರ್ಮನ್‌ ಭಾಷೆಯಲ್ಲಿ Gute Bucher Fur Alle. . ಇದರ ಅರ್ಥ Good Books for All.

ಉದ್ದೇಶ

ಈ ಹಡಗು ಪ್ರಪಂಚದಾದ್ಯಂತ  ಪಯಣಿಸುತ್ತದೆ. ಚಾರಿಟಿಗಾಗಿ ಒಂದು ಲಾಭ ರಹಿತವಾಗಿ ಸಂಸ್ಥೆಯಂತೆ ಕೆಲಸ ಮಾಡುತ್ತದೆ. ಗ್ರಂಥಾಲಯ ಮೂಲಕ ಜ್ಞಾನ ಹಂಚಿಕೊಳ್ಳಲು, ಅವಶ್ಯವಿರುವವರಿಗೆ ಸಹಾಯ ಮಾಡಲು, ಜನರಲ್ಲಿ ಆಶಾಕಿರಣ ಮೂಡಿಸುತ್ತಿರುವ Logos Hope ಗೆ ಇಲ್ಲಿ ಕೆಲಸ ಮಾಡುವವರು ಸಹಕಾರ ನೀಡುತ್ತಾರೆ.

ವಿವಿಧತೆಯಲ್ಲಿ ಏಕತೆ ಮೂಡಿಸುವ ಉದ್ದೇಶ, 60ಕ್ಕೂ ಹೆಚ್ಚಿನ ರಾಷ್ಟ್ರೀಯತೆ ಹೊಂದಿದ ಜಗತ್ತಿನ ವಿವಿಧ ದೇಶಗಳ ಜನ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ. 500 ಸಿಬಂದಿ, 800 ಮಂದಿ ಒಮ್ಮೆಲೆ ಭೇಟಿ ನೀಡಬಹುದು. Logos Lounge

ಮತ್ತು ಥಿಯೇಟರ್‌ನಲ್ಲಿ  700 ಜನರಿಗಾಗುವಷ್ಟು ಸ್ಥಳವಿದೆ. ಜಗತ್ತಿನ ಅತೀ ದೊಡ್ಡ ತೇಲುವ ಗ್ರಂಥಾಲಯವನ್ನು ಈ ಹಡಗು ಒಳಗೊಂಡಿದ್ದು 5000ಕ್ಕಿಂತಲೂ ಹೆಚ್ಚಿನ ಶೀರ್ಷಿಕೆ ಹೊಂದಿದ ಗ್ರಂಥಗಳನ್ನು ಒಳಗೊಂಡಿದ್ದು,  ರಿಯಾಯಿತಿ ದರದಲ್ಲಿ ಪುಸ್ತಕದ ಮಾರಾಟ ವ್ಯವಸ್ಥೆಯೂ ಇದೆ. ಈ ಹಡಗು ಭೇಟಿ ನೀಡುವ ಪ್ರತೀ ಬಂದರಿನಲ್ಲಿ ಅಂತಾರಾಷ್ಟ್ರೀಯ ಕೆಫೆ ಸೌಲಭ್ಯವೂ ಲಭ್ಯವಿರುತ್ತದೆ.  ವಾರದ ನಿಗದಿತ ಅವಧಿಯಲ್ಲಿ ರಂಗಭೂಮಿ ತಂಡ ತಮ್ಮ ಪ್ರದರ್ಶನ ಹಮ್ಮಿಕೊಳ್ಳುತ್ತದೆ.

ವಿಶೇಷತೆ

ಈ ಹಡಗಿನ ವಿಶೇಷತೆಯೆಂದರೆ ಗ್ರಂಥಾಲಯ. ಇದನ್ನು ಸಂದರ್ಶಕರೂ ಬಳಸಬಹುದು. ಬಂದರಿ ನಲ್ಲಿ ಹಡಗು ತಂಗಿದಾಗ ವಿವಿಧ ಶಾಲೆಗಳ ಮಕ್ಕಳೂ ಹಡಗಿಗೆ ಭೇಟಿ ನೀಡುತ್ತಾರೆ. ಇಲ್ಲಿ  ಪುಸ್ತಕ ಖರೀದಿ, ರಂಗಭೂಮಿ ಮತ್ತು ಇಲ್ಲಿ ಕೆಲಸ ಮಾಡುವ ಸಿಬಂದಿ ಜತೆಗೆ ಮಾತುಕತೆ ಸಂಪರ್ಕ ಮಕ್ಕಳಿಗೆ ಹೊಸ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ.

ಮಕ್ಕಳಿಗಾಗಿ ಚಿತ್ರಬಿಡಿಸಿ ತಮ್ಮ ಅನುಭವ ಬರೆಯುವ ಅವಕಾಶವಿದೆ. ನಾವು ಇಲ್ಲಿಗೆ ಭೇಟಿ ಇತ್ತಾಗ ಮಕ್ಕಳು ಚಿತ್ರಬರೆದು ಅಂಟಿಸಿದರು. ಅಲ್ಲಿ ಸ್ವಯಂಸೇವಕಿಯಾಗಿದ್ದ ಯುವತಿಯೊಬ್ಬಳು, ಮಕ್ಕಳಿಗೆ ಚಿತ್ರ ಬರೆಯಲು ಸಹಕರಿಸುವುದರ ಜತೆಗೆ ಮಕ್ಕಳ ಜತೆ ಬೆರೆತು ಅನುಭವ ಪಡೆಯಲು ಈ ಕೆಲಸ ಮಾಡುತ್ತಿದ್ದೇನೆ. ನೌಕಾಯಾನ, ವಿವಿಧ ದೇಶದ ಜನರ ಜತೆಗೆ ಒಡನಾಡುವ ಅನುಭವ, ಹಲವು ದೇಶಗಳ ಸಂಸ್ಕೃತಿ ಅರಿಯಲು, ನಾಯಕತ್ವ ಗುಣ ಬೆಳೆಸಿಕೊಳ್ಳಲು, ಹೊಂದಾಣಿಕೆ, ಸಾರ್ವಜನಿಕ ಸಂವಹನ, ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ಕಲಿಯಲು ಈ ಅನುಭವ ಸಹಾಯಕ. ಇಲ್ಲಿಯ ಗಳಿಕೆ ಚಾರಿಟಿಗೆ ಹೋಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಸೇವಾ ಮನೋಭಾವ ಮೂಡಿಸುವ ಈ ನೌಕಾಯಾನ ನಿಜಕ್ಕೂ ಅವಿಸ್ಮರಣೀಯ ಎಂದಳು.

ಇಲ್ಲಿಯ ಎಲ್ಲ  ಸಿಬಂದಿ ಜತೆ ಬೆರೆಯಬಹುದು, ಅವರ ಅನುಭವ ನಾವು ತಿಳಿದುಕೊಳ್ಳಬಹುದು. ಇನ್ನು ಹಲವು ಮುಖ್ಯ ಹುದ್ದೆಯಲ್ಲಿ ಕೆಲಸ ಮಾಡುವ ಜನರೂ ಒಂದು ವರ್ಷದ ರಜೆ ತೆಗೆದುಕೊಂಡು ಈ ಹಡಗಿನಲ್ಲಿ  ಚಾರಿಟಿ ಕೆಲಸ ಮಾಡಿ ಅನುಭವ ಪಡೆಯಲು ಬರುವುದು ವಿಶೇಷ.

ಹಡಗು ಸುತ್ತಿ ನೋಡಿ ಬರಲು ಹೋದ ನಮಗೆ ತಿರುಗಿ ಬರಲು ಮನಸ್ಸಾಗಲಿಲ್ಲ. ಅಲ್ಲಿಯ ವಾತಾವರಣ, ಗ್ರಂಥಾಲಯ ಎಲ್ಲವೂ ಸೊಗಸು.  ಹಡಗಿನ ಒಳಗೆ ಪುಸ್ತಕ ಖರೀದಿಸಿ, ಎಲ್ಲರೊಡನೆ ಬೆರೆತು ಹೊರ ಬಂದಾಗ ನನ್ನನ್ನು ಸುದೀರ್ಘ‌ ಮೌನವೊಂದು ಆವರಿಸಿಕೊಂಡಿತು. ಜಗತ್ತು ಎಷ್ಟು ವಿಶಾಲವಾಗಿದೆ, ಜನರ ಸೃಜನಶೀಲತೆ, ಶ್ರಮ, ತ್ಯಾಗ , ಸೇವಾ ಮನೋಭಾವ ಒಂದೇ ಎರಡೇ.. ಜಗತ್ತಿನಲ್ಲಿ ನೋಡಿ ಕಲಿಯಬೇಕಾದ್ದು ಅದೆಷ್ಟೋ ವಿಷಯಗಳಿವೆ. ಕಲಿಯುವ ತಿಳಿಯುವ ಮನವಿರಬೇಕು…

 

ವಾಣಿ ಸಂದೀಪ,   ಸೌದಿ ಅರೇಬಿಯಾ

Advertisement

Udayavani is now on Telegram. Click here to join our channel and stay updated with the latest news.

Next