ಕೆ.ಆರ್.ಪುರ: ಸರ್ಕಾರ ಅಭಿವೃದ್ಧಿಗೆ ಶ್ರಮಿಸದೆ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಪ್ರತ್ಯೇಕ ಧರ್ಮ ಮತ್ತು ಧ್ವಜದ ನೆಪದಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಮಮೂರ್ತಿನಗರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, “ಹಿರಿಯ ಚಿಂತಕರು ಸಮಾಜವನ್ನು ಜಾತಿ, ಧರ್ಮಗಳ ಬೇಧದಿಂದ ದೂರಾಗಿಸಿ ಒಗ್ಗುಡಿಸುವ ಕಾರ್ಯಮಾಡಿದ್ದಾರೆ. ಬಸವೇಶ್ವರ, ಕನಕದಾಸ, ಅಂಬೇಡ್ಕರ್ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಧರ್ಮ ಹಾಗೂ ಜಾತಿಗಳ ನಡುವೆ ಬಿರುಕು ಮೂಡಿಸುತ್ತಿದ್ದಾರೆ.
ತನ್ನ ಆಳ್ವಿಕೆಯಲ್ಲಿನ ಹುಳುಕು ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರತ್ಯೇಕ ಧ್ವಜ ಹಾಗೂ ಜಾತಿ, ಧರ್ಮಗಳ ನಡುವೆ ವಿಷ ಬಿತ್ತುವ ಮೂಲಕ ಸಮಾಜ ಒಡೆಯುತ್ತಿದ್ದಾರೆ. ಲಿಂಗಾಯಿತರನ್ನು ಪ್ರತ್ಯೇಕ ಧರ್ಮವಾಗಿಸುವ ಇವರ ನಡೆಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ,’ ಎಂದು ಹೇಳಿದರು.
“ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಲೋಕಸಭೆಯಲ್ಲಿ ಅಂಗೀಕರ ದೊರಕಿದೆ, ರಾಜ್ಯಸಭೆಯಲ್ಲಿ ಅಂಗೀಕರ ಪಡೆಯಬೇಕಿದೆ. ಆಯೋಗದಿಂದ ಹಿಂದುಳಿದ ವರ್ಗಕ್ಕೆ ಸಿಗಬೇಕಿರುವ ಸವಲತ್ತುಗಳ ಬಗ್ಗೆ ಚರ್ಚಿಸಲು ಇದೇ 29 ರಂದು ನಗರದ ಜಾnನಜ್ಯೋತಿ ಸಭಾಂಗಣದಲ್ಲಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ಹಿಂದುಳಿದ ಸಮುದಾಯದ ಪ್ರಮುಖರನ್ನು ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೂಲಭೂತ ಹಕ್ಕುಗಳ ಬಗ್ಗೆ ಚರ್ಚಿಸಲಾಗುರುವು,’ ಎಂದು ತಿಳಿಸಿದರು. ಮಾಜಿ ಶಾಸಕ ನಂದೀಶ್ ರೆಡ್ಡಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್, ಪಾಲಿಕೆ ಮಾಜಿ ಸದಸ್ಯ ಕಲ್ಕೆರೆ ಶ್ರೀನಿವಾಸ್, ಮಧುಸೂದನ್, ಗೋಪಾಲ ಕೃಷ್ಣ, ವೆಂಕಟರಮಣ, ಗೋವಿಂದ್ ರಾಜು ಮತ್ತಿತರರಿದ್ದರು.