Advertisement

ಪಂಚಭಾಷಾ ಸೂತ್ರ; ಸುಲಲಿತ ಸಂವಹನ ಮಂತ್ರ

01:34 AM Feb 03, 2021 | Team Udayavani |

ಭಾರತ ಬಹುಭಾಷೆಗಳ ದೇಶವಾಗಿದ್ದು ಬಹುಶಃ ಇಲ್ಲಿ ಮಾತನಾಡುವಷ್ಟು ಭಾಷೆಗಳನ್ನು ಇತರ ಯಾವುದೇ ದೇಶದಲ್ಲೂ ಮಾತನಾಡುವುದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ದೇಶ ದಲ್ಲಿ 22 ಪ್ರಮುಖ ಭಾಷೆಗಳಿದ್ದು 19,500ರಷ್ಟು ಉಪಭಾಷೆಗಳಿವೆ. ಸಂಸ್ಕೃತವು ಭಾರತದ ಅತೀ ಪುರಾತನ ಭಾಷೆಯಾಗಿದ್ದು ಇತರ ಎಲ್ಲ ಭಾರತೀಯ ಭಾಷೆಗಳಿಗಷ್ಟೇ ಅಲ್ಲದೆ ಪ್ರಪಂಚದಲ್ಲಿನ ಬಹುತೇಕ ಭಾಷೆಗಳಿಗೂ ಮೂಲವೆಂದರೆ ತಪ್ಪಲ್ಲ. ಪುರಾತನ ಕಾಲದಲ್ಲಿ ಮಾನವರು ಸಂಜ್ಞೆಗಳ ಮೂಲಕ ವ್ಯವಹರಿಸುತ್ತಿದ್ದರು. ಅನಂತರ ಕಾಲಾನುಕ್ರಮದಲ್ಲಿ ಭಾಷೆಗಳ ಸೃಷ್ಟಿಯಾಯಿತು. ಈ ಭಾಷೆಗಳೂ ಕ್ರಮೇಣ ಹಲವು ಬದಲಾವಣೆಗಳನ್ನು ಕಂಡವು. ಭಾಷೆಗಳು ಸಂಜ್ಞೆಗಳಿಗಿಂತ ಸುಲಭವಾಗಿ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲಿಕ್ಕಿರುವ ಸಾಧನಗಳು. ನಾಗರಿಕತೆಯ ಬೆಳವಣಿಗೆಗೆ ಭಾಷೆಗಳ ಕೊಡುಗೆ ಅಪಾರವಾದುದು.

Advertisement

ಸಾಮಾಜಿಕ ಜೀವನವು ಸುಗಮವಾಗಿ ಸಾಗಬೇಕಾ ದರೆ ಕೇವಲ ಒಂದೇ ಭಾಷೆ ಮಾತ್ರ ತಿಳಿದಿದ್ದರೆ ಸಾಲದು. ನಾವು ಕೇವಲ ಕೂಪ ಮಂಡೂಕಗಳಾಗಿ ಜೀವನಪೂರ್ತಿ ನಮ್ಮ ಊರಿನಲ್ಲೇ ಉಳಿದರೂ ಕೇವಲ ಒಂದು ಭಾಷೆಯೊಂದಿಗೆ ವ್ಯವಹರಿಸಿ ಜೀವಿಸುವುದು ಕಷ್ಟ. ಕನಿಷ್ಠ ಮೂರು ಭಾಷೆಗಳಾದರೂ ತಿಳಿದಿದ್ದರೆ ಜೀವನವು ಸುಲಭವಾಗಬಹುದು. ಇನ್ನು ಮಾತೃ ಭಾಷೆ, ಕ್ಷೇತ್ರಭಾಷೆ, ರಾಜ್ಯಭಾಷೆ, ರಾಷ್ಟ್ರಭಾಷೆ ಹಾಗೂ ವಿಶ್ವಭಾಷೆ.. ಹೀಗೆ ಪಂಚಭಾಷೆಗಳನ್ನು ಕರಗತ ಮಾಡಿಕೊಂಡರೆ ಯಾವುದೇ ಮುಜುಗರವಿಲ್ಲದೆ ವಿಶ್ವಾದ್ಯಂತ ವ್ಯವಹರಿಸಬಹುದು. ನಮ್ಮ ಕರಾವಳಿ ಯನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಮಾತೃಭಾಷೆಗಳು ಹಲವು. ಇವುಗಳಲ್ಲಿ ತುಳು, ಕೊಂಕಣಿ, ಮರಾಠಿ, ಕನ್ನಡ ಮತ್ತು ಬ್ಯಾರಿ ಭಾಷೆ ಪ್ರಮುಖವಾದವುಗಳು. ಈ ಭಾಷೆಗಳಲ್ಲೂ ಸ್ವಲ್ಪ ಸ್ವಲ್ಪ ಬದಲಾವಣೆಗಳಿರುವ ಹಲವು ಪ್ರಭೇದಗಳಿವೆ. ಉದಾಹರಣೆಗೆ ಕನ್ನಡದಲ್ಲಿ ಅರೆಗನ್ನಡ, ಕುಂದಗನ್ನಡ, ಹವ್ಯಕರ ಕನ್ನಡ ಇತ್ಯಾದಿ. ಕೊಂಕಣಿಯಲ್ಲಿ ರಾಜಾಪುರ ಸಾರಸ್ವತ ಕೊಂಕಣಿ, ಗೌಡ ಸಾರಸ್ವತ ಕೊಂಕಣಿ ಹಾಗೂ ಕ್ರಿಶ್ಚಿಯನ್‌ ಕೊಂಕಣಿ ಇತ್ಯಾದಿ. ತುಳು ಭಾಷೆಯಲ್ಲಿ ಉಡುಪಿಯ ತುಳು, ದಕ್ಷಿಣ ಕನ್ನಡ ಜಿಲ್ಲೆಯ ತುಳು, ಬ್ರಾಹ್ಮಣರ ತುಳು.. ಹೀಗೆ ಸ್ವಲ್ಪ ಸ್ವಲ್ಪ ಬದಲಾವಣೆಯಿರುವ ಮಾತೃಭಾಷೆಗಳಿವೆ. ಇವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಹಾಗೂ ಸ್ವಲ್ಪ ಪ್ರಯತ್ನಪಟ್ಟರೆ ಈ ಭಿನ್ನ ಪ್ರಭೇದದ ಭಾಷೆಗಳಲ್ಲಿ ಮಾತನಾಡಲೂ ಕಲಿಯಬಹುದು.

ನಮ್ಮ ರಾಜ್ಯಭಾಷೆ ಕನ್ನಡವಾದರೆ ರಾಷ್ಟ್ರಭಾಷೆ ಯಾಗಿ ಹಿಂದಿಯನ್ನು ಪರಿಗಣಿಸಬಹುದು. ವಿಶ್ವಭಾಷೆಯಾಗಿ ಇಂಗ್ಲಿಷನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಹಿಂದಿ ತಿಳಿದಿದ್ದರೆ ದಕ್ಷಿಣ ಭಾರತದ ಒಂದೆರಡು ರಾಜ್ಯಗಳನ್ನು ಬಿಟ್ಟರೆ ದೇಶದ ಬಹುತೇಕ ರಾಜ್ಯಗಳಲ್ಲಿ ವ್ಯವಹರಿಸಬಹುದು. ಇಂಗ್ಲಿಷ್‌ ಮಾತನಾಡಲು ತಿಳಿದಿದ್ದರೆ ವಿಶ್ವಾದ್ಯಂತ ವ್ಯವಹರಿಸಬಹುದು.

ನಮ್ಮ ದೇಶದ ದೌರ್ಭಾಗ್ಯವೆಂದರೆ ಭಾಷೆಗಳ ಬಗ್ಗೆ ದಾಯಾದಿ ಕಲಹವು ಹಿಂದಿನಿಂದಲೂ ನಡೆದು ಬಂದಿದೆ. ಒಂದು ಕಡೆ ಸರಕಾರಗಳಿಂದ ಭಾಷೆಗಳ ಹೇರಿಕೆಯಾದರೆ ಮತ್ತೂಂದೆಡೆ ಅದನ್ನು ಸ್ವೀಕರಿಸು ವುದರಲ್ಲಿ ಜನರು ತೋರುತ್ತಿರುವ ಮೊಂಡುತನ. ಇತ್ತೀಚೆಗಂತೂ ತುಸು ಹೆಚ್ಚೇ ಎನ್ನುವಷ್ಟು ಪ್ರತಿಭಟ ನೆಗಳು ಈ ಭಾಷೆಗಳ ವಿಷಯದಲ್ಲಿ ನಡೆಯುತ್ತಿವೆ. ನಮ್ಮ ಮಾತೃಭಾಷೆಯನ್ನು, ಕ್ಷೇತ್ರಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಅದನ್ನು ನಮ್ಮ ಮಕ್ಕಳಿಗೆ ಕಲಿಸಿ ಮನೆಯಲ್ಲಿ ಅದೇ ಭಾಷೆಯಲ್ಲಿ ಮಾತನಾಡಬೇಕು. ಮಕ್ಕಳು ಯಾವುದೇ ಮಾಧ್ಯಮದ ಶಾಲೆಯಲ್ಲಿ ಕಲಿತರೂ ಆ ಮಾಧ್ಯಮವನ್ನು ಹೊರತಾಗಿ ಇತರ ಭಾಷೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಪ್ರಾಥಮಿಕ ಶಾಲೆಯ ವಯೋಮಾನದ ಮಕ್ಕಳು ಭಾಷೆಯನ್ನು ಅತೀ ಸುಲಭವಾಗಿ ಟಿವಿ ನೋಡಿಯೋ ಯೂಟ್ಯೂಬ್‌, ವಾಟ್ಸ್‌ಆ್ಯಪ್‌ ಮೂಲಕವೋ ಕಲಿತುಕೊಳ್ಳುತ್ತಾರೆ. ಹಿರಿಯರ ಪ್ರೋತ್ಸಾಹ ಹಾಗೂ ಸ್ವಲ್ಪ ಒತ್ತಾಯವೂ ಸೇರಿದರೆ ಇನ್ನೂ ಒಳ್ಳೆ ಯದು. ಪ್ರಾಥಮಿಕ ಶಾಲೆಗಳಲ್ಲಿ ಭಾಷಾಕಲಿಕಾ ವರ್ಧನೆಗೋಸ್ಕರ ಅಗತ್ಯವಿರುವ ಕನಿಷ್ಠ ಐದು ಭಾಷೆಗಳ ಚರ್ಚಾಕೂಟ, ಸಂವಾದಗಳನ್ನು ವಾರಕ್ಕೆ ಒಮ್ಮೆಯಾದರೂ ಆಯೋಜಿಸಬೇಕು. ಮನೆಯಲ್ಲೂ ಹೆತ್ತವರು ಮಕ್ಕಳಿಗೆ ಕನ್ನಡ, ಹಿಂದಿ, ಇಂಗ್ಲಿಷ್‌ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಲು ಪ್ರೇರೇಪಿಸಬೇಕು.

ಹೆಚ್ಚು ಭಾಷೆಗಳನ್ನು ಕಲಿಯು ವುದೆಂದರೆ ನಮ್ಮ ಬ್ಯಾಂಕ್‌ ಖಾತೆಯಲ್ಲಿ ಹೆಚ್ಚು ಹಣ ಜಮಾವಣೆ ಮಾಡಿದ ಹಾಗೆ. ಹೆಚ್ಚು ಭಾಷೆಗಳನ್ನು ಕಲಿತ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಿ ಮುಂದೆ ಅವರು ಉತ್ತಮ ನಾಗರಿಕರಾಗುವುದರಲ್ಲಿ ಸಂಶಯವಿಲ್ಲ.
ಪ್ರಯತ್ನಪಟ್ಟರೆ ನಾಲ್ಕೈದು ಭಾಷೆಗಳನ್ನು ಕಲಿಯು ವುದು ಕಷ್ಟವಲ್ಲ. ನಾವು ನಮ್ಮ ಊರಿನ ಅಂಗಡಿ, ಕಚೇರಿಗಳಲ್ಲಿ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯ ನಾಮಫ‌ಲಕಗಳನ್ನು ಅಳವಡಿಸುವುದು ಒಳ್ಳೆಯದು. ಆ ಮೂಲಕ ಕನ್ನಡವನ್ನು ಉಳಿಸಿ ಇತರ ಆವಶ್ಯಕ ಭಾಷೆಗಳನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಬೇರೆ ಊರಿನಿಂದ ನಮ್ಮ ಊರಿನ ಮೂಲಕ ಹಾದು ಹೋಗುವ ಕನ್ನಡ ಅರಿಯದ ಪ್ರಯಾಣಿಕರಿಗೂ ಇದು ಸಹಕಾರಿಯಾಗುವುದು. ನಾವು ಇತರ ರಾಜ್ಯ, ರಾಷ್ಟ್ರಗಳ ಭಾಷೆಗಳನ್ನು ಕಲಿತು ಅವರಿಗಿಂತಲೂ ಒಂದು ಕೈ ಮೇಲೆ ಎಂದು ಹೆಮ್ಮೆಯಿಂದ ಹೇಳು ವಂತಾಗಲಿ. ನಮ್ಮ ಮಾತೃಭಾಷೆ, ಕ್ಷೇತ್ರಭಾಷೆ ಹಾಗೂ ರಾಜ್ಯಭಾಷೆಗಳನ್ನು ಉಳಿಸಿ ಬೆಳೆಸೋಣ. ಹಾಗೆಯೇ ಇತರ ಭಾಷೆಗಳನ್ನು ಗೌರವಿಸಿ ಒಂದೆರಡನ್ನಾದರೂ ಕಲಿಯೋಣವಲ್ಲವೇ?

Advertisement

 ಡಾ| ಸತೀಶ ನಾಯಕ್‌ ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next