ಮಂಡ್ಯ: ಸಾವಿನ ಅಧಿಪತಿ ಯಮರಾಜ. ಅವನನ್ನು ಕಂಡರೆ ಎಲ್ಲರೂ ಹೆದರುವರು. ಕನಸಿನಲ್ಲಿಯೂ ಅವನನ್ನು ನೆನೆಸಿಕೊಳ್ಳಲು ಯಾರೂ ಬಯಸುವುದಿಲ್ಲ. ಈ ನಂಬಿಕೆಯ ನಡುವೆಯೂ ಯಮರಾಜನ ದೇವಸ್ಥಾನಗಳು ದೇಶದಲ್ಲಿ ಕೆಲವು ಮಾತ್ರ ಇವೆ. ಅಂತಹುದೇ ಯಮರಾಜನ ದೇಗುಲವೊಂದು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಸಮೀಪವಿರುವ ಹೊಸ ಉಂಡವಾಡಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿತ್ತು. ಜಾಗ ವಿವಾದದ ಹಿನ್ನೆಲೆಯಲ್ಲಿ ಉದ್ಘಾಟನೆಗೆ ಸಿದ್ಧವಿದ್ದ ದೇವಸ್ಥಾನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಪ್ರತಿಷ್ಠಾಪನೆಗೆ ಸಿದ್ಧಗೊಂಡಿದ್ದ ಮೂರ್ತಿ: ಕರ್ನಾಟಕದಲ್ಲೇ ಮೊದಲ ಬಾರಿಗೆ ಶ್ರೀ ಯಮರಾಜನ ದೇವಸ್ಥಾನವನ್ನು 4 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಕ್ಷೇತ್ರ ಶನಿಮಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿತ್ತು. ಪುರಾಣದ ಕಥೆಯಲ್ಲಿರುವಂತೆ ಎಡಗೈನಲ್ಲಿ ಗದೆ ಹಿಡಿದು ಬಲಗೈಯ್ಯಲ್ಲಿ ಹಗ್ಗ ಹಿಡಿದ ಯಮರಾಜ ಕೋಣನ ಮೇಲೆ ಕುಳಿತಿರುವ ಐದು ಅಡಿ ಎತ್ತರದ ಮೂಲ ಮೂರ್ತಿಯನ್ನೂ ಪ್ರತಿಷ್ಠಾಪನೆಗೆ ಸಿದ್ಧ ಮಾಡಲಾಗಿತ್ತು. ಹೊಸ ಉಂಡವಾಡಿಯ ಹೊರವಲಯದಲ್ಲಿ ಶ್ರೀ ಶನೇಶ್ವರ ದೇವಸ್ಥಾನ ನಿರ್ಮಿಸಲಾಗಿದ್ದು, ಅದರ ಪಕ್ಕದಲ್ಲೇ ಶನಿಯ ಸಹೋದರ ಯಮರಾಜನಿಗೂ ದೇವಸ್ಥಾನ ನಿರ್ಮಾಣಗೊಳ್ಳುತ್ತಿತ್ತು. ಈ ದೇವಸ್ಥಾನ ಒಳಾವರಣ 12×12 ಅಡಿ ಇದ್ದು ಈಗಷ್ಟೇ ಕೆಲವು ತಿಂಗಳ ಹಿಂದಷ್ಟೇ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಪೂರ್ಣಗೊಳ್ಳುವ ಹಂತಕ್ಕೆ ತಲುಪಿತ್ತು. ಆನಂತರ ಯಮರಾಜನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಕ್ಕೆ ಸಿದ್ಧತೆಯನ್ನೂ ನಡೆಸಲಾಗಿತ್ತು. ಅಷ್ಟರಲ್ಲಿ ಜಾಗ ವಿವಾದ ಸಂಬಂಧ ಇಡೀ ಯಮರಾಜನ ದೇಗುಲ ನೆಲಸಮ ಮಾಡಲಾಗಿದೆ.
ವಿವಾದವೇನು: ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿ ಹೊಂಗಳ್ಳಿ ಸರ್ವೆ ನಂ.291ರ ಪೈಕಿ ಪಿ-42ರಲ್ಲಿ 13ಗುಂಟೆ ಭೂಮಿಯನ್ನು ಹಾಗೂ ಸೂರ್ಯನಾರಾಯಣ ಎಂಬುವರಿಂದ ಆತನ ಪತ್ನಿಗೆ ದಾನವಾಗಿ ಬಂದಿದ್ದ ಸ್ವತ್ತು ಸ.ನಂ.291ರ ಪೈಕಿ ಪಿ43ರಲ್ಲಿನ 100×83 ಅಡಿ ಮತ್ತು 52×43 ಅಡಿಯ ಎರಡು ನಿವೇಶನಗಳನ್ನು ಶ್ರೀ ಕ್ಷೇತ್ರ ಶನಿಮಠದ ಧರ್ಮದರ್ಶಿ ಡಾ.ಕೆ.ಎನ್.ರಾಜು ಖರೀದಿಸಿದ್ದರು. ನಂತರದಲ್ಲಿ 100×83ಅಡಿ ನಿವೇಶನದಲ್ಲಿ ದೇಗುಲ ನಿರ್ಮಿಸಿದ್ದರು ಎನ್ನಲಾಗಿದೆ.
ನಿವೇಶನ ಮಾರಾಟ ಮಾಡಿದ ಅನಿತಾ ಪತಿ ಸೂರ್ಯನಾರಾಯಣ ದೇವಸ್ಥಾನ ನಿರ್ಮಾಣ ಮಾಡಿರುವ ಜಾಗ ನಿಮ್ಮದಲ್ಲ. ಅದು ಬೇರೆಯವರಿಗೆ ಮಾರಾಟವಾಗಿದೆ ಎಂದು ತಕರಾರು ಮಾಡಿ ಗೊಂದಲ ಸೃಷ್ಟಿಸಿ ದೌರ್ಜನ್ಯವೆಸಗಿದ್ದಾರೆ ಎಂದು ಧರ್ಮದರ್ಶಿ ಡಾ.ಕೆ.ಎನ್.ರಾಜು ಉದಯವಾಣಿಗೆ ತಿಳಿಸಿದರು. ಕ್ರಯ ಮಾಡುವ ಸಮಯದಲ್ಲಿ ದೇವಸ್ಥಾನ ನಿರ್ಮಿಸಿರುವ ಜಾಗವನ್ನು ತೋರಿಸಿ ನೋಂದಾಯಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ನಾವೇ ಸ್ವಾಧೀನದಲ್ಲಿದ್ದು ಯಾವುದೇ ತಕರಾರುಗಳು ಇರಲಿಲ್ಲ ಎಂದೂ ತಿಳಿಸಿದರು.
ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿ ಹೊಂಗಳ್ಳಿ ಸರ್ವೆ ನಂ.291ರ ಪೈಕಿ ಪಿ-43ರಲ್ಲಿ 3 ಎಕರೆ 25 ಗುಂಟೆ ಕೃಷಿ ಭೂಮಿಯನ್ನು ಎನ್.ವಿ. ಕೃಷ್ಣಯ್ಯ ರವರ ಹೆಸರಿನಲ್ಲಿರುವ ಭೂಮಿಗೆ ಎನ್.ವಿ. ಕೃಷ್ಣಯ್ಯ ಪುತ್ರ ಸೂರ್ಯನಾರಾಯಣರವರು ಜಿಪಿಎ ಹಕ್ಕನ್ನು ಹೊಂದಿದ್ದು, ಈ ಭೂಮಿಗೆ ಸರ್ಕಾರದಿಂದ ಯಾವುದೇ ಅನುಮೋದನೆಯಾಗಲೀ ಹಾಗೂ ಪರವಾನಗಿಯಾಗಲಿ ಪಡೆದು ಭೂ ಪರಿವರ್ತನೆಗೊಳಿಸದೆ ಕಾನೂನು ಬಾಹಿರವಾಗಿ ಸೈಟ್‌ಗಳನ್ನು ರಚಿಸಿ ಬಡಾವಣೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.