ಉಡುಪಿ: ದೇಸೀಯವಾಗಿ ಅಭಿವೃದ್ಧಿಪಡಿಸಿದ ಟೇಬಲ್ ಟಾಪ್ ಎಕ್ಸಲರೇಟರ್ (ಟಿಟಿಎ) ಮಣಿಪಾಲ ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನೇಚುರಲ್ ಸೈನ್ಸಸ್‌ನಲ್ಲಿ (ಎಂಸಿಎನ್‌ಎಸ್) ಕಾರ್ಯವನ್ನು ಆರಂಭಿಸಿದೆ.
ಹೊಸದಿಲ್ಲಿಯ ಐಯುಎಸಿ (ಅಂತರ್ ವಿ.ವಿ. ಎಕ್ಸಲರೇಟರ್ ಸೆಂಟರ್) ಇದನ್ನು ವಿನ್ಯಾಸಗೊಳಿಸಿದೆ. ಟಿಟಿಎಯನ್ನು ಹೊಂದಿದ ಪ್ರಥಮ ವಿ.ವಿ., ದಕ್ಷಿಣ ಭಾರತದ ಪ್ರಥಮ ಟಿಟಿಎ ಎಂಬ ಹೆಗ್ಗಳಿಕೆಗೆ ಮಾಹೆ ಪಾತ್ರವಾಗಿದೆ.
ಇದೊಂದು ಸಣ್ಣ ಉಪಕರಣವಾಗಿದ್ದು ಇದು ನ್ಯೂಕ್ಲಿಯರ್ ವಿಜ್ಞಾನ, ಫಿಸಿಕ್ಸ್ ಪ್ರಾಪರ್ಟೀಸ್, ರಸಾಯನಶಾಸ್ತ್ರ, ಭೌತಶಾಸ್ತ್ರ, ನ್ಯಾಚುರಲ್ ಸೈನ್ಸ್ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಉಪಯುಕ್ತವಾಗಿದೆ.
ಈ ಯೋಜನೆಯನ್ನು ಎಂಸಿಎನ್‌ಎಸ್‌ನ ನ್ಯೂಕ್ಲಿಯರ್ ಫಿಸಿಕ್ಸ್ ತಂಡ ಐಯುಎಸಿ ತಾಂತ್ರಿಕ ಸಹಕಾರದಿಂದ ಕೈಗೆತ್ತಿಕೊಂಡು ಯಶಸ್ವಿಯಾಗಿದೆ. ಮಣಿಪಾಲ ತಂಡದ ನೇತೃತ್ವವನ್ನು ಪ್ರಾಧ್ಯಾಪಕ ಡಾ|ಪ್ರಶಾಂತಕುಮಾರ್ ರಥ್ ವಹಿಸಿದ್ದರು. ಇವರಿಗೆ ಸಹಾಯಕರಾಗಿ ವಿನ್ಯಾಸ ಎಂಜಿನಿಯರ್ ಪ್ರತ್ಯೂಷ ದಿತ್ತಕವಿ ಅವರು ಐಯುಎಸಿಯ ಡಾ|ಸಫÌನ್, ಡಾ| ರಾಜಕುಮಾರ್ ಅವರ ನೆರವಿನಿಂದ ಕಾರ್ಯನಿರ್ವಹಿಸಿದ್ದರು. ನ್ಯೂಕ್ಲಿಯರ್ ಫಿಸಿಕ್ಸ್ ತಂಡವು ಪ್ರಸ್ತುತ ಹೆವ್ವಿ ಇಲೆಮೆಂಟ್ ಸಿಂತೆಸಿಸ್ ಮತ್ತು ನ್ಯೂಟ್ರಾನ್ ಫಿಸಿಕ್ಸ್ ನಲ್ಲಿ ಪರಿಣತಿ ಹೊಂದಿದೆ.
“ನಾವೀಗ ಎಕ್ಸಲರೇಟರ್ ವಿಜ್ಞಾನ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದ್ದೇವೆ. ಭವಿಷ್ಯದಲ್ಲಿ ನಮ್ಮ ಆರ್ ಆ್ಯಂಡ್ ಡಿ ವಿಭಾಗವು ಸೀಮಾತೀತವಾಗಿ ಕಾರ್ಯನಿರ್ವಹಿಸಲಿದೆ’ ಎಂದು ವಿ.ವಿ. ಕುಲಪತಿ ಡಾ| ಎಚ್.ವಿನೋದ ಭಟ್ ತಿಳಿಸಿದ್ದಾರೆ.
ಎಂಸಿಎನ್‌ಎಸ್ ನಿರ್ದೇಶಕಿ ಡಾ| ಮೋಹನಿ ಗುಪ್ತ ಅವರು ಐಯುಎಸಿ ನಿರ್ದೇಶಕ ಡಾ|ಕಂಜಿಲಾಲ್ ಅವರಿಗೆ ತಾಂತ್ರಿಕ ಸಹಕಾರ ಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಎಕ್ಸಲರೇಟ್‌ರ್ ಮಣಿಪಾಲದಲ್ಲಿ ಬೋಧನೆ ಮತ್ತು ಸಂಶೋಧನೆ ಎರಡರಲ್ಲೂ ಸಹಕಾರಿಯಾಗಲಿದೆ ಎಂದು ಡಾ|ರಥ್ ತಿಳಿಸಿದ್ದಾರೆ.