ನಂಜನಗೂಡು: ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತಚಲಾಯಿಸಿ ಸರ್ಕಾರಿ ಬಾಲಕರ ಪಪೂ ಕಾಲೇಜಿನ ಮತಗಟ್ಟೆಯಿಂದ ಹೊರಬಂದ ವಿನುತಾ, ಅನುಪಮ ಹಾಗೂ ಮಮತಾ ಉದಯವಾಣಿಯೊಂದಿಗೆ ಮಾತನಾಡಿ ಮೊದಲ ಮತದಾನ ಅತ್ಯಂತ ಖುಷಿ ಕೊಟ್ಟಿದೆ ಎಂದರು.
ಏಕೆ ಎಂದಿದ್ದಕ್ಕೆ ದೇಶದ ಆಡಳಿತ ನಡೆಸಲು ನಾವು ಸಹ ನಮ್ಮ ಹಕ್ಕು ಚಲಾಯಿಸಿದ್ದೇವೆ. ನಮ್ಮ ಮತಪಡೆದವರು ಪ್ರಾಮಾಣಿಕತೆಯಿಂದ ನಡೆದುಕೊಂಡು ಕ್ಷೇತ್ರದ ಅಭಿವೃದ್ಧಿ ಸಾಧಿಸಿದಾಗ ಮಾತ್ರ ನಮ್ಮ ಮತ ಸಾರ್ಥಕ ಎನ್ನುತ್ತ ಅಲ್ಲಿಂದ ಹೊರನಡೆದರು.
ಧೀಮಂತ ನಾಯಕತ್ವಕ್ಕೆ ವೋಟು ಮಾಡಿದೆ: ಅಭಿಲಾಷ ಮೈಸೂರು ನಗರದ ವಾಸಿ ಇಲ್ಲಿನ ಮತದಾರ ಮೊದಲ ಮತದಾನ ಮಾಡಿ ಬಂದು ಮಾತನಾಡಿ ಧೀಮಂಥ ನಾಯಕತ್ವಕ್ಕೆ ವೋಟು ಮಾಡಿದೆ. ಮತ ಚಲಾಯಿಸಲೆಂದೇ ಮೈಸೂರಿನಿಂದ ಬಂದೆ, ನನ್ನ ಮತ ಇಲ್ಲಿ ಸೇರ್ಪಡೆಯಾಗಿದೆ ಎಂದು ತಿಳಿಸಿದರು.
ಹಣಕ್ಕೇ ತಮ್ಮನ್ನು ಮಾರಿ ಕೊಳ್ಳದಿರಲಿ: ತಂದೆ ತಾಯಿಯರೊಂದಿಗೆ ಮತಗಟ್ಟೆಗೆ ಬಂದು ಇದೇ ಪ್ರಥಮ ಬಾರಿಗೆ ಮತಚಲಾಯಿಸಿದ ಮೈಸೂರು ಎನ್ ಐ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಮಾತನಾಡುತ್ತ ನಾನೇನೂ ಮತ ನೀಡಿ ಬಂದಿದೇªನೆ ನನ್ನ ಮತ ಪಡೆದು ಆಯ್ಕೆಯಾದವರು ಹಣಕ್ಕೆ ತಮ್ಮನ್ನು ಮಾರಿಕೊಳ್ಳದೆ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿ ಕೊಂಡಾಗ ಮಾತ್ರ ನನ್ನ ಮತದಾನ ಹಾಗೂ ನಾನು ಧನ್ಯ ಎಂದು ಹೇಳಿದರು.
ಮತಚಲಾಯಿಸಿ ಹೊರಬಂದ ಗುರುಸಿದ್ದಮ್ಮ ಮಾತನಾಡಿ ಅನೇಕ ವರ್ಷಗಳಿಂದ ನಾವೆಲ್ಲ ಬೇರೆ ಬೇರೆಯಾಗಿದ್ದವರು, ಈ ಬಾರಿ ಒಂದಾಗಿ ಮತ ಚಲಾಯಿಸಿದ್ದೇವೆ ಇನ್ನು ಮುಂದೆ ನಾವೆಲ್ಲ ಗ್ರಾಮದಲ್ಲಿ ಒಟ್ಟಾಗಿ ಬಾಳುತ್ತೇವೆ ಎಂದರು.