Advertisement

ಆಗಸ್ಟ್‌ ವೇಳೆಗೆ ಓಕಳಿಪುರ ಅಷ್ಟಪಥ ಯೋಜನೆ ಮೊದಲ ಹಂತ ಪೂರ್ಣ

12:49 PM Apr 11, 2017 | |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಓಕಳಿಪುರ ಅಷ್ಟಪಥ ಯೋಜನೆಯ ಮೊದಲ ಹಂತದ ಕಾಮಗಾರಿ ಆಗಸ್ಟ್‌ ವೇಳೆಗೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

Advertisement

ಸರ್ಕಾರ ಹಾಗೂ ಬಿಬಿಎಂಪಿ ನಗರದ ನಾನಾ ಕಡೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಸೋಮವಾರ ಮುಂಜಾನೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಬಿಡಿಎ, ಬಿಬಿಎಂಪಿ ಹಾಗೂ ನಗರೋತ್ಥಾನದಡಿ ಕಳೆದ ನಾಲ್ಕು ವರ್ಷಗಳಲ್ಲಿ ಭಾರಿ ಮೊತ್ತದ ಯೋಜನೆಗಳನ್ನು ಕೈಗೊಂಡಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಹಿಂದಿನ ಯಾವ ಸರ್ಕಾರಗಳು ನೀಡಿರಲಿಲ್ಲ ಎಂದು ತಿಳಿಸಿದರು.

ಭೂಸ್ವಾಧೀನ, ರಕ್ಷಣಾ ಇಲಾಖೆಯ ಜಾಗ ಹಾಗೂ ಪೈಪ್‌ಲೈನ್‌ ಬದಲಾವಣೆ ವೇಳೆ ಕಾಮಗಾರಿ ವಿಳಂಬವಾಗಿದ್ದು, ಉಳಿದಂತೆ ಎಲ್ಲ ಭಾಗಗಳಲ್ಲಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಕಾಮಗಾರಿಗಳನ್ನು ಪೂರ್ಣಗಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಕಾಮಗಾಗಳ ನಿರಂತರ ಪರಿಶೀಲನೆ ನಡೆಸಿ ಶೀಘ್ರವಾಗಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುತ್ತಿದೆ ಎಂದು ಹೇಳಿದರು. 

ಓಕಳಿಪುರ ಬಳಿ 102 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಷ್ಟಪಥ ನಿರ್ಮಾಣ ಯೋಜನೆಯ ಮೊದಲ ಹಂತ ತಿಂಗಳೊಳಗೆ ಮುಗಿಯಲಿದ್ದು, ಆಗಸ್ಟ್‌ ತಿಂಗಳ ವೇಳೆಗೆ ಆಯ್ದ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಉಳಿದಂತೆ ನಗರದಲ್ಲಿ ಪ್ರಗತಿಯಲ್ಲಿರುವ ಬಹುತೇಕ ಕಾಮಗಾರಿಗಳನ್ನು ವರ್ಷದೊಳಗೆ ಮುಗಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 

ಅರಮನೆ ರಸ್ತೆ ವಿಸ್ತರಣೆ: ಚಾಲುಕ್ಯ ವೃತ್ತದಿಂದ ಹೆಬ್ಟಾಳದ ಎಸ್ಟೀಮ್‌ ಮಾಲ್‌ವರೆಗೆ ಉಕ್ಕಿನ ಸೇತುವೆ ನಿರ್ಮಾಣವಾಗಿದ್ದರೆ ಸಂಚಾರ ದಟ್ಟಣೆ ಕಡಿಮೆಯಾಗುತ್ತಿತ್ತು. ಆದರೆ ಯೋಜನೆ ಕೈಬಿಟ್ಟಿರುವುದರಿಂದ ಪರ್ಯಾಯವಾಗಿ ಅರಮನೆ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪರಿಹಾರ ರೂಪದಲ್ಲಿ ನೂತನ ಟಿಡಿಆರ್‌ ನೀಡಲಾಗುವುದು ಎಂದು ಸಚಿವ ಜಾರ್ಜ್‌ ಮಾಹಿತಿ ನೀಡಿದರು. 

Advertisement

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆಯೂ ಸರ್ಕಾರದ ಮುಂದಿದ್ದು, ಇದಕ್ಕೆ ಸಾಮಾನ್ಯ ರಸ್ತೆಗಳಿಗಿಂತ ಮೂರು ಪಟ್ಟು ಅಧಿಕ ವೆಚ್ಚವಾಗಲಿದೆ. ಇದರೊಂದಿಗೆ ಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ 350 ಕೋಟಿ ರೂ. ಆರ್ಥಿಕ ನೆರವು ನೀಡಲು ಸಮ್ಮತಿಸಿದೆ ಎಂದು ತಿಳಿಸಿದರು. 

ಅಧಿಕಾರಿಗಳಿಗೆ ತರಾಟೆ!: ರಾಜಾಜಿನಗರದ ವಿವೇಕಾನಂದ ಕಾಲೇಜು ಬಳಿಯ ಕಾಮಗಾರಿ ಪರಿಶೀಲಿಸಿದ ಸಚಿವ ಜಾರ್ಜ್‌, 2014ರಲ್ಲಿ ಆರಂಭವಾದ ಕಾಮಗಾರಿ, 2016 ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೇವಲ ಒಂದು ಅಂಡರ್‌ಪಾಸ್‌ ಸಿದ್ಧವಾಗಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ಗುತ್ತಿಗೆದಾರರು ಏಪ್ರಿಲ್‌ ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದರು. ಅದರೀಗ ಸೆಪ್ಟೆಂಬರ್‌ ಎನ್ನುತ್ತಿದ್ದಾರೆ. ಜಲಮಂಡಳಿ, ಬೆಸ್ಕಾಂ ಸೇವಾ ಕೊಳವೆ, ಕೇಬಲ್‌ ಸ್ಥಳಾಂತರದಲ್ಲಿನ ಸಮಸ್ಯೆ ನಿವಾರಣೆಯಾದರೂ ಗುತ್ತಿಗೆದಾರರು ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳದೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಜಾರ್ಜ್‌, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
 
ಚಹಾ ಸೇವಿಸಿದ ಜಾರ್ಜ್‌: ನಂದಿನಿ ಬಡಾವಣೆಯ ಲಗ್ಗೆರೆ ಕೊಳೆಗೇರಿಯೊಂದರ ಬಳಿಯ ಬೇಕರಿಯೊಂದರಲ್ಲಿ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಜಾರ್ಜ್‌ ಚಹಾ ಸೇವಿಸಿದರು. ನಂತರ ಜೈಭುವನೇಶ್ವರಿ ನಗರದ ಮೇಲ್ಸೇತುವೆ ಹಾಗೂ ಲಕ್ಷ್ಮಿದೇವಿ ನಗರದಲ್ಲಿ ಬೃಹತ್‌ ಮಳೆನೀರುಗಾಲುವೆ ಪರಿಶೀಲಿಸಿದರು.

ಪರಿಶೀಲನೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕ ಮುನಿರತ್ನ, ಮೇಯರ್‌ ಜಿ.ಪದ್ಮಾವತಿ, ಉಪಮೇಯರ್‌ ಎಂ.ಆನಂದ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್‌ ಹಾಜರಿದ್ದರು.

ಜಾರ್ಜ್‌ ಪರಿಶೀಲನೆ ನಡೆಸಿದ ಸ್ಥಳಗಳು
ಓಕಳಿಪುರ ಎಲಿವೇಟೆಡ್‌ ಕಾರಿಡಾರ್‌, ರಾಜಾಜಿನಗರದ ಕಾರ್ಡ್‌ ರಸ್ತೆ ಕಾಮಗಾರಿ, ನಗರೋತ್ಥಾನ ಯೋಜನೆಯಡಿ ಪೀಣ್ಯ ಸರ್ಕಾರಿ ಪದವಿ ಕಾಲೇಜು ಕಾಮಗಾರಿ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೊಳೆಗೇರಿ ನಿವಾಸಿಗಳಿಗೆ ರಾಜೀವ್‌ ಗಾಂಧಿ ಆವಾಸ್‌ ವಸತಿ ಯೋಜನೆಯಡಿ 3 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ, ಕಂಠೀರವ ಸ್ಟುಡಿಯೋ ಬಳಿ ಪೀಣ್ಯ ಕೈಗಾರಿಕಾ ಪ್ರದೇಶದಿಂದ ಮಹಾಲಕ್ಷ್ಮೀ ಬಡಾವಣೆಗೆ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿ,

ಭುವನೇಶ್ವರಿ ನಗರ ಬಳಿ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಮೇಲ್ಸೇತುವೆ, ಮಾಗಡಿ ರಸ್ತೆಯ ಅಂಡರ್‌ ಪಾಸ್‌, ಬಸವೇಶ್ವರ ಬಸ್‌ ನಿಲ್ದಾಣದ ಮಾರ್ಗವಾಗಿ ಜಾಲಹಳ್ಳಿ ಕ್ರಾಸ್‌ನಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ಜಾರ್ಜ್‌ ಪರಿಶೀಲಿಸಿದರು.

ನೋಟು ಅಮಾನ್ಯದಿಂದ ಬಿಡಿಎ ವತಿಯಿಂದ ಪರಿಹಾರ ಹಣ ನೀಡಲು ವಿಳಂಬವಾಗಿದೆ. ಹೀಗಾಗಿ ಡಾ.ರಾಜ್‌ಕುಮಾರ್‌ ಸಮಾಧಿ ಬಳಿಯ ಕಾಮಗಾರಿ ವಿಳಂಬವಾಗಿದೆ. ಡಿಪಿಆರ್‌, ಟೆಂಡರ್‌, ಮರು ಟೆಂಡರ್‌ ಹೀಗೆ ಹಲವು ಹಂತಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ.
-ಕೆ.ಜೆ.ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next