ಆರ್.ಜೆ.ರಾಜೇಶ್ ಹೀರೋ ಆಗಿದ್ದು, “ಫಸ್ಟ್ ಲವ್’ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಈ ಶುಕ್ರವಾರ ಚಿತ್ರ ತೆರೆಗೆ ಬರುತ್ತಿದೆ. ಸಹಜವಾಗಿಯೇ ರಾಜೇಶ್‌ಗೂ ಸಿನಿಮಾ ಮೇಲೆ ಸಾಕಷ್ಟು ಕುತೂಹಲವಿದೆ. ಯಾಕೆಂದರೆ, ಇದು ಅವರ ಮೊದಲ ಸಿನಿಮಾ. ಚಿತ್ರ ತಡವಾಗಿದೆ ನಿಜ. ಆದರೆ, ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಅಂತ ಕಾದಿದ್ದ ರಾಜೇಶ್‌ಗೆ ಈಗ ಖುಷಿಯಾಗಿದೆ. ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುವ ರಾಜೇಶ್, “ಒಂದು ಸಿನಿಮಾ ಮಾಡುವಾಗ ಒಂದಷ್ಟು ಸಮಸ್ಯೆಗಳು ಬರೋದು ಸಹಜ. ಎಲ್ಲಾ ಸಮಸ್ಯೆ ದಾಟಿ ಈಗ ಚಿತ್ರ ರಿಲೀಸ್ ಆಗುತ್ತಿದೆ.
ಜಗನ್‌ಮೋಹನ್ ಅವರು ಕೊನೆಯ ಹಂತದಲ್ಲಿ ನಮ್ಮೊಂದಿಗಿದ್ದು, ಸಹಕಾರ ನೀಡುತ್ತಿದ್ದಾರೆ. ಇನ್ನು, ಇದೊಂದು ರಿಯಲ್ ಸ್ಟೋರಿ ಇಟ್ಟುಕೊಂಡು ಮಾಡಿರುವ ಚಿತ್ರ. ಹಾಗಾಗಿ ಕೊನೆಯ 25 ನಿಮಿಷ ಬರುವ ಕ್ಲೈಮ್ಯಾಕ್ಸ್‌ನಲ್ಲಿ ರಿಯಲ್ ಸ್ಟೋರಿಯಲ್ಲಿ ಏನೆಲ್ಲಾ ಇತ್ತೋ, ಅದನ್ನೇ ಇಲ್ಲೂ ಅಳವಡಿಸಿಕೊಳ್ಳಲಾಗಿದೆ. ನನಗಿಲ್ಲಿ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆ. ಒಂದು 19 ವರ್ಷದ ಹುಡುಗನ ಪಾತ್ರವಿದ್ದರೆ, ಇನ್ನೊಂದು ಯುವಕನ ಪಾತ್ರ ನಿರ್ವಹಿಸಿದ್ದೇನೆ. ಇನ್ನು, ಚಿತ್ರಕ್ಕೆ ಶ್ರೀಧರ್ ಒಳ್ಳೆಯ ಸಂಗೀತ ನೀಡಿದ್ದಾರೆ. ನಿಜಕ್ಕೂ ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿ ನನಗಿದೆ’ ಎಂದರು ರಾಜೇಶ್.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಕವಿತಾಗೌಡ ಹಾಗೂ ಸ್ನೇಹಾ. ಈ ಪೈಕಿ ಕವಿತಾಗೌಡ ಇನ್ನೊಂದು ಚಿತ್ರದಲ್ಲಿ ಬಿಜಿ ಇದ್ದುದರಿಂದ ಅವರು ಸಿನಿಮಾ ಮಾತುಕತೆಯಲ್ಲಿ ಹಾಜರಿರಲಿಲ್ಲ. ಸ್ನೇಹಾ ಅವರಿಗೆ ಇದು ಮೊದಲ ಚಿತ್ರ. “ಈ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿದೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಟ್ಟಿಲ್ಲ’ ಎಂಬುದು ಸ್ನೇಹಾ ಮಾತು.
ಅಶೋಕ್ ಓ.ಲಮಾಣಿ ನಿರ್ಮಾಣದ ಈ ಚಿತ್ರ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರಲ್ಲೊಬ್ಬರಾದ ಜಗನ್‌ಮೋಹನ್ ರೆಡ್ಡಿ ಅವರು ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇಟ್ಟುಕೊಂಡಿದ್ದಾರಂತೆ. ಅವರಿಗೆ ಈ ಚಿತ್ರವನ್ನು ಜನರು ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆಯಂತೆ. ಚಿತ್ರದ ಬಜೆಟ್ ಅವರು ಅಂದುಕೊಂಡಿದ್ದಕ್ಕಿಂತಲೂ ಸ್ವಲ್ಪ ಜಾಸ್ತಿಯಾಗಿದ್ದರೂ, ಸಿನಿಮಾ ನಿರೀಕ್ಷೆ ಮೀರಿ ಮೂಡಿಬಂದ ಖುಷಿ ಅವರದು.
ನಿರ್ದೇಶಕ ಮಲ್ಲಿ ಅವರು, “ಇದೊಂದು ಮ್ಯೂಸಿಕಲ್ ಲವ್‌ಸ್ಟೋರಿ. ವಿಜಯಪುರದಲ್ಲಿ ನಡೆದ ಒಂದು ಘಟನೆ ಆಧರಿಸಿ ಈ ಚಿತ್ರ ಮಾಡಿದ್ದೇನೆ. ಒಂದು ಘಟನೆ ಕಥೆಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಕ್ಕೆ ಸಾರ್ಥಕ ಎನಿಸಿದೆ. ಯಾಕೆಂದರೆ, ಒಳ್ಳೆಯ ಚಿತ್ರವಾಗಿ ಮೂಡಿಬಂದಿದೆ’ ಎನ್ನುತ್ತಾರೆ ಮಲ್ಲಿ. ಸುರೇಶ್ ಬಾಬು ಕ್ಯಾಮೆರಾ ಹಿಡಿದರೆ, ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಸಂಗೀತ ಕೊಟ್ಟಿದ್ದಾರೆ.