ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಸಂಕ್ರಾಂತಿಗೆ ಬಿಡುಗಡೆ ಮಾಡಲು ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರದ ವಿದ್ಯಮಾನ ಗಮನಿಸಿ ಸಂಕ್ರಾಂತಿ ವೇಳೆಗೆ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಕುಮಾರಸ್ವಾಮಿಯವರು ಈಗಾಗಲೇ ಸಿದ್ಧಪಡಿಸಿರುವ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆ ನಡೆದು ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಲು ಸಮ್ಮತಿ ನೀಡಲಾಯಿತು. 224 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಘೋಷಿಸುವ ಅಧಿಕಾರ ಎಚ್.ಡಿ. ದೇವೇಗೌಡ ಅವರಿಗೆ ನೀಡಲಾಯಿತು.
ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದು ಹಾಗೂ ಅನಿವಾರ್ಯವಾದರೆ ಸಣ್ಣಪುಟ್ಟ ಪಕ್ಷಗಳೊಂದಿಗೆ ಹೊಂದಾಣಿಕೆ
ಮಾಡಿಕೊಳ್ಳುವ ಕುರಿತಂತೆ ತೀರ್ಮಾನಿಸಲಾಯಿತು. ಪಕ್ಷದ ಪ್ರಣಾಳಿಕೆ ರಚಿಸಲು ಎಚ್. ವಿಶ್ವನಾಥ್, ಡಾ.ಸುಬ್ರಹ್ಮಣ್ಯ ಹಾಗೂ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರನ್ನೊಳಗೊಂಡ ಮೂವರ ಸಮಿತಿ ರಚಿಸಲಾಯಿತು. ಕೋರ್ ಕಮಿಟಿ ಸದಸ್ಯರಾದ ಕುಪೇಂದ್ರರೆಡ್ಡಿ, ಪಿ.ಜಿ.ಆರ್. ಸಿಂಧ್ಯ, ಬಿ.ಎಂ.ಫಾರೂಕ್, ಬಂಡೆಪ್ಪ ಕಾಶಂಪುರ್, ಎಚ್.ವಿಶ್ವನಾಥ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.