2010ರಲ್ಲಿ ವೆಸ್ಟ್ ಇಂಡೀಸ್ ಆತಿಥ್ಯ ದಲ್ಲಿ ನಡೆದ 3ನೇ ಟಿ20 ವಿಶ್ವಕಪ್ ವಿಶೇಷವೆಂದರೆ, ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ ಚಾಂಪಿಯನ್ ಎನಿಸಿದ್ದು. ಇದು ಇಂಗ್ಲೆಂಡಿಗೆ ಒಲಿದ ಮೊದಲ ಐಸಿಸಿ ವಿಶ್ವಕಪ್ ಟ್ರೋಫಿಯಾಗಿತ್ತು. 50 ಓವರ್‌ಗಳ ವಿಶ್ವಕಪ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಲೇ ಬಂದ ಆಂಗ್ಲರ ಪಡೆಗೆ ಚುಟುಕು ವಿಶ್ವಕಪ್ ದೊಡ್ಡ ಮಟ್ಟದ ಸಂಭ್ರಮ ಮೂಡಿಸಿತ್ತು.
ಫೈನಲ್‌ನಲ್ಲಿ ಎಡವಿದ ಆಸೀಸ್
ಸೆಮಿ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಹಾಗೂ ಪಾಕಿಸ್ಥಾನವನ್ನು ಮಣಿ ಸಿದ ಆಸ್ಟ್ರೇಲಿಯ ಫೈನಲ್‌ಗೆ ಏರಿದವು.
ಬ್ರಿಜ್‌ಟೌನ್‌ನಲ್ಲಿ ಸಾಗಿದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ 6 ವಿಕೆಟಿಗೆ 147 ರನ್ ಗಳಿಸಿತು. ಈ ಗುರಿಯನ್ನು ಇಂಗ್ಲೆಂಡ್ ಮೂರೇ ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿ ಚಾಂಪಿಯನ್ ಆಯಿತು. ಆಸ್ಟ್ರೇಲಿಯದ ಮೊದಲ ಟಿ20 ವಿಶ್ವಕಪ್ ಗೆಲ್ಲುವ ಯೋಜನೆ ತಲೆಕೆಳಗಾಯಿತು. ಕಾಂಗರೂಗಳಿಗೆ ಇನ್ನೂ ಟಿ20 ವಿಶ್ವಕಪ್ ಮರೀಚಿಕೆಯೇ ಆಗಿ ಉಳಿದಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-4 ವಿಕೆಟಿಗೆ 147 (ಡೇವಿಡ್ ಹಸ್ಸಿ 59, ವೈಟ್ 30, ಕ್ಲಾರ್ಕ್ 27, ಸೈಡ್‌ಬಾಟಮ್ 26ಕ್ಕೆ 2). ಇಂಗ್ಲೆಂಡ್-17 ಓವರ್‌ಗಳಲ್ಲಿ 3 ವಿಕೆಟಿಗೆ 148 (ಕೀಸ್ವೆಟರ್ 63, ಕೆವಿನ್ ಪೀಟರ್ಸನ್ 47, ಸ್ಮಿತ್ 21ಕ್ಕೆ 1, ಮಿಚೆಲ್ ಜಾನ್ಸನ್ 27ಕ್ಕೆ 1). ಪಂದ್ಯಶ್ರೇಷ್ಠ: ಕ್ರೆಗ್ ಕೀಸ್ವೆಟರ್. ಸರಣಿಶ್ರೇಷ್ಠ: ಕೆವಿನ್ ಪೀಟರ್ಸನ್.
ಭಾರತದ ವೈಫಲ್ಯ
ಕೂಟದ 12 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಭಾರತ “ಸಿ’ ಗುಂಪಿನಲ್ಲಿತ್ತು. ಭಾರತ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್-8ರ ಘಟ್ಟಕ್ಕೇರಿತು. ಅಲ್ಲಿ ಆಸ್ಟ್ರೇಲಿಯ, ಶ್ರೀಲಂಕಾ, ವೆಸ್ಟ್ ಇಂಡೀಸ್‌ನೊಂದಿಗೆ “ಎಫ್’ ಗುಂಪಿನಲ್ಲಿತ್ತು. ಆದರೆ ಈ ಮೂರೂ ತಂಡಗಳ ವಿರುದ್ಧ ಸೋತು ಕೂಟದಿಂದ ಹೊರಬಿತ್ತು.