ಈ ಕಾರ ಹುಣ್ಣಿಮೆ ಮುಗಿದ ಮೇಲೆಯೇ ಮಳೆಗಾಲ ಆರಂಭವಾಗುವುದು. ಇದಕ್ಕೆ ಬೇಂದ್ರೆ ಅಜ್ಜ ಮೇಘದೂತ ಕವನದಲ್ಲಿ ಕಾರ ಹುಣ್ಣಿಮೆಯನ್ನು ಹೀಗೆ ಬಣ್ಣಿಸಿದ್ದಾರೆ.
“ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ’
ಬಿರು ಬೇಸಗೆ ಕಳೆದು ಮುಂಗಾರು ಮನೆ ಬಾಗಿಲಿಗೆ ಬರುವ ಹಬ್ಬವೇ ಕಾರ ಹುಣ್ಣಿಮೆ. ಇದು ಮುಂಗಾರು ಆರಂಭದ ಮೊದಲ ಹಬ್ಬ. ಜತೆಗೆ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿದೆ. ಬೇಸಗೆಯಲ್ಲಿ ಹೊಲವನ್ನು ಉತ್ತು, ಹದ ಮಾಡಿದ ಎತ್ತುಗಳಿಗೆ ಈ ಹಬ್ಬದ ಅನಂತರ ವಿಶ್ರಾಂತಿ ನೀಡಲಾಗುತ್ತದೆ. ಕಾರು ಹುಣ್ಣಿಮೆಯೂ ಮನುಷ್ಯ ಮತ್ತು ಪಶುಗಳ ನಡುವಿನ ಅನೂಹ್ಯ ಸಂಬಂಧವನ್ನು ತಿಳಿಸುತ್ತದೆ. ಅಲ್ಲದೇ ಕೃಷಿ ಸಂಸ್ಕೃತಿಯ ದ್ಯೋತಕವಾಗಿದೆ.
ಕಾರ ಹುಣ್ಣಿಮೆಯ ದಿನದಂದು ಸೂರ್ಯನ ತೇಜೋರಶ್ಮಿ ಕಿರಣಗಳನ್ನು ಸ್ವಾಗತಿಸಿದ ಬಳಿಕ ಎತ್ತುಗಳನ್ನು ಸ್ನಾನಕ್ಕೆಂದು ಹಳ್ಳ, ನದಿ, ಕೆರೆಗೆ ಕರೆದೊಯ್ಯಲಾಗುತ್ತದೆ. ಎತ್ತುಗಳಿಗೆ ಸ್ನಾನ ಮಾಡಿಸಿ, ವಿಧ ವಿಧವಾದ ಬಣ್ಣಗಳಲ್ಲಿ ಗುಲಾಲ್ ಹಚ್ಚಲಾಗುತ್ತದೆ.
ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಮನೆಯವರೆಲ್ಲ ಸೇರಿ ಎತ್ತಿಗೂ ಪೂಜೆ ಮಾಡುತ್ತಾರೆ. ಬಳಿಕ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಇಡೀ ಊರಿಗೆ ಊರೇ ಸೇರಿ ಒಗ್ಗಟ್ಟಾಗಿ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತದೆ.
ಕಾರು ಹುಣ್ಣಿಮೆ ಹಬ್ಬವು ಚಿಕ್ಕವರಿಂದಲೂ ನಮಗೆ ಖುಷಿ ತರುವ ಹಬ್ಬ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಿ, ನಾವು ಹೊಸ, ಹೊಸ ಬಟ್ಟೆ ತೊಟ್ಟು ಹೋಳಿಗೆ, ತುಪ್ಪದ ಊಟ ಮಾಡಿ ಸಂಭ್ರಮಿಸುವುದು ಜೀವಮಾನದ ಖುಷಿಗಳಲ್ಲಿ ಒಂದು. ಇನ್ನೂ ಒಂದು ವಿಶೇಷ ಏನೆಂದರೆ ಈ ಹಬ್ಬದ ದಿನದಂದು ಮನೆಯಲ್ಲಿರುವ ಎಣ್ಣೆ ತೆಗೆಯುವ ಗಾಣಕ್ಕೆ ಸೀರೆ ತೊಡಿಸಿ, ಅಲಂಕಾರ ಮಾಡಿ ಪೂಜೆ ಮಾಡುವುದು ಕೂಡ ಇದೇ ದಿನದಂದು.
ಸಂಗಮೇಶ ಸಜ್ಜನ , ಉದ್ಯೋಗಿ, ಬೆಂಗಳೂರು