Advertisement

ಅಧಿವೇಶನದ ಮೊದಲ ದಿನವೇ ಬೃಹತ್‌ ರ್ಯಾಲಿ

06:00 AM Nov 21, 2018 | Team Udayavani |

ಬೆಂಗಳೂರು: ರಾಜ್ಯದ ರೈತರ ಸಾಲ ಮನ್ನಾದಲ್ಲಿನ ವೈಫ‌ಲ್ಯ, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವಲ್ಲಿನ ನಿರ್ಲಕ್ಷ್ಯ ಹಾಗೂ
ಬರಪೀಡಿತ ಪ್ರದೇಶಗಳ ಜನರಿಗೆ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ ಬುಧವಾರ ರಾಜ್ಯಾದ್ಯಂತ ಹೋರಾಟ ನಡೆಸುವ ಜತೆಗೆ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗುವ ಮೊದಲ ದಿನವಾದ ಡಿ.10ರಂದು ಬೃಹತ್‌ ರ್ಯಾಲಿ ನಡೆಯಲು
ಮಂಗಳವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆ ತೀರ್ಮಾನಿಸಿದೆ.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕೋರ್‌ ಕಮಿಟಿ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಶಾಸಕ ಅರವಿಂದ ಲಿಂಬಾವಳಿ, ರಾಜ್ಯ ಸರ್ಕಾರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರೂ ರಾಜ್ಯದ ರೈತರಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡುತ್ತಿವೆ. ಇನ್ನೊಂದೆಡೆ ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತವನ್ನು ಪಾವತಿಸದೆ ಸಕ್ಕರೆ ಕಾರ್ಖಾನೆ ಮಾಲೀಕರು ನಿರ್ಲಕ್ಷ್ಯ ತೋರಿದ್ದಾರೆ. ಇನ್ನೊಂದೆಡೆ ಸರ್ಕಾರವೂ ಗಮನ ಹರಿಸದಿರುವುದನ್ನು ಖಂಡಿಸಿ ರ್ಯಾಲಿ ನಡೆಸಲಾಗುತ್ತಿದೆ. ರೈತರ ಸಮಸ್ಯೆಗಳ ಕುರಿತು ಕಲಾಪದಲ್ಲೂ ಚರ್ಚಿಸಲಾಗುವುದು ಎಂದು ಹೇಳಿದರು. ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳು ಮಂಗಳವಾರ ನೀಡಿರುವ ಭರವಸೆ ಈಡೇರುವ ಬಗ್ಗೆ ಅನುಮಾನಗಳಿವೆ. ಕಾನೂನು ಸುವ್ಯವಸ್ಥೆ ಪಾಲನೆ, ರೈತರ ಸಮಸ್ಯೆಗಳು ಹಾಗೂ ಬೆಂಗಳೂರು ಅಭಿವೃದ್ಧಿ ಬಗ್ಗೆ ಸರ್ಕಾರ ದೃಢ ತೀರ್ಮಾನ ಕೈಗೊಳ್ಳುವ ನಂಬಿಕೆಯಿಲ್ಲ ಎಂದು ತಿಳಿಸಿದರು.

ಪೂರ್ಣ ಪ್ರಮಾಣದ ಕೋರ್‌ ಕಮಿಟಿ ಕೋರ್‌ ಕಮಿಟಿ ಸದಸ್ಯರಾಗಿದ್ದ ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್‌ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಯಾರನ್ನು ನೇಮಿಸಬೇಕೆಂಬ ಬಗ್ಗೆ ಪಕ್ಷದ ವರಿಷ್ಠರು ಬಯಸಿದರೆ ನೇಮಕ ಮಾಡಲಾಗುತ್ತದೆ.
ಹಾಗೆಂದು ಕೋರ್‌ ಕಮಿಟಿ ಸದಸ್ಯರ ಸ್ಥಾನ ಖಾಲಿಯಾಗಿದೆ ಎನ್ನುವಂತಿಲ್ಲ. ಸದ್ಯದ ಕೋರ್‌ ಕಮಿಟಿ ಪೂರ್ಣ ಪ್ರಮಾಣದ್ದಾಗಿದೆ. ಅನಂತ ಕುಮಾರ್‌ ಅವರಿಗೆ ಶ್ರದ್ದಾಜಲಿ ಸಲ್ಲಿಸುವ ಸಭೆಯನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸುವ ಬಗ್ಗೆಯೂ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡಿದರು.

ಜನಾಗ್ರಹ ಸಭೆಗೆ ಬಿಜೆಪಿ ಬೆಂಬಲ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಇದೇ 25ರಂದು ನಡೆಯಲಿರುವ “ಜನಾಗ್ರಹ ಸಭೆ’ಗೆ ಬಿಜೆಪಿ ಸಂಪೂರ್ಣ ಬೆಂಬಲ ಸೂಚಿಸಿದೆ. ಪಕ್ಷದ ಎಲ್ಲ ಕಾರ್ಯಕರ್ತರು ಇದರಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಕರೆ ನೀಡಿದೆ. ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಬಿಜೆಪಿಯ ನಿಲುವು.  ಹಾಗಾಗಿ ನ.25ರಂದು ನಡೆಯುವ ಕಾರ್ಯಕ್ರಮವನ್ನು ಬಿಜೆಪಿ
ಕಾರ್ಯಕರ್ತರು ಹಾಗೂ ರಾಮಭಕ್ತರು ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಲು ಬಿಜೆಪಿ ಕೋರ್‌ ಕಮಿಟಿ ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next