ಬಹುಶಃ ಧ್ರುವ ಸರ್ಜಾ ಆಗಲಿ, “ಭರ್ಜರಿ’ ಚಿತ್ರದ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಈ ತರಹದ ಒಂದು ಪ್ರತಿಕ್ರಿಯೆ ತಮ್ಮ ಚಿತ್ರಕ್ಕೆ ಸಿಗುತ್ತದೆಂದು ಕನಸು ಮನಸ್ಸಿನಲ್ಲೂ ಭಾವಿಸಿರಲಿಕ್ಕಿಲ್ಲ. ಆ ತರಹದ ಒಂದು ಅದ್ಭುತ ಓಪನಿಂಗ್‌ಗೆ “ಭರ್ಜರಿ’ ಚಿತ್ರ ಸಾಕ್ಷಿಯಾಗಿದೆ. ಇತ್ತೀಚೆಗೆ ದಿನಗಳಲ್ಲಿ ಯಾವ ಕನ್ನಡ ಚಿತ್ರಕ್ಕೂ ಇಂತಹ ಓಪನಿಂಗ್ ಸಿಕ್ಕಿರಲಿಲ್ಲ. ಅಷ್ಟರ ಮಟ್ಟಿಗೆ “ಭರ್ಜರಿ’ ಹವಾ ಜೋರಾಗಿತ್ತು. ಅದರ ಪರಿಣಾಮ ಚಿತ್ರದ ಕಲೆಕ್ಷನ್ ಮೇಲಾಗಿದೆ.
ಕನ್ನಡ ಚಿತ್ರರಂಗದ ಸ್ಟಾರ್ ನಟರ ಕಲೆಕ್ಷನ್ ಬದಿಗೆ ಸರಿಸುವಂತಹ ಕಲೆಕ್ಷನ್ “ಭರ್ಜರಿ’ಗಾಗಿದೆ. ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ ಮೊದಲ ದಿನ ಮಾಡಿದ ಕಲೆಕ್ಷನ್ ವಿವರದ ಕುರಿತಾದ ಪೋಸ್ಟರ್‌ವೊಂದು ಓಡಾಡುತ್ತಿದೆ. ಈ ಪೋಸ್ಟರ್ ಪ್ರಕಾರ, “ಭರ್ಜರಿ’ ಮೊದಲ ದಿನ ಗಳಿಸಿದ್ದು ಬರೋಬ್ಬರಿ 6.83 ಕೋಟಿ. ಈ ಮೂಲಕ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬ ಲೆಕ್ಕಾಚಾರ ಕೂಡಾ ಆರಂಭವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಪೋಸ್ಟರ್ ಪ್ರಕಾರ, “ಭರ್ಜರಿ’ ಚಿತ್ರ ಮೊದಲ ದಿನ ಬೆಂಗಳೂರು, ಕೋಲಾರ, ತುಮಕೂರಿನಲ್ಲಿ 2.27 ಕೋಟಿ, ಮೈಸೂರು, ಮಂಡ್ಯ, ಚಿತ್ರದುರ್ಗ, ಹಾಸನದಲ್ಲಿ 1.80 ಕೋಟಿ, ದಾವಣಗೆರೆ, ಹುಬ್ಬಳ್ಳಿ, ಬಳ್ಳಾರಿ, ಗದಗ, ಬಿಜಾಪುರ, ಬಾಗಲಕೋಟೆ ಹಾಗೂ ಮಂಗಳೂರು ಸೇರಿದಂತೆ ಇತರ ಕಡೆಗಳಲ್ಲಿ 2.76 ಕೋಟಿ ಗಳಿಸಿದೆ. ಇತ್ತೀಚಿನ ಯಾವ ದಿನಗಳಲ್ಲೂ ಈ ತರಹದ ಕಲೆಕ್ಷನ್ ಯಾವುದೇ ಕನ್ನಡ ಸಿನಿಮಾಕ್ಕಾಗಿಲ್ಲ, ಸದ್ಯ “ಭರ್ಜರಿ’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ ಎಂಬ ಸ್ಟೇಟಸ್‌ಗಳು ಓಡಾಡುತ್ತಿವೆ.
ಮೊದಲೇ ಹೇಳಿದಂತೆ “ಭರ್ಜರಿ’ಗೆ ಒಳ್ಳೆಯ ಓಪನಿಂಗ್ ಸಿಕ್ಕಿರೋದು ಸುಳ್ಳಲ್ಲ. ಹಾಗಂತ ಕಲೆಕ್ಷನ್ ವಿಚಾರದಲ್ಲಿ ಓಡಾಡುತ್ತಿರುವ ಅಂಕಿ-ಅಂಶಗಳು ನಿಖರವಾಗಿವೆ ಎನ್ನುವಂತಿಲ್ಲ. ಸಿನಿಮಾ ಬಿಡುಗಡೆಯಾದ ಒಂದು ವಾರದವರೆಗೆ ಈ ತರಹದ ಕಲೆಕ್ಷನ್ ಸುದ್ದಿಗಳು ಜೋರಾಗಿ ಓಡಾಡುತ್ತಿವೆ. ಆ ನಂತರ ಅದೇ ಚಿತ್ರದ ನಿರ್ಮಾಪಕ ತನಗೆ ಆ ಸಿನಿಮಾದಿಂದ ಕಾಸು ಬಂದಿಲ್ಲ ಎಂದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ, ಕಲೆಕ್ಷನ್ ರಿಪೋರ್ಟ್‌ಗಳನ್ನು ನಂಬೋದು ಕೂಡಾ ಕಷ್ಟ ಎಂಬಂತಾಗಿದೆ.