ಬೆಂಗಳೂರು: ರಾಜಧಾನಿಯ ಪೊಲೀಸ್ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದ 24 ತಾಸಿನಲ್ಲೇ ನಗರದ ಪೊಲೀಸ್ ಆಡಳಿತ ವ್ಯವಸ್ಥೆಗೆ ಆಯುಕ್ತ ಪ್ರವೀಣ್ ಸೂದ್ ಬಿಸಿ ಮುಟ್ಟಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯ ವಿಶೇಷ ಶಾಖೆಯ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡ ಆಯುಕ್ತರು, ಪಾಸ್‌ಪೋರ್ಟ್ ಸೇರಿದಂತೆ ಇತರೆ ದಾಖಲಾತಿಗಳ ಪರಿಶೀಲನೆ ಪ್ರತಿಕ್ರಿಯೆ ಚುರುಕಾಗಿ ನಡೆಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಇದಾದ ನಂತರ ಸಿಸಿಬಿ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ.
ಭಾನುವಾರ ಆಯುಕ್ತರ ಹುದ್ದೆ ಅಲಂಕರಿಸಿದ ಬಳಿಕ ಔಪಚಾರಿಕವಾಗಿ ಅಧಿಕಾರಿಗಳ ಸರಣಿ ಸಭೆಗಳನ್ನು ನಡೆಸಿದ ಆಯುಕ್ತರು, ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳಿಂದ ಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ಸಂಗ್ರಹಿಸಿದ್ದರು. ಅಲ್ಲದೆ, ಸಂಚಾರ ಹಾಗೂ ಆಡಳಿತದ ವಿಭಾಗದ ವ್ಯವಸ್ಥಗೆ ಬದಲಾವಣೆಗೆ ಮುಂದಾಗಿರುವುದಾಗಿ ಹೇಳಿದ್ದರು.
ಜಿಲ್ಲೆಗಳಿಗೆ ಹೋಗ್ರೀ: ಭಾನುವಾರ ಸಂಜೆ ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ವಿಭಾಗಕ್ಕೆ ಹಠಾತ್ ಭೇಟಿ ನೀಡಿದ ಆಯುಕ್ತ ಪ್ರವೀಣ್ ಸೂದ್ ಅವರು, ವಾಹನಗಳು ಹಾಗೂ ಅಶ್ವ ದಳದ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ವಾಹನ ನಿರ್ವಹಣೆ ಸಮಪರ್ಕವಾಗಿ ನಡೆಸುವಂತೆ ಸೂಚಿಸಿದರಲ್ಲದೆ, ಹಳೆ ಮತ್ತು ದುರಸ್ತಿ ವಾಹನಗಳ ಹರಾಜು ನಡೆಸಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ಕೆಲ ಸಶಸ್ತ್ರ ಮೀಸಲು ಅಧಿಕಾರಿಗಳನ್ನು ಕಂಡು ಸಿಡಿಮಿಡಿಗೊಂಡ ಆಯುಕ್ತರು, “ಇನ್ನೆಷ್ಟು ದಿನ ಇಲ್ಲೇ ಇರುತ್ತೀರಿ. ನೀವು ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡುವುದಿಲ್ಲವೇ’ ಎಂದು ಖಾರವಾಗಿ ಪ್ರತಿಕ್ರಿಯಿಸಿರುವುದಾಗಿ ಮೂಲಗಳು ಹೇಳಿವೆ.
ಬೆಂಗಳೂರಿನಲ್ಲೇ ಇರುವ ಕೆಲ ಅಧಿಕಾರಿಗಳನ್ನು ಕಂಡು ಸಿಡಿಮಿಡಿಗೊಂಡ ಆಯುಕ್ತರು, “ಇನ್ನೆಷ್ಟು ದಿನ ಇಲ್ಲೇ ಇರುತ್ತೀರಿ. ನೀವು ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡುವುದಿಲ್ಲವೇ?’ ಎಂದು ಕಿಡಿಕಾರಿದ್ದಾರೆ.