ಕುಂದಾಪುರ: ನಮ್ಮ ನೆಲದ ಸಾಹಿತ್ಯ, ಸಂಸ್ಕೃತಿ, ಕೃಷಿ, ಕಲೆ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದೆ. ಕೃಷಿ (ಎಗ್ರಿಕಲ್ಚರ್) ಜಗತ್ತಿನ ಮೊದಲ ಸಂಸ್ಕೃತಿ (ಕಲ್ಚರ್). ಕೃಷಿ ಉಳಿದರೆ ಮಾತ್ರ ನಮ್ಮ ಸಂಸ್ಕೃತಿಯು ಉಳಿಯುತ್ತದೆ. ಆದರೆ ಇಂದು ಕೃಷಿ ಬಗೆಗಿನ ಒಲವು ಹೊಸ ತಲೆಮಾರಿನಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕೃಷಿ ಚಿಂತಕ, ಅಂಕಣಕಾರ ಪ್ರೊ| ನರೇಂದ್ರ ರೈ ದೇರ್ಲ ಹೇಳಿದರು.
ಅವರು ಹೊಸಾಡು ಸರಕಾರಿ ಹಿ. ಪ್ರಾ. ಶಾಲೆಯಲ್ಲಿ ನಡೆದ ಕುಂದಾಪುರ ತಾ| ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕೃಷಿ ಮತ್ತು ವರ್ತಮಾನ’ ವಿಚಾರ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ನಮ್ಮಲ್ಲಿ ಮತ್ತೂಂದು ದೇಶವನ್ನು ಸ್ಫೋಟಿಸುವ ಅಣುಬಾಂಬ್ ಇದೆ. ಆದರೆ ಪ್ರಪಂಚದ 700 ಕೋಟಿ ಜನರಿಗೆ ಬೇಕಾದ ಪರಿಶುದ್ಧವಾದ ನೀರು, ಗಾಳಿ, ಅನ್ನ ನಮ್ಮಲ್ಲಿ ಇಲ್ಲ. ಇದೆಲ್ಲವನ್ನು ಹಾಳು ಮಾಡಿರುವುದು ಬೇರೆ ಯಾವ ಜೀವಿಯೂ ಅಲ್ಲ ಮನುಷ್ಯರು ಮಾತ್ರ. ಎಲ್ಲವನ್ನು ಹಣದಿಂದಲೇ ಕೊಂಡುಕೊಳ್ಳುತ್ತೇವೆ ಎನ್ನುವ “ಅಹಂ’ ಭಾವನೆಯಿಂದಲೇ ನಾವು ಸುಂದರ ಪ್ರಕೃತಿಯನ್ನು ನಾಶ ಮಾಡಿರುವುದು ಎಂದವರು ಹೇಳಿದರು.
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ರಾಜಗೋಪಾಲ ಶೆಟ್ಟಿ ಗುಡ್ಡಮ್ಮಾಡಿ ಸಂವಾದದಲ್ಲಿ ಪಾಲ್ಗೊಂಡರು. ಕಸಾಪ ತಾ| ಗೌರವ ಕಾರ್ಯದರ್ಶಿ ಚೇತನ್ ಶೆಟ್ಟಿ ಕೋವಾಡಿ ನಿರ್ವಹಿಸಿದರು.
ಯಕ್ಷ ಸ್ಮರಣೆ
ಅರಾಟೆ ಮಂಜುನಾಥ ಯಕ್ಷ ಸ್ಮರಣೆ ಗೋಷ್ಠಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಆರೊYàಡು ಮೋಹನದಾಸ ಶೆಣೈ ಉಪನ್ಯಾಸ ನೀಡಿದರು. ಪತ್ರಕರ್ತ ಜಾನ್ ಡಿ’ಸೋಜಾ, ಮುಸ್ತಾಕ್ ಹೆನ್ನಾಬೈಲು, ಸತೀಶ ಕುಮಾರ್ ಶೆಟ್ಟಿ ಸಂವಾದದಲ್ಲಿ ಪಾಲ್ಗೊಂಡರು. ಉಪನ್ಯಾಸಕ ಸುಕುಮಾರ್ ಶೆಟ್ಟಿ ನಿರ್ವಹಿಸಿದರು.
ಭಂಡಾರ್‌ಕಾರ್ ಕಾಲೇಜಿನ ವಿದ್ಯಾರ್ಥಿಗಳಿಂದ ಗೀತ ಗಾಯನ, ಹೊಸಾಡು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಿತು.