ಉಡುಪಿ: ಸುಮಾರು 1,900 ಆಶಾ ಕಾರ್ಯಕರ್ತರಿಗೆ ಕ್ಯಾನ್ಸರ್ ಕುರಿತಾಗಿ ತರಬೇತಿ ನೀಡುವ ಪ್ರಥಮ ಪ್ರಯತ್ನರಾಜ್ಯದಲ್ಲಿಯೇ ಮೊದಲಬಾರಿಗೆ ಉಡುಪಿ ಜಿಲ್ಲೆಯಲ್ಲಿ ಜರಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಅವರು ಮಾ. 14ರಂದು ಉಡುಪಿ ಜಿಲ್ಲೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಂಗಳೂರಿನ ಯೇನಪೊಯ ವಿ.ವಿ. ಅವರಿಂದ ಕ್ಯಾನ್ಸರ್ ಕುರಿತಾಗಿ ಜಾಗೃತಿ ನೀಡಲು ನೀಡಲಾದ ಕಾರ್ಯಕ್ರಮದ ಸಮಾರೋಪದಲ್ಲಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹೃದಯ ಸಂಬಂಧಿತ ಕಾಯಿಲೆಗಳಷ್ಟೆ ಪ್ರಮುಖವಾಗಿ ಕ್ಯಾನ್ಸರ್ ಕುರಿತಾದ ಜಾಗೃತಿ ಅತಿ ಅಗತ್ಯ. ಪ್ರತಿ ನೂರು ಜನರಲ್ಲಿ ಕನಿಷ್ಟ 5-6 ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಅತಿ ಮುಖ್ಯ. ಕ್ಯಾನ್ಸರ್ ಕೊನೆಯ ಹಂತವನ್ನು ತಲುಪುವ ಮುನ್ನ ಪತ್ತೆ ಹಚ್ಚಿದಲ್ಲಿ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೆಂದು ಅವರು ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು ಅವರು ಮಾತನಾಡಿ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಕ್ಯಾನ್ಸರ್ ಅರಿವು ತೀವ್ರವಾಗಿ ಜರಗಬೇಕು. ಹಳ್ಳಿ ಪ್ರದೇಶದ ಜನರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡುವಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು ಶ್ರದ್ಧೆಯಿಂದ ಕೆಲಸಮಾಡಬೇಕೆಂದು ಕೋರಿದರು.
ಮಂಗಳೂರಿನ ಯೆನಪೋಯ ವಿ.ವಿ.ಕುಲಪತಿ ಡಾ| ಎಂ. ವಿಜಯಕುಮಾರ್,ಕುಲಸಚಿವ ಡಾ| ಜಿ. ಶ್ರೀಕುಮಾರ್ ಮೆನನ್, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ| ಅಭಯ್ ನಿರ್ಗುಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರೋಹಿಣಿ ಉಪಸ್ಥಿತರಿದ್ದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ್ ಕಾರ್ಯಕ್ರಮ ನಿರೂಪಿಸಿದರು.