Advertisement

ಕೋಟದಲ್ಲಿ ಆರಂಭಗೊಳ್ಳಲಿದೆ ಕರಾವಳಿಯ ಪ್ರಥಮ ಮತ್ಸ್ಯದರ್ಶನಿ ಕೇಂದ್ರ

10:46 PM Mar 12, 2020 | Sriram |

ಕೋಟ: ಮೀನುಗಾರಿಕೆ ಇಲಾಖೆ, ಕೆಎಫ್‌.ಡಿ.ಸಿ. ಸಂಸ್ಥೆ ಆಶ್ರಯದಲ್ಲಿ ಕಡಿಮೆ ಬೆಲೆಗೆ ಮೀನು ಊಟವನ್ನು ವಿತರಿಸುವ ಮತ್ಸ್ಯದರ್ಶನಿ ಕೇಂದ್ರಗಳು ಈಗಾಗಲೇ ಹಲವು ಕಡೆಗಳಲ್ಲಿವೆ. ಪಸ್ತುತ ರಾಜ್ಯದ 11 ಜಿಲ್ಲೆಗಳಿಗೆ ಈ ಕೇಂದ್ರವನ್ನು ವಿಸ್ತರಿಸಲು ಇಲಾಖೆ ನಿರ್ಧರಿಸಿದ್ದು ಅದರ ಭಾಗವಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಥಮ ಮತ್ಸ್ಯದರ್ಶನಿ ಕೇಂದ್ರ ಕೋಟದಲ್ಲಿ ತಲೆ ಎತ್ತಲು ಎಲ್ಲ ತಯಾರಿಗಳು ನಡೆದಿದೆ.

Advertisement

ಟೆಂಡರ್‌ ಹಂತಕ್ಕೆ
ಹೊಸದಾಗಿ ಆರಂಭಗೊಳ್ಳಲಿರುವ ಮತ್ಸ್ಯದರ್ಶನಿ ಕೇಂದ್ರಗಳಿಗೆ ಸೂಕ್ತ ಸ್ಥಳವನ್ನು ಕಾಯ್ದಿರಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಕೆ.ಎಫ್‌.ಡಿ.ಸಿ. ಸಂಸ್ಥೆ ಮನವಿಯನ್ನು ಮಾಡಿತ್ತು. ಅದರಂತೆ ಕೋಟದಲ್ಲಿ ನಿರುಪಯುಕ್ತವಾಗಿರುವ ಕೋಟ ಮೀನು ಮಾರುಕಟ್ಟೆಯಲ್ಲಿ ಈ ಕೇಂದ್ರ ಸ್ಥಾಪಿಸಲು ಸ್ಥಳೀಯಾಡಳಿತ ಶಿಫಾರಸು ಮಾಡಿದ್ದು ಈ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿ ಟೆಂಡರ್‌ ಹಂತಕ್ಕೆ ತಲುಪಿದೆ.

ನಿರುಪಯುಕ್ತ ಮಾರುಕಟ್ಟೆ ಕಟ್ಟಡಕ್ಕೆ ಜೀವ
ಎನ್‌ಎಫ್‌ಡಿಬಿ ಸಂಸ್ಥೆಯ ಶೇ.90ಅನುದಾನ ಹಾಗೂ ರಾಜ್ಯ ಸರಕಾರದ ಶೇ.10 ಅನುದಾನದಲ್ಲಿ, ಒಟ್ಟು 75ಲಕ್ಷ ವೆಚ್ಚದಲ್ಲಿ 2015ಜುಲೈನಲ್ಲಿ ಕೋಟದ ಮೀನುಮಾರುಕಟ್ಟೆ ನಿರ್ಮಿಸಲಾಗಿತ್ತು. ಆದರೆ ಮೀನುಗಾರ ಮಹಿಳೆಯರು ಒಂದು ತಿಂಗಳು ಕೂಡ ಇಲ್ಲಿ ವ್ಯಾಪಾರ ನಡೆಸದ ಕಾರಣ ಮಾರುಕಟ್ಟೆ ಐದು ವರ್ಷದಿಂದ ನಿರುಪಯುಕ್ತವಾಗಿದೆ. ಹೀಗಾಗಿ ಮತ್ಸ್ಯದರ್ಶನಿ ಕೇಂದ್ರ ಸ್ಥಾಪನೆಯಾದಲ್ಲಿ ಪಾಳು ಬಿದ್ದ ಮೀನು ಮಾರುಕಟ್ಟೆ ಕಟ್ಟಡ ಮತ್ತೆ ಬಳಕೆಯಾದಂತಾಗಲಿದೆ.

ಮತ್ಸ್ಯದರ್ಶನಿಯಲ್ಲಿ ಏನೇನಿವೆ?
ಖಾಸಗಿ ಹೋಟೆಲ್‌ಗ‌ಳಿಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ಮೀನು ಊಟ ಸಿಗುತ್ತದೆ ಹಾಗೂ ಎಲ್ಲಾ ತರಹದ ಮೀನಿನ ಫ್ರೈ, ಗಂಜಿ ಊಟ ಮುಂತಾದ ಸೌಲಭ್ಯಗಳು ಸಿಗಲಿವೆ. ಈ ಕೇಂದ್ರಗಳಲ್ಲಿ ಆಹಾರ ತಯಾರಿಸಲು ಮಲ್ಪೆ, ಮಂಗಳೂರಿನಿಂದ ಶುಚಿ-ರುಚಿಯಾದ ಮೀನು ರವಾನೆಯಗಲಿವೆ.

ಕರಾವಳಿಯ ಪ್ರಥಮ ಮತ್ಸ್ಯದರ್ಶನಿ
ಬೆಂಗಳೂರು, ತುಮಕೂರು, ಶಿವಮೊಗ್ಗ, ಕೋಲಾರ, ಬಳ್ಳಾರಿಯಲ್ಲಿ ಈ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತಿವೆ. ಬೆಳಗಾವಿ, ಬಿಜಾಪುರ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು, ಉಡುಪಿ ಸೇರಿದಂತೆ 11 ಜಿಲ್ಲೆಗಳಿಗೆ ವಿಸ್ತರಿಸಲು ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಅದರಂತೆ ದ.ಕ., ಉಡುಪಿ ಜಿಲ್ಲಾಡಳಿತಕ್ಕೆ ಸ್ಥಳ ಗುರುತಿಸುವಂತೆ ಮನವಿ ಮಾಡಲಾಗಿತ್ತು. ದ.ಕ.ದಲ್ಲಿ ಸ್ಥಳ ಮೀಸಲಿರಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಉಡುಪಿಯಲ್ಲಿ ಜಾಗ ಗುರುತಿಸಿರುವುದರಿಂದ ಕೇಂದ್ರ ಕೋಟದಲ್ಲಿ ಶುರುವಾಗಲಿದೆ.

Advertisement

ಟೆಂಡರ್‌ ಕರೆಯಲಾಗುವುದು
ಕೋಟ ಮೀನುಮಾರುಕಟ್ಟೆ ಕಟ್ಟಡದಲ್ಲಿ ಮತ್ಸ$ದರ್ಶನಿ ಕೇಂದ್ರ ತೆರೆಯುವಂತೆ ಸ್ಥಳೀಯಾಡಳಿತ ಮನವಿ ಮಾಡಿದ್ದು ಎಲ್ಲಾ ತಯಾರಿ ನಡೆದಿದೆ. ಕೇವಲ ಟೆಂಡರ್‌ ಪ್ರಕ್ರಿಯೆ ಬಾಕಿ ಇದ್ದು ಶೀಘ್ರದಲ್ಲಿ ಕೇಂದ್ರ ಆರಂಭಗೊಳ್ಳಲಿದೆ ಹಾಗೂ ಇದು ಕರಾವಳಿಯ ಪ್ರಥಮ ಕೇಂದ್ರವೆಂಬ ಹೆಗ್ಗಳಿಕೆ ಪಾತ್ರವಾಗಲಿದೆ.
-ಎಂ.ಎಲ್‌. ದೊಡ್ಮನೆ, ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಕೆ.ಎಫ್‌.ಡಿ.ಸಿ.

ಅಗತ್ಯ ಸಹಕಾರ
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸಲಹೆಯಂತೆ ನಿರುಪಯುಕ್ತವಾಗಿರುವ ಮೀನುಮಾರುಕಟ್ಟೆ ಕಟ್ಟಡವನ್ನು ಮತ್ಸ್ಯದರ್ಶನಿ ಕೇಂದ್ರಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಕರಾವಳಿಯಲ್ಲೇ ಪ್ರಥಮವಾಗಿ ನಮ್ಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಕೇಂದ್ರ ಆರಂಭಗೊಳ್ಳುವುದು ಸಂತಸ ತಂದಿದೆ. ಸೂಕ್ತ ಸಹಕಾರ ನೀಡಲಾಗುವುದು.
-ವನಿತಾ ಶ್ರೀಧರ್‌ ಆಚಾರ್ಯ, ಅಧ್ಯಕ್ಷರು ಕೋಟ ಗ್ರಾ.ಪಂ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next