Advertisement
ಪಟಾಕಿ ಸಿಡಿತ ಸಂದರ್ಭದಲ್ಲಿ ಉಂಟಾದ ಅನಾಹುತಕ್ಕೆ ನಗರದ ವಿವಿಧ ಭಾಗಗಳಲ್ಲಿ ಸುಮಾರು 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪ್ರಾಪ್ತ ಮಕ್ಕಳು, ವಯಸ್ಕರು ಕೂಡ ಇದರಲ್ಲಿ ಸೇರಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಮಗು ಜೇಬಲ್ಲಿಟ್ಟುಕೊಂಡಿದ್ದ ಪಟಾಕಿ ಸಿಡಯಿತು: “ಮಿಂಟೋ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮುಳಬಾಗಿಲು ಸಮೀಪದ ರಾಮಸಮುದ್ರದ ಬಾಲು (7) ಇವನದ್ದು ಮತ್ತೂಂದು ದಾರುಣ ಕತೆ. ಕೂಲಿಕೆಲಸ ಮಾಡುವ ದಂಪತಿಯ ಮಗನಾದ ಬಾಲು ಬುಧವಾರ ಸಂಜೆ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ತಂದಿದ್ದ. ಈ ವಿಚಾರ ಪೋಷಕರಿಗೂ ತಿಳಿಸಿರಲಿಲ್ಲ.
ಸಂಜೆ 5 ಗಂಟೆ ಸುಮಾರಿಗೆ ನೆರೆಮನೆಯ ಹುಡುಗರ ಜೊತೆ ಪಟಾಕಿ ಸಿಡಿಸುವಲ್ಲಿ ಮುಳುಗಿದ್ದ ಬಾಲು, ನಿಕ್ಕರ್ ಜೇಬಿನಲ್ಲಿ ಕೆಲವು ಪಟಾಕಿಗಳನ್ನು ಇಟ್ಟುಕೊಂಡಿದ್ದ. ಒಂದನ್ನು ಹೊಡೆಯಲು ಹೋಗಿ ಅದು ಸಿಡಿದಿಲ್ಲದ ಕಾರಣ, ಪಟಾಕಿ ಸರಿಯಾಗಿ ಹತ್ತಿಲ್ಲ ಎಂದುಕೊಂಡು ತನ್ನ ನಿಕ್ಕರ್ ಜೇಬಿಗೆ ಹಾಕಿಕೊಂಡಿದ್ದಾನೆ.
ಆದರೆ, ಅದೇ ಪಟಾಕಿ ಕೆಲವೇ ಕ್ಷಣಗಳಲ್ಲಿ ಸ್ಫೋಟಿಸಿದ ಪರಿಣಾಮ ಬಾಲುವಿನ ತೊಡೆ, ತೊಡೆ ಭಾಗವೆಲ್ಲಾ ಸುಟ್ಟು ಹೋಗಿದೆ ಎಂದು ಹೇಳುವಾಗ ಅವರ ಚಿಕ್ಕಪ್ಪ ಮುನಿರೆಡ್ಡಿ ಗದ್ಗಿದಿತರಾದರು. ನಮ್ಮ ಅಣ್ಣನಿಗೆ ಒಬ್ಬನೇ ಮಗ, ತಿಂಡಿ ತಿನಿಸು ಕೊಟ್ಟಿದ್ದ ಕಾಸಿನಲ್ಲಿಯೇ ಪಟಾಕಿ ತೆಗೆದುಕೊಂಡು ಬಿಟ್ಟಿದ್ದಾನೆ. ವೈದ್ಯರು ಏನು ಹೇಳುತ್ತಿಲ್ಲ ಚಿಕಿತ್ಸೆ ನೀಡುತ್ತಿದ್ದೇವೆ ಎನ್ನುತ್ತಾರೆ ಎಂದು ಕಣ್ಣೀರು ಹಾಕಿದರು.
ಕಣ್ಣಿಗೆ ಚುಚ್ಚಿದ ರಾಕೆಟ್!: ಅಪರಿಚಿತರು ಹಬ್ಬದ ಸಂಭ್ರಮದಲ್ಲಿ ಹಚ್ಚಿದ್ದ ರಾಕೆಟ್ ಕಣ್ಣಿಗೆ ಚುಚ್ಚಿ ಆಡುಗೋಡಿಯ ಶಾರೂಕ್ ಎಂಬ ಯುವಕ ಕಣ್ಣು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಆಡುಗೋಡಿಯ ಎಲ್. ಆರ್.ನಗರದ ನಿವಾಸಿ ಶಾರೂಕ್ ಬುಧವಾರ ಸಂಜೆ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕಿದ್ದಂತೆ ಮೇಲಿನಿಂದ ಬಂದ ರಾಕೆಟ್ ಪಟಾಕಿ ಕಣ್ಣಿಗೆ ಚುಚ್ಚಿಕೊಂಡಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೇಟಿಂಗ್ ಕೆಲಸ ಮಾಡುವ ಶಾರೂಕ್‌ಗೆ ಇಬ್ಬರು ಮಕ್ಕಳಿದ್ದು, ಮನೆಗೆ ಆಧಾರ ಸ್ಥಂಭವಾಗಿದ್ದ. ಇದೀಗ ಯಾರೋ ಸಂಭ್ರಮಕ್ಕೆ ಹಚ್ಚಿದ ಪಟಾಕಿ ನಮ್ಮ ಮನೆಯಲ್ಲಿ ಕತ್ತಲು ತರಿಸಿದೆ. ಮಗನಿಗೆ ದೃಷ್ಟಿ ಬರುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ತಾಯಿ ಅಳಲು ತೋಡಿಕೊಂಡರು.
ಅದೇ ರೀತಿ ಗೆಳೆಯರ ಜೊತೆ ಮಾತನಾಡುತ್ತಿದ್ದ ವೇಳೆ ಪಟಾಕಿ ಕಿಡಿ ತಾಕಿ ಶಿವಾಜಿನಗರದ ಬಾಲಕ ಪ್ರದೀಪ್ ಕುಮಾರ್ (14) ಎಡಗಣ್ಣು ದೃಷ್ಟಿ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಈಗಾಗಲೇ ತಪಾಸಣೆ ನಡೆಸಿರುವ ವೈದ್ಯರು ನಾಳೆ ದೃಷ್ಟಿ ಬರುವ ಬಗ್ಗೆ ಸದ್ಯ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹೂ ಕುಂಡ ಬಗ್ಗಿ ನೋಡಲು ಹೋಗಿ ಮುಖ ಸುಟ್ಟಿತು: ಬೆಂಕಿ ಹಚ್ಚಿದ ಹೂ ಕುಂಡ ಪಟಾಕಿ ಹತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಹೋದ ತಮಿಳುನಾಡು ಮೂಲದ ಮಿಥುನ್ ಎಂಬ ಬಾಲಕ ಮುಖ ಸುಟ್ಟು ಗಂಭೀರ ಗಾಯಗೊಂಡಿದ್ದಾನೆ. ವೆಲ್ಲೂರು ಜಿಲ್ಲೆಯ ಮಿಥುನ್ ಪರಿಸ್ಥಿತಿಯೂ ಗಂಭೀರವಾಗಿದ್ದು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.