Advertisement

ಅಂತಿಮ ಹಂತದ ರೋಡ್‌ ಶೋ

01:29 PM May 10, 2018 | Team Udayavani |

ಗುಂಡ್ಲುಪೇಟೆ: ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿಯಿರುವಂತೆ ಅಭ್ಯರ್ಥಿಗಳ ಪ್ರಚಾರ ಇನ್ನಷ್ಟು ಬಿರುಸುಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ, ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಎಂ.ಸಿ.ಮೋಹನಕುಮಾರಿ ಪಟ್ಟಣದಲ್ಲಿ ಬುಧವಾರ ರೋಡ್‌ ಶೋ ನಡೆಸಿ ಮತ ಯಾಚನೆ ಮಾಡಿದರು.

Advertisement

ಪಟ್ಟಣದ ಕೆ.ಆರ್‌.ಸಿ.ರಸ್ತೆ, ಅಂಬೇಡ್ಕರ್‌ ವೃತ್ತ, ಅಶ್ವಿ‌ನಿ ಬಡಾವಣೆ, ಎಚ್‌.ಎಸ್‌.ಮಹದೇವಪ್ರಸಾದ್‌ನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಸಚಿವರು ಬಿರುಸಿನ ಮತ ಯಾಚನೆ ಮಾಡಿದರು. ಪುತ್ರ ಎಚ್‌.ಎಂ. ಗಣೇಶ್‌ ಪ್ರಸಾದ್‌, ಸೊಸೆ ಶ್ರೀವಿದ್ಯಾ, ಎಚ್‌ ಎಸ್‌ಎಂ ಸೋದರ ಎಚ್‌.ಎಸ್‌.ನಂಜುಂಡ ಪ್ರಸಾದ್‌ ರೋಡ್‌ ಶೋ ನಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋಹನಕುಮಾರಿ ಅವರು, ಪಟ್ಟಣದ ಜನತೆಯ ಕುಡಿಯುವ ನೀರಿನ ಸಮಸ್ಯೆ ಯನ್ನು ನೀಗಿಸುವ ಸಲುವಾಗಿ ನದಿಮೂಲ ದಿಂದ ನೇರವಾಗಿ ನೀರು ಪೂರೈಸುವ ಪೈಪ್‌ ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 

ಪಟ್ಟಣದಲ್ಲಿನ 23 ವಾರ್ಡ್‌ಗಳಲ್ಲಿ ಕಬಿನಿ ನೀರು ಸರಬರಾಜು ಆಗುತ್ತಿದ್ದರೂ ಹಲವೆಡೆ ಕಬಿನಿ ಮುಖ್ಯ ಪೈಪ್‌ಲೈನ್‌ ಒಡೆದು ಆಗಾಗ ದುರಸ್ತಿಗೆ ಬರುತ್ತಿದೆ. ಪೈಪ್‌ ಲೈನ್‌ ಅಳವಡಿಸಿ ಸುಮಾರು ಹತ್ತಕ್ಕೂ ಹೆಚ್ಚು ವರ್ಷಗಳಾ ಗಿರುವುದರಿಂದ ಮತ್ತು ಇದೇ ಮುಖ್ಯ ಪೈಪ್‌ ಲೈನ್‌ನಿಂದ ಮಾರ್ಗದ 33 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ಕಾರಣ ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಅಡಚಣೆ ತಲೆದೋರುತ್ತಿದೆ. ಹೀಗಾಗಿ ಗುಂಡ್ಲುಪೇಟೆ ಪಟ್ಟಣಕ್ಕೆ ನೇರವಾಗಿ ಕಬಿನಿ ನದಿಯಿಂದ ಪ್ರತ್ಯೇಕ ಪೈಪ್‌ ಲೈನ್‌ ಹಾಕಲು ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.

ಪೈಪ್‌ಲೈನ್‌ ಮಾಡಲು 57 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಪ್ರಗತಿಯಲ್ಲಿದ್ದು ಈ ಕಾಮಗಾರಿ ಪೂರ್ಣಗೊಂಡ ನಂತರ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ತಿಳಿಸಿದರು.

Advertisement

ಮಾದರಿ ಪಟ್ಟಣ ಮಾಡುವೆ: ಪಟ್ಟಣವನ್ನು ಮಾದರಿಯನ್ನಾಗಿಸುವ ಗುರಿಯನ್ನು ನಾನು ಹೊಂದಿದ್ದು, 23 ವಾರ್ಡ್‌ಗಳಲ್ಲಿಯೂ ಉತ್ತಮವಾದ ರಸ್ತೆ, ಚರಂಡಿ ಮತ್ತು ಮೂಲ ಸೌಕರ್ಯವನ್ನು ಒದಗಿಸಲಾಗುವುದು.
 
ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಉದ್ಯಾನವನ ನಿರ್ಮಿಸಲು ಯೋಜಿಸಲಾಗಿದೆ. ಉಪ ಚುನಾವಣೆಯ ಗೆಲುವಿನ ನಂತರ ನನಗೆ ದೊರೆತ ಅಧಿಕಾರಾವಧಿ ಕೇವಲ ಒಂದು ವರ್ಷವಾದ ಕಾರಣ, ನಾನು ಅಂದುಕೊಂಡ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ. ಈ ಬಾರಿ ಐದು ವರ್ಷಗಳ ಪೂರ್ಣಾವಧಿಗೆ ಆಡಳಿತ ನಡೆಸಲು ನಿಮ್ಮ ಮತಗಳನ್ನು ನೀಡಬೇಕು. ಈ ಮೂಲಕ ಪಟ್ಟಣದ ಸಮಗ್ರ ಅಭಿವೃದ್ದಿಗೆ ಸಹಕಾರ ಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ತನ್ನ ಪತಿ ಮಹದೇವಪ್ರಸಾದ್‌ ಅವರು ಗುಂಡ್ಲುಪೇಟೆ ಕ್ಷೇತ್ರದ ಅಭಿವೃದ್ಧಿಗೆ ಅನೇಕಾರು ಯೋಜನೆಗಳನ್ನು, ಅಭಿವೃದ್ಧಿ ಕಾರ್ಯ ಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಶಾಸಕರಾಗಿ ಸಚಿವರಾಗಿ ತಮಗೆ ದೊರೆತ ಅವಕಾಶದಲ್ಲಿ ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ತಾಲೂಕು ಮಟ್ಟಕ್ಕಿಂತಲೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಗುಂಡ್ಲುಪೇಟೆಯಲ್ಲಿ ಕೈಗೊಂಡಿದ್ದಾರೆ. ಅವರನ್ನು ಸ್ಮರಿಸಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ
ಕಲ್ಪಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಮುಖಂಡರಾದ, ಕಾಡಾ ಅಧ್ಯಕ್ಷ ಎಚ್‌.ಎಸ್‌.ನಂಜಪ್ಪ, ಜಿ.ಎಲ್‌. ರಾಜು, ನಾಜಿಮುದ್ದೀನ್‌ ಪುರಸಭೆ ಸದಸ್ಯರಾದ ಬಿ.ವೆಂಕಟಾಚಲ, ಚಂದ್ರಪ್ಪ, ಭಾಗ್ಯಮ್ಮ, ಸುರೇಶ್‌, ಅಂಗಡಿಶಿವಕುಮಾರ್‌, ಬಿ.ಕುಮಾರಸ್ವಾಮಿ, ಶ್ರೀಕಂಠಪ್ಪ, ಮಂಚಳ್ಳಿ ಲೋಕೇಶ್‌, ನೂರುಲ್ಲಾ, ಶಫಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next