ಬೆಂಗಳೂರು: “ಅಂಬರೀಶ್ ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದವರು ನಾವು. ಇವತ್ತು ಸುಮಾರು 13 ಕಿ.ಮೀ ದೂರದ ಅಂತಿಮ ಯಾತ್ರೆಯ ಆರಂಭದಿಂದ ಅಂತ್ಯದವರೆಗೂ ಸಹಸ್ರಾರು ಜನ ನಡೆದುಬಂದು ಅಂಬಿ ಅವರ ಮೇಲೆ ತಮಗಿರುವ ಪ್ರೀತಿ, ಅಭಿಮಾನ ನಿರೂಪಿಸಿದರು. ಅಂಬರೀಶಣ್ಣನ ಪಾರ್ಥಿವ ಶರೀರ ಹೊತ್ತ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’.
ನಟ ಅಂಬರೀಶ್ ಅವರ ಪಾರ್ಥಿವ ಶರೀರದ ಮೆರವಣಿಗೆಗೆ ಬಳಸಿದ ವಾಹನದ ಚಾಲಕ ತಿರುಮಲೇಶ್ ಹೀಗೆ ಹೇಳುತ್ತಲೇ ಗದ^ದಿತರಾಗಿ ಕ್ಷಣಕಾಲ ಮೌನವಾದರು. ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋವರೆಗೆ ಅಂತಿಮ ಯಾತ್ರೆಯಲ್ಲಿ ಸಾಗಿಸಿದ ಬಳಿಕ ಸ್ವಲ್ಪ ದೂರದಲ್ಲಿಯೇ ವಾಹನ ನಿಲ್ಲಿಸಿದ್ದ ತಿರುಮಲೇಶ್ ಅವರನ್ನು “ಉದಯವಾಣಿ’ ಮಾತಿಗೆಳೆದಾಗ ಹಲವು ಸಂಗತಿಗಳನ್ನು ಬಿಚ್ಚಿಟ್ಟರು.
ಸಾವು ತೀರಾ ಆಕಸ್ಮಿಕ. ಆದರೆ, ಪ್ರತಿಯೊಬ್ಬರ ಸಾವಿಗೂ ಘನತೆಯಿರಬೇಕು. ನೆಚ್ಚಿನ ನಟ, ರಾಜಕಾರಣಿ ಅಂಬರೀಶ್ ಆ ಘನತೆ ಗಳಿಸಿಕೊಂಡಿದ್ದರು. ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ಒಳ್ಳೆಯ ಸಂಗತಿಗಳನ್ನು ಕಲಿತವರು, ಬದುಕು ರೂಪಿಸಿಕೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲ. ನಾನೂ ಅವರ ಸಿನಿಮಾಗಳನ್ನು ನೋಡಿಯೇ ಬೆಳೆದವನು. ಅಂತಹ ಮಹಾನ್ ವ್ಯಕ್ತಿಯ ಪಾರ್ಥಿವ ಶರೀರವನ್ನು ಮೆರವಣಿಗೆ ವಾಹನಕ್ಕೆ ಸಾರಥಿಯಾಗಿದ್ದು ಹೆಮ್ಮೆ ಎಂದರು.
ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋವರೆಗೆ ಬರಲು ನಾಲ್ಕು ಗಂಟೆ ಹಿಡಿಯಿತು. ಹೆಜ್ಜೆ ಹೆಜ್ಜೆಗೂ ಅಂಬರೀಶ್ ಅವರ ಸಹಸ್ರಾರು ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಾ ವಾಹನದೊಂದಿಗೆ ಹೆಜ್ಜೆ ಹಾಕಿದರು. ವಾಹನದ ಮೇಲೆ ಪುಷ್ಪವೃಷ್ಠಿ ಮಾಡಿದವರು, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣೀರಿಡುತ್ತಾ ವಿದಾಯ ಹೇಳಿದವರು, ಅಂತಿಮ ನಮನ ಸಲ್ಲಿಸಿದವರ ಪ್ರೀತಿ, ಗೌರವ ಕಂಡು ಮೂಕ ವಿಸ್ಮಿತನಾದೆ.
ಜನರಿಂದ ಸಾಗರದಷ್ಟು ಪ್ರೀತಿ ಸಂಪಾದಿಸಿದ ವ್ಯಕ್ತಿಯನ್ನು ಕಳೆದುಕೊಂಡ ನೋವು ಬಾಧಿಸುತ್ತಿತ್ತು. ಅಳು ಬರುತ್ತಿತ್ತು. ಆದರೆ, ಅಂತಹ ದೊಡ್ಡ ವ್ಯಕ್ತಿಯ ಅಂತಿಮ ಯಾತ್ರೆಗೆ ಸಾಕ್ಷಿಯಾದೆನೆಂಬ ತೃಪ್ತಿಯಿಂದ ನೋವು ನುಂಗಿಕೊಂಡೆ. ಅಚ್ಚುಕಟ್ಟಾಗಿ ನನ್ನ ಜವಾಬ್ದಾರಿ ಪೂರ್ಣಗೊಳಿಸಿದ ಸಮಾಧಾನವಿದೆ ಎಂದು ಹೇಳಿದರು. “ಹಲವು ವರ್ಷಗಳಿಂದ ಈ ವಾಹನದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ಈ ಹಿಂದೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಇತ್ತಿಚೆಗಷ್ಟೇ ನಿಧನರಾದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಪಾರ್ಥಿವ ಶರೀರವನ್ನು ಇದೇ ವಾಹನದಲ್ಲಿ ಕೊಂಡೊಯ್ದಿದ್ದೇನೆ. ಇಂದು ಆ ಸಾಲಿಗೆ ಅಂಬರೀಶಣ್ಣ ಸೇರಿದರು. ಎಲ್ಲರೂ ಸಮಾಜಕ್ಕೆ ಕೊಡುಗೆ ನೀಡಿದವರೇ.
ಅವರನ್ನು ಅಂತಿಮ ಸಂಸ್ಕಾರ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ನನಗೆ ಸಿಕ್ಕಿದೆ ನೋಡಿ’ ಎಂದು ಗದ್ಗದಿತರಾದರು. ಅಂಬರೀಶ್ ಅವರ ಅಂತಿಮ ಯಾತ್ರೆ ಬಗ್ಗೆ ಹಲವು ಸಂಗತಿಗಳನ್ನು ಹೇಳಿಕೊಳ್ಳುವ ಬಯಕೆ ಅವರ ಮನದಲ್ಲಿದ್ದರೂ, ದುಃಖ ಮಡುಗಟ್ಟಿತ್ತು. “ಇಷ್ಟೇ ಸಾರ್, ಇಂದು ಅವರು ನಾಳೆ ನಾವು’ ಎಂದು ಮಾತುಮುಗಿಸಿದರು.
* ಮಂಜುನಾಥ್ ಲಘುಮೇನಹಳ್ಳಿ