Advertisement

ಅವೇಶದ ಹೋರಾಟ ಅಪಾಯಕಾರಿ

12:16 PM Dec 17, 2018 | |

ಬೆಂಗಳೂರು: ಕನ್ನಡ ಅಂತ ಆವೇಶ ಬೇಡ. ಅವೇಶದ ಹೋರಾಟ ಅಪಾಯಕಾರಿಯಾಗಿದ್ದು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕನ್ನಡವನ್ನು ಉಳಿಸಿ – ಬೆಳೆಸಬೇಕಾದ ಅಗತ್ಯವಿದೆ ಎಂದು ಹಿರಿಯ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅಭಿಪ್ರಾಯಪಟ್ಟರು.

Advertisement

ಅಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಭಾನುವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನುಡಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಚಳವಳಿಗಾರರ ಬಗ್ಗೆ ಜನ ಸಾಮಾನ್ಯರಲ್ಲಿ ನಿಷ್ಕೃಷ್ಟ ಭಾವನೆ ಬಂದಿದೆ. ಹಣ ಪಡೆದು ಚಳವಳಿ ಮಾಡುತ್ತಾರೆ ಎಂಬುದಾಗಿ ಮಾತನಾಡುತ್ತಾರೆ. ಕನ್ನಡದ ನೆಲ -ಜಲ, ಸಾಹಿತ್ಯದ ವಿಚಾರವಾಗಿ ನೆತ್ತರ ಕೊಟ್ಟು ಜೈಲಿಗೆ ಹೋಗಿ ಬಂದಿರುವ ಹೋರಾಟಗಾರರು ನಮ್ಮೊಂದಿಗೆ ಇದ್ದಾರೆ ಎಂಬುವುದನ್ನು ಮರೆಯಬಾರದು ಎಂದು ಹೇಳಿದರು.

ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪಾಠ ಮಾಡಿ ಸಾಹಿತ್ಯ ರಚಿಸಿದರಷ್ಟೇ ಸಾಹಿತ್ಯ ಬೆಳವಣಿಗೆ ಸಾಧ್ಯವಾಗದು. ಗೋಕಾಕ್‌ ಚಳವಳಿಯಲ್ಲಿ ಕನ್ನಡ ಸಂಘಟಕರ, ಹೋರಾಟಗಾರರ ಸಾಧನೆಯನ್ನು ಮರೆಯುವಂತಿಲ್ಲ. ಕನ್ನಡದ ವಿಚಾರದಲ್ಲಿ ಬೆಂಗಳೂರು ಕಲಬೆರಕೆಯಾಗುತ್ತಿದ್ದು ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಕಾಲ ಬಹುದೂರವಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ವಿರೋಧ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕನ್ನಡ ಶಾಲೆಯಲ್ಲಿ ಇಂಗ್ಲಿಷ್‌ ಕಲಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಸುವ ಸರ್ಕಾರದ ನಿರ್ಧಾರ ಕನ್ನಡ ಭಾಷೆಯನ್ನು ಮುಗಿಸಲು ಹೊರಟಿದಂತಿದೆ. ಕನ್ನಡ ಶಾಲೆಗಳ ಏಳ್ಗೆಗೆ ಶ್ರಮಿಸಬೇಕಾಗಿದ್ದ ಸರ್ಕಾರ ಕನ್ನಡ ಮಕ್ಕಳ ಮೇಲೆ ಇಂಗ್ಲಿಷ್‌ ಕಲಿಕೆ ಹೇರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ.ವಿಶ್ವದಲ್ಲಿರುವ 20 ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಒಂದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಕನ್ನಡ ಶಾಲೆಗಳಲ್ಲಿ ಕಲಿತ ಸಿ.ಎನ್‌.ಆರ್‌.ರಾವ್‌ ಅವರು ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವುದನ್ನು ಮರೆಯಬಾರದು ಎಂದು ಹೇಳಿದರು.

Advertisement

ವಿವಿಧ ಕ್ಷೇತ್ರದ ಸಾಧಕರಿಗೆ ಕದಂಬ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ರೈತನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರು ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ಅವಕಾಶ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ದೂರಿದರು.

ಸಮ್ಮೇಳನಾಧ್ಯಕ್ಷ ಡಾ.ಟಿ.ಎಚ್‌.ಸತೀಶ್‌ಗೌಡ ಮಾತನಾಡಿ, ಕನ್ನಡಿಗರೆಲ್ಲ ಒಂದಾದಾಗ ಮಾತ್ರ ನಮ್ಮ ಮೇಲೆ ನಡೆಯುವ ಆಕ್ರಮಣಗಳು ತಪ್ಪುತ್ತವೆ. ಕನ್ನಡದ ಏಳ್ಗೆ ನಮ್ಮಿಂದಲೇ ಹೊರತು ಅನ್ಯರಿಂದಲ್ಲ ಎಬುವುದನ್ನು ತಿಳಿದುಕೊಳ್ಳಬೇಕು ಎಂದರು. ಇದೇ ವೇಳೆ ಸಮಕಾಲೀನ ತಲ್ಲಣಗಳು ಕುರಿತ ವಿಚಾರಗೋಷ್ಠಿ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಕಸಾಪದ ಮಾಜಿ ಅಧ್ಯಕ್ಷ ಡಾ.ಆರ್‌.ಕೆ.ನಲ್ಲೂರು ಪ್ರಸಾದ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next