ಅರಸೀಕೆರೆ: ಮಹಿಳೆಯರು ಸ್ವಾತಂತ್ರ್ಯ ಹಾಗೂ ಸಮಾನತೆ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ನಗರದ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲಾ ಅಭಿಪ್ರಾಯ ಪಟ್ಟರು.
ನಗರದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಹಿಳಾ ವಕೀಲರ ಬಳಗದಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಹಿಳೆಯರು ಮತ್ತು ಪುರುಷರ ನಡುವೆ ಸ್ವಾತಂತ್ರ್ಯ ಹಾಗೂ ಸಮಾನತೆ ಬಗ್ಗೆ ಆರೋಗ್ಯಕರ ಪೈಪೋಟಿ ನಡೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಆಗುತ್ತದೆ ಎಂದರು.
ಮಹಿಳೆಯರ ಪಾತ್ರ ಪ್ರಮುಖ: ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ಹಾಗೂ ಸುಂದರ ಕುಟುಂಬ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಎಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವಿಸುತ್ತಾರೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದರು.
ಪುರುಷ ಪ್ರಧಾನ ಸಮಾಜದಲ್ಲಿ ಅನೇಕ ಸಂದರ್ಭಗಳಲ್ಲಿ ಸನ್ನಿವೇಶಗಳು ನಿರ್ಮಾಣವಾಗುತ್ತಿದ್ದು, ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಮಹಿಳೆಯರಲ್ಲಿ ಈ ಬಗ್ಗೆ ಅರಿವು ಇಲ್ಲದೆ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಇಂತಹ ಅನೇಕ ಪ್ರಕರಣಗಳಲ್ಲಿ ಹೆಣ್ಣಿಗೆ ಹೆಣ್ಣು ಶತ್ರುವಾಗಿ ನಡೆದುಕೊಂಡಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.
ಸೊಸೆಯನ್ನು ಮಗಳಂತೆ ಕಾಣಿ: ಅಪರ ಸಿವಿಲ್ ಹೆಚ್ಚುವರಿ ನ್ಯಾಯಾಧೀಶರಾದ ದೀಪಾ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರಲ್ಲಿ ಪುರುಷರಿಗೆ ಸರಿಸಮನಾದ ಎಲ್ಲಾ ರೀತಿಯ ಸಾಮರ್ಥ್ಯಗಳು ಇವೆ. ಪ್ರತಿಯೊಬ್ಬ ಅತ್ತೆಯು ಸೊಸೆಯನ್ನು ತನ್ನ ಮಗಳೆಂದು ಕಾಣುವ ಸಂಸ್ಕಾರ ಬೆಳೆದಾಗ ಮಾತ್ರ ಕುಟುಂಬದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಶೋಷಿತ ಮಹಿಳೆಯರ ರಕ್ಷಣೆಗಾಗಿ ನಿಲ್ಲುವ ಆತ್ಮವಿಶ್ವಾಸವನ್ನು ಅವರು ಬೆಳೆಸಿಕೊಂಡಾಗ ಮಾತ್ರ ಸರ್ಕಾರ ಮಹಿಳೆಯರಿಗಾಗಿ ಮಾಡಿರುವ ಕಾನೂನುಗಳನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪರಸ್ಪರ ಸಹಕಾರ ಅಗತ್ಯ: ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ್ ಮಾತನಾಡಿ, ಒಂದು ಗಂಡಿನ ಶ್ರೇಯಸ್ಸಿನ ಹಿಂದೆ ಹೆಣ್ಣು ಹೇಗೆ ಶಕ್ತಿಯಾಗಿ ನಿಲ್ಲುತ್ತಾಳ್ಳೋ, ಒಂದು ಹೆಣ್ಣಿನ ಶ್ರೇಯಸ್ಸಿನ ಹಿಂದೆ ಗಂಡಿನ ಪರಿಶ್ರಮ ಇರುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದರು. ಮಂಗಳೂರಿನ ಸಂತ ಆಗ್ನೇಷಿಯಸ್ ಕಾಲೇಜಿನ ಉಪನ್ಯಾಸಕಿ ಮಾಲತಿ ಹೆಬ್ಟಾರ್ ಸಮಾಜದಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಲೋಕೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಗೀತಾ, ಸರ್ಕಾರಿ ಸಹಾಯಕ ವಕೀಲರಾದ ಶಿವಮ್ಮ ಹಾಗೂ ಹಿರಿಯ ವಕೀಲರಾದ ಮಲ್ಲೇಶ್,ರವಿಶಂಕರ್ ಬಿ.ಎನ್.ರವಿ, ಕೆ.ವಿ.ಹಿರಿಯಣ್ಣಯ್ಯ, ಸಿದ್ದಮಲ್ಲಪ್ಪ, ಕಲ್ಯಾಣ್ ಕುಮಾರ್ ಉಪಸ್ಥಿತರಿದ್ದರು.