Advertisement

ಅರ್ಕಾವತಿ ನದಿ ಪಾತ್ರದ ಕೆರೆ ಉಳಿವಿಗಾಗಿ ಹೋರಾಟ

04:15 PM Oct 19, 2022 | Team Udayavani |

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಜಲ ಮೂಲಗಳಿಗೆ ವಿಷಯುಕ್ತ ಹಾಗೂ ತ್ಯಾಜ್ಯ ಹರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಉಳಿಸುವ ನಿಟ್ಟಿನಲ್ಲಿ ಕೆರೆ ಉಳಿಸಬೇಕಾದ ಹೊಣೆಗಾರಿಕೆಯಿದ್ದು, ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯಿಂದ, ಅ.20ರಂದು ರಾಜ್ಯ ಹೆದ್ದಾರಿ ತಡೆ ಚಳವಳಿಯನ್ನು ನಡೆಸುವ ಮೂಲಕ ತೀವ್ರ ಹೋರಾಟದ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೇಳಿದೆ.

Advertisement

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೇದಿಕೆ ಮುಖಂಡ ತಿ.ರಂಗರಾಜ್‌ ಮಾತನಾಡಿ, ಅರ್ಕಾವತಿ ನದಿ ಪಾತ್ರಕ್ಕೆ ವಿಷಯುಕ್ತ ಹಾಗೂ ಮಲಮೂತ್ರ ತ್ಯಾಜ್ಯ ಹರಿಸುತ್ತಿರುವವರ ವಿರುದ್ಧ ಸ್ಥಳೀಯ ಜನರಾದ ನಾವು ಕಳೆದ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಬಾಶೆಟ್ಟಿಹಳ್ಳಿ ಪಪಂ, ಕೈಗಾರಿಕಾ ಪ್ರದೇಶ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವುದು, ಮೂರು ಹಂತದಲ್ಲಿ ನೀರನ್ನು ಸಂಸ್ಕರಿಸಬೇಕೆಂದು ಒತ್ತಾಯಿಸಿ, ಸರ್ಕಾರ ಹಾಗೂ ಸಚಿವರ ಗಮನಕ್ಕೆ ತರಲು ಅ.20ರಂದು ಬಾಶೆಟ್ಟಿಹಳ್ಳಿ ಬಳಿ ಮೆಡಿಷನ್‌ ಪ್ಯಾಕ್ಟರಿ ಸರ್ಕಲ್‌ ಬಳಿ ದೊಡ್ಡಬಳ್ಳಾಪುರ-ಬೆಂಗಳೂರು ರಾಜ್ಯ
ಹೆದ್ದಾರಿ ರಸ್ತೆ ತಡೆ ನಡೆಸಲಾಗುತ್ತಿದೆ ಎಂದರು.

ನಗರಸಭೆಯ ನಿರ್ಲಕ್ಷ್ಯ: ನ್ಯಾಯವಾದಿ ಸತೀಶ್‌ ಮಾತನಾಡಿ, ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಒಳಚರಂಡಿ ನೀರಿಗೆ ಸೇರಿ, ನಗರಸಭೆಯ ನಿರ್ಲಕ್ಷ್ಯದಿಂದ ನೇರವಾಗಿ ನಾಗರಕೆರೆ ಮೂಲಕ ಆರ್ಕಾವತಿ ನದಿ ಪಾತ್ರದ ಕೆರೆ ಸೇರುತ್ತಿದೆ. ಹಾಗೆಯೇ ಬಾಶೆಟ್ಟಿಹಳ್ಳಿ ಕೈಗಾರಿಕಾ ವಲಯದಲ್ಲಿ ಸಾವಿರಾರು ಕೈಗಾರಿಕೆಗಳಿವೆ. ಇವುಗಳಲ್ಲಿ ಅರ್ಧದಷ್ಟು ಕೈಗಾರಿಕೆ ರಾಸಾಯನಿಕಯುಕ್ತ ಪದಾರ್ಥ ಬಳಸಿ ಉತ್ಪಾದನಾ ಚಟುವಟಿಕೆಯನ್ನು ನಡೆಸುತ್ತವೆ. ಈ ಎಲ್ಲಾ ಮಾಲಿನ್ಯವು ಯಾವುದೇ ಸಂಸ್ಕರಣೆ ಆಗದೆ ನೇರವಾಗಿ ಕೆರೆಗಳಿಗೆ ಸೇರಿ ಮೀನುಗಳು ಸತ್ತಿರುವ ಉದಾಹರಣೆಗಳಿವೆ ಎಂದರು.

ಬಳಕೆಗೆ ಯೋಗ್ಯವಲ್ಲ: ಕಳೆದ ನಾಲ್ಕಾರು ವರ್ಷಗಳಲ್ಲಿ ಇಲ್ಲೆಲ್ಲ ನೂರಾ ಹಸು, ಕುರಿ-ಮೇಕೆ, ಪಕ್ಷಿಗಳು ನೀರು ಕುಡಿದು ಸತ್ತಂತ ನಿದರ್ಶನಗಳಿವೆ. ನೀರಿನ ಒಳಗಿನ ಘನತ್ಯಾಜ್ಯ ಹಾಗೂ ರಾಸಾಯನಿಕ ತ್ಯಾಜ್ಯ ಅತಿಯಾಗಿ ಬಳಕೆಗೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹೋರಾಟದಲ್ಲಿ ಕೇವಲ ಈ ವ್ಯಾಪ್ತಿಯ ಜನರಲ್ಲದೆ ನಗರವಾಸಿ, ಸಂಘ-ಸಂಸ್ಥೆಗಳು ಭಾಗವಹಿಸುತ್ತಿದ್ದಾರೆ.

ಗ್ರಾಪಂನಿಂದ ಜಿಲ್ಲಾಡಳಿತದವರೆಗೆ ಎಲ್ಲರೂ ಸಹ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆ, “ನಮ್ಮ ಉಳಿವಿನ ಹೋರಾಟ’ದ ಹಂತವಾಗಿ ನೂರಾರು ಹಳ್ಳಿಗಳ ಜನರು ಸೇರಿ ಚಳವಳಿಯನ್ನು ನಡೆಸಲಿದ್ದೇವೆ ಎಂದರು. ಪರಿಸರ ಚಿಂತಕ ಅದ್ದೆ ಮಂಜುನಾಥ್‌ ಮಾತನಾಡಿ, ಘನ ತ್ಯಾಜ್ಯ, ರಾಸಾಯನಿಕ ತ್ಯಾಜ್ಯದಿಂದ ನೀರು ಮಲಿನಗೊಳ್ಳುತ್ತದೆ. ಈ ಸಮಸ್ಯೆ ಕಳೆದ 10 ವರ್ಷದಿಂದ ಕೇವಲ ಎರಡು ಪಂಚಾಯಿತಿ ತಟ್ಟಿತ್ತು.

Advertisement

ಈಗ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರಿನೊಂದಿಗೆ ಹೆಸರಘಟ್ಟ ಕೆರೆಗೆ ಹರಿದಿದೆ. ಕುಡಿಯುವ ನೀರಿನ ಪಾವಿತ್ರತೆ ಆರೋಗ್ಯದ ಗುಟ್ಟಾಗಿದೆ. ಈ ವ್ಯಾಪ್ತಿಯಲ್ಲಿ ಪ್ಲಾಂಟ್‌ ಮೂಲಕ ಸಂಸ್ಕರಿಸಿದರೂ, ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ಬಾಶೆಟ್ಟಿಹಳ್ಳಿ ಪಪಂ ವ್ಯಾಪ್ತಿ, ನಗರಸಭೆ ವ್ಯಾಪ್ತಿಯಲ್ಲಿ ಮೂರು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಲು ಘಟಕ ಸ್ಥಾಪಿಸಬೇಕೆಂಬುದು ಒಕ್ಕೊರಲ ಒತ್ತಾಯವಾಗಿದೆ ಎಂದರು.

ಅಭಿವೃದ್ಧಿ ವಿರೋಧಿಗಳಲ್ಲ: ನಾವ್ಯಾರು ಅಭಿವೃದ್ಧಿ ವಿರೋಧಿಗಳಲ್ಲ, ಯಾವುದೇ ಪಕ್ಷದ ವಿರುದ್ಧವಲ್ಲ. ನಮ್ಮ ಹೋರಾಟ ಜನರ ಜೀವದ ಉಳಿವಿಗಾಗಿ ಮಾತ್ರ. ಕಾರ್ಖಾನೆ ಯಾವುದೇ ಸ್ಥಾಪಿಸಿ ಅಭಿವೃದ್ಧಿ ಮಾಡಲಿ. ಆದರೆ, ಪರಿಸರ ಉಳಿವಿಗಾಗಿ, ಜನರ ಜೀವದ ರಕ್ಷಣೆ ಮಾಡಬೇಕು ಎಂದು ಹೇಳಿದರು. ದೊಡ್ಡತುಮಕೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್‌, ಮುಖಂಡ ಮಂಜುನಾಥ್‌, ನಿವೃತ್ತ ಪೊಲೀಸ್‌ ಅಧಿಕಾರಿ ತು.ಹ.ನಾಗರಾಜ್‌, ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಪ್ರಮೀಳಾಮಹದೇವ್‌, ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಆನಂದ್‌, ಮಾಜಿ ಅಧ್ಯಕ್ಷ ಸಂದೇಶ್‌, ದೊಡ್ಡತುಮಕೂರು ಗ್ರಾಪಂ ಸದಸ್ಯ ಲೋಕೇಶ್‌,
ಮುಖಂಡ ನಾಗರಾಜು, ಲೋಕೇಶ್‌, ಆನಂದ್‌, ವಿಜಯಕುಮಾರ್‌ ಮತ್ತಿತರರಿದ್ದರು.

ಪರಿಸರ ಉಳಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿದ್ಧ: ಆನಂದ್‌ ಪರಿಸರ ನಾಶಕ್ಕೆ ಕಾರಣರಾಗುತ್ತಿರುವ ಕೈಗಾರಿಕಾ ಉದ್ಯಮಿ ಹಾಗೂ ಸ್ಥಳೀಯ ಕೆಲವರು ಹಣ ಮತ್ತಿತರ ಆಮಿಷಕ್ಕೆ ಮಣಿದು, ಪರಿಸರ ನಾಶವಾಗುತ್ತಿದ್ದರೂ, ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಅಂತವರು ಮಾಡಿದ ಪಾಪವನ್ನು ಇಲ್ಲಿಯೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕಿದೆ. ಈ ಮುಂಚೆ ಸ್ಥಳೀಯರು ಹೋರಾಟಕ್ಕೆ ಮುಂದಾದರೆ ಬೆದರಿಕೆ ಒಡ್ಡಿದ್ದರು. ಈಗ ಅಂತಹ ಯಾವುದೇ ಬೆದರಿಕೆಗೆ ಮಣಿಯದೆ ಪರಿಸರ ಉಳಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ನಮ್ಮ ಸಮಸ್ಯೆ ಇತರರಿಗೆ ಅರಿವಾಗಲೆಂದು ಪರಿಸರ ಕೂಡ ನಮಗೆ ಸ್ಪಂದಿಸುತ್ತಿದೆ. ಇಲ್ಲಿನ ತ್ಯಾಜ್ಯ ನೀರು ಹೆಸರಘಟ್ಟ ಕೆರೆಗೆ ಹರಿಯುವ ಮೂಲಕ ನಮಗಾಗುತ್ತಿರುವ ಸಮಸ್ಯೆ ಬೆಂಗಳೂರಿಗ ತಟ್ಟಿದೆ ಎಂದು ಬಮೂಲ್‌ ನಿರ್ದೇಶಕ ಬಿ.ಸಿ.ಆನಂದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next