Advertisement

ರಾಹುಲ್‌-ಮೋದಿ ನಡುವಿನ ಹೋರಾಟ

09:47 AM Apr 05, 2019 | Team Udayavani |

ಬೆಂಗಳೂರು: ಈ ಚುನಾವಣೆ ರಾಹುಲ್‌ಗಾಂಧಿ ಮತ್ತು ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಹೋರಾಟವಾಗಿದೆ. ದೇಶದ ಜನರು ಪ್ರಜ್ಞಾವಂತರಿದ್ದು, ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಜಯ ಸಿಗುತ್ತದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಬೆಂಗಳೂರು ಪ್ರಸ್‌ ಕ್ಲಬ್‌ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ತಮ್ಮ ಐದು ವರ್ಷಗಳ ಸಾಧನೆಗಳನ್ನು ಹೇಳುವ ಬದಲು ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇತ್ತೀಚೆಗೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ಮೋದಿ ಕಳೆದ ಚುನಾವಣೆಯಲ್ಲಿ ಭ್ರಮಾ ಲೋಕವನ್ನೇ ಸೃಷ್ಟಿಸಿದ್ದರು. ಆ ಸಮಯದಲ್ಲಿ ಯುಪಿಎ ಹತ್ತು ವರ್ಷದ ಸರ್ಕಾರದಿಂದ ಜನರು ಬದಲಾವಣೆ ಬಯಸಿದ್ದರು. ಆಗ ಜನರು ಮೋದಿಯನ್ನು ನಂಬಿ ಬೆಂಬಲ ವ್ಯಕ್ತಪಡಿಸಿದ್ದರು. ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸ ಇದೆ. ದೇಶದ ಜನರು ರಾಜಕೀಯವಾಗಿ ಬಹಳ ಪ್ರಬುದ್ದರಾಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆ ದುರ್ಬಲವಾದಾಗ, ಸಂವಿಧಾನ ತೊಂದರೆಗೆ ಒಳಗಾದಾಗ ಜನರು ಅವುಗಳನ್ನು ರಕ್ಷಿಸುತ್ತ ಬಂದಿದ್ದಾರೆ. ಈ ಬಾರಿಯೂ ಜನರು ಪ್ರಜಾಪ್ರಭುತ್ವ ಉಳಿಸುತ್ತಾರೆ ಎಂದರು.

ಮೋದಿಯವರು ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಿಸರ್ವ್‌ ಬ್ಯಾಂಕ್‌, ಸಿಬಿಐ, ಸಿಇಸಿ, ನ್ಯಾಯಾಲಯವು ಬೀದಿಗೆ ಬರುವಂತಹ ಪರಿಸ್ಥಿತಿ ಬಂತು. ಸುಪ್ರೀಂ ಕೋರ್ಟ್‌, ನ್ಯಾಯಾಧೀಶರು ಬಹಿರಂಗವಾಗಿ ಹೇಳುವಂತಾಯಿತು ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡ ಎಲ್ಲರೂ ಚೌಕಿದಾರ್‌ ಎನ್ನುತ್ತಿದ್ದಾರೆ. ದೇಶದ ಜನರು ಆಯ್ಕೆ ಮಾಡಿದ ಮೇಲೆ ದೇಶದ ಹಿತ ಕಾಯುವುದು, ಪಕ್ಕದ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಆಳುವವರ ಜವಾಬ್ದಾರಿ. ಮೋದಿ ನಾನು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇನೆ ಎಂದು ಹೇಳಿದ್ದಾರೆ. ದೇಶದ ಇತಿಹಾಸದಲ್ಲಿ 10ರಿಂದ 12 ಬಾರಿ ಸರ್ಜಿಕಲ್‌ ಸ್ಟ್ರೈಕ್‌ ಆಗಿತ್ತು. ಬಾಂಗ್ಲಾ ಸ್ವತಂತ್ರ ಮಾಡಿದಾಗ ಬಿಜೆಪಿಯವರು ಇದ್ದರಾ ? ಪಾಕಿಸ್ತಾನ ಸೋಲಿಸಿದಾಗ ಮೋದಿ ಇದ್ದರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next