ಕಾಸರಗೋಡು: ದೇಶದ ಸ್ವಾತಂತ್ರ್ಯ ಹೋರಾಟದಿಂದಲೇ ಭಂಡಾಯದ ಧ್ವನಿ ಮೊಳಗಿದಂತೆ ಕಾಸರಗೋಡಿನಲ್ಲಿ ಕನ್ನಡ ಪರ ಹೋರಾಟದಲ್ಲಿ ಭಂಡಾಯದ ಧ್ವನಿಯನ್ನು ಮೊಳಗಿಸುವ ಮೂಲಕ ಹೋರಾಟಕ್ಕೆ ಹೂಸ ಆಯಾಮವನ್ನು ನೀಡಿದವರು ಎಂ.ವಿ.ಬಳ್ಳುಳ್ಳಾಯರು. ಬದುಕಿನುದ್ದಕ್ಕೂ ಕನ್ನಡಿಗರ ಹಕ್ಕಿಗಾಗಿ ಹೋರಾಟ ನಡೆಸಿದ ಅವರು ಎಂದೆಂದೂ ಪ್ರಾತಃಸ್ಮರಣೀಯರು ಎಂದು ಲೇಖಕ ಬಿ.ಆರ್.ಮೂರ್ತಿ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಬೀರಂತಬೈಲ್‌ನ ಕನ್ನಡ ಅಧ್ಯಾಪಕ ಭವನದಲ್ಲಿ ಆಯೋಜಿಸಿದ ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ದಿ|ಎಂ.ವಿ.ಬಳ್ಳುಳ್ಳಾಯರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಗತಿಪರ ನಿಲುವು ಹೊಂದಿದ ಬಳ್ಳುಳ್ಳಾಯರು ಹೊಸ ಆಶಯಗಳ ಮೂಲಕ ಬದುಕಿದವರು. ಕನ್ನಡ ಪರ ಹೋರಾಟಕ್ಕೆ ಶಕ್ತಿ ತುಂಬುತ್ತಾ ಕನ್ನಡಿಗರನ್ನು ಹೋರಾಟಕ್ಕೆ ಅಣಿಗೊಳಿಸಿದವರು. ನಿರಾಡಂಬರ ವ್ಯಕ್ತಿತ್ವದ ಅವರು ಯುವ ತಲೆಮಾರಿಗೆ ಆದರ್ಶಪ್ರಾಯರಾಗಿದ್ದಾರೆಂದು ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಹೇಳಿದರು.
ಕನ್ನಡದ ಹೋರಾಟದ ಜತೆಗೆ ನಾಡ ಪ್ರೇಮಿ ಪತ್ರಿಕೆಯನ್ನು ನಡೆಸುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು. ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಲೇ ಬಂದ ಅವರು ಯಕ್ಷಗಾನವನ್ನು ಮಲಯಾಳಕ್ಕೂ ವಿಸ್ತರಿಸಿದ ಖ್ಯಾತಿ ಅವರಿಗೆ ಸಲ್ಲಬೇಕು ಎಂದು ಹಿರಿಯ ರಂಗ ನಟ ಸುಬ್ಬಣ್ಣ ಶೆಟ್ಟಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದರು.