Advertisement

ಸರಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟ; ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ನಾಯಕರ ಕರೆ

12:09 AM Apr 28, 2022 | Team Udayavani |

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫ‌ಲ್ಯ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಜ್ಯವ್ಯಾಪಿ ಪ್ರತೀ ಬೂತ್‌ ಮಟ್ಟದಲ್ಲಿಯೂ ಹೋರಾಟ ನಡೆಸಿ ಎಂದು ಕಾಂಗ್ರೆಸ್‌ ನಾಯಕರು ಕರೆ ನೀಡಿದ್ದಾರೆ.

Advertisement

ಕೆಪಿಸಿಸಿಗೆ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ನಾಯಕರು, ರಾಜ್ಯ ಬಿಜೆಪಿ ಸರಕಾರದ ಅಕ್ರಮ, ನೇಮಕಾತಿಗಳಲ್ಲಿನ ಭ್ರಷ್ಟಾಚಾರ ಕುರಿತು ಜನರಿಗೆ ತಿಳಿಸಿ ಸರಕಾರ ಕಿತ್ತೂಗೆಯಬೇಕು. ಪದಾಧಿಕಾರಿಗಳು ಆಂದೋಲನದ ರೂಪದಲ್ಲಿ ಹೋರಾಟ ರೂಪಿಸಬೇಕು ಎಂದು ಹೇಳಿದರು.

ಸರಕಾರದಿಂದಲೇ ಭ್ರಷ್ಟರ ರಕ್ಷಣೆ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಲು ಸಾಲು ಹಗರಣಗಳು ನಡೆಯಲು ಆರಂಭವಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಾಗಿದ್ದಕ್ಕೆ ಆಕೆಯನ್ನು ಈವರೆಗೂ ಬಂಧಿಸಿಲ್ಲ. ಆಕೆ ಜಾಮೀನು ತೆಗೆದುಕೊಳ್ಳಲಿ ಎಂದು ಕಾಯುತ್ತಿದ್ದಾರೆ. ಭ್ರಷ್ಟರನ್ನು ರಕ್ಷಿಸುವ ಕೆಲಸ ಸರಕಾರ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರಿದ್ದರು.

ಪಕ್ಷದಲ್ಲಿ ತೊಡಗಿಸಿಕೊಳ್ಳಿ: ಸಿದ್ದರಾಮಯ್ಯ
ಸಭೆಯ ಅನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ , ಪ್ರದೇಶ ಕಾಂಗ್ರೆಸ್‌ಗೆ ನೂತನವಾಗಿ 40 ಜನ ಉಪಾಧ್ಯಕ್ಷರು ಹಾಗೂ 109 ಜನ ಪ್ರಧಾನ ಕಾರ್ಯದರ್ಶಿಗಳು ನೇಮಕವಾಗಿದ್ದಾರೆ. ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದೆ. ನಮ್ಮ ಬಳಿ ಹೆಚ್ಚು ಸಮಯ ಇಲ್ಲದೆ ಇರುವುದರಿಂದ ಇಂದಿನಿಂದ ದಿನದ 24 ಗಂಟೆ ಕೆಲಸ ಮಾಡಬೇಕು ಎಂದು ಪಕ್ಷದ ಹಿರಿಯ ನಾಯಕರೆಲ್ಲ ಸೇರಿ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ನಮ್ಮ ಕಾಂಗ್ರೆಸ್‌ ಸರಕಾರದ ಸಾಧನೆಯನ್ನು ಜಿಲ್ಲಾವಾರು, ತಾಲೂಕುವಾರು ಜನರಿಗೆ ತಿಳಿಸಲು ಜವಾಬ್ದಾರಿ ಹಂಚಲಾಗಿದೆ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ಕಾರ್ಯಕ್ರಮ ರೂಪಿಸಿದ್ದೇವೆ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next