Advertisement
ರವಿವಾರ ದಸಂಸದವರು ಶಾಲಾ ಕ್ರೀಡಾಂಗಣಕ್ಕೆ ಬೇಲಿ ಹಾಕಿದ್ದರು. ಬುಧವಾರ ಪೊಲೀಸರು ಮತ್ತು ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಲೆಯ ಹೆಸರಲ್ಲಿ ದಾಖಲೆ ಇದ್ದು ಅತಿಕ್ರಮಣವನ್ನು ತೆರವುಗೊಳಿಸುವುದೆಂದು ತೀರ್ಮಾನಿಸಲಾಗಿತ್ತು. ಶಾಲಾಭಿವೃದ್ಧಿ ಸಮಿತಿಯು (ಎಸ್‌ಡಿಎಂಸಿ) ಶಾಸಕರಿಗೆ, ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗೆ ಬೇಲಿ ತೆರವು ಮಾಡಿಸಿ ಶಾಲೆಗೆ ಬಿಟ್ಟು ಕೊಡಬೇಕು ಎಂದು ಮನವಿ ಮಾಡಿತ್ತು.
ತಹಶೀಲ್ದಾರರ ಆದೇಶದಂತೆ ಗುರುವಾರ ಮಣೆಗಾರರು ಸ್ಥಳಕ್ಕೆ ಆಗಮಿಸಿ ಶಾಲೆಯ ಜಾಗವನ್ನು ಗೊತ್ತುಪಡಿಸಿದರು. ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯರು ಬೇಲಿ ತೆಗೆಯಲು ಮುಂದಾದಾಗ ಡಿಎಸ್‌ಎಸ್‌ನವರು ವಿರೋಧ ವ್ಯಕ್ತಪಡಿಸಿದರು. ಮಣೆಗಾರರು, ಗ್ರಾಮ ಕರಣಿಕರು, ಪೊಲೀಸರು ಸ್ಥಳದಲ್ಲಿದ್ದು ಅವರನ್ನು ತರಾಟೆಗೆ ತೆಗೆದು ಕೊಂಡ ದಸಂಸದವರು ಜೀವ ಬೇಕಾದರೂ ಬಿಡುತ್ತೇವೆ ಜಾಗ ಬಿಡುವುದಿಲ್ಲ ಎಂದು ಕೂಗಾಡಿದರು. ವಿರೋಧದ ಮಧ್ಯೆಯೇ ಪೊಲೀಸ್ ಭದ್ರತೆಯಲ್ಲಿ 2 ಜೇಸಿಬಿಗಳ ಮೂಲಕ ಬೇಲಿ ತೆರವುಗೊಳಿಸಿ ಕಾಂಪೌಂಡ್ ನಿರ್ಮಾಣಕ್ಕೆ ಪಾಯ ತೆಗೆಯುವ ಕಾರ್ಯ ಪ್ರಾರಂಭಿಸಲಾಯಿತು. ತಾ| ದಲಿತ ಸಂಘರ್ಷ ಸಮಿತಿಯವರು ಜಮಾಯಿಸಿದ್ದು ಪರಿಸ್ಥಿತಿ ಉದ್ವಿಗ್ನವಾಗಿತ್ತು. ಕೆಎಸ್‌ಆರ್‌ಪಿ ತುಕಡಿ
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಪುಂಜಾಲಕಟ್ಟೆ ಪೊಲೀಸರು ಆಗಮಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಮನಗಂಡು ಮಂಗಳೂರಿನಿಂದ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳಕ್ಕೆ ಕರೆಸಲಾಯಿತು.
Related Articles
ಬೆಳಗ್ಗೆ ಆರಂಭವಾದ ಮಾತಿನ ಚಕಮಕಿ ಸಂಜೆ ವರೆಗೆ ನಡೆಯಿತು. ಪಾಯ ತೆಗೆಯುತ್ತಿದ್ದಾಗ ಅರ್ಧದಲ್ಲಿ ನಿಲ್ಲಿಸಿದ ಡಿಎಸ್‌ಎಸ್‌ನವರು ಡಿಸಿ ಮನ್ನಾ ಜಾಗಕ್ಕೆ ಬಂದು ನಮ್ಮ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು ಜೇಸಿಬಿ ಆಪರೇಟರ್ ಮತ್ತು ಮಣೆಗಾರರ ಮೇಲೆ ಅಟ್ರಾಸಿಟಿ ಕೇಸ್ ಹಾಕುವುದಾಗಿ ಬೆದರಿಕೆ ಒಡ್ಡಿದರು. ಬೇಲಿ ತೆರವು ಮಾಡಿದಕ್ಕೆ ವಿರೋಧವಿಲ್ಲ ಆದರೆ ಪಾಯ ತೆಗೆದದ್ದು ಅಪರಾಧ. ಅದನ್ನು ಮುಚಿ ಯಥಾಸ್ಥಿತಿ ಮಾಡುವವರೆಗೆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
Advertisement
ಶಾಲೆ ಹೆಸರಲ್ಲಿ ದಾಖಲೆ1966ರಲ್ಲಿ ಶಾಲೆಯ ಹೆಸರಲ್ಲಿ ರೆಕಾರ್ಡ್ ಆಗಿದ್ದು ಶಾಲಾ ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ. ಶಾಲಾ ಮಕ್ಕಳಿಗೆ ಬೇರೆ ಆಟದ ಮೈದಾನ ಇಲ್ಲ. ಶಾಲಾ ಜಾಗಕ್ಕೆ ಏಕಾಏಕಿ ಬೇಲಿ ಹಾಕಿದ್ದು ಸರಿಯಲ್ಲ. ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಅವರ ಆದೇಶದ ಮೇರೆಗೆ ತೆರವು ಮಾಡಿದ್ದೇವೆ ಎಂದು ತಾ.ಪಂ. ಸದಸ್ಯ ಜೋಯೆಲ್ ಮೆಂಡೊನ್ಸಾ ಹೇಳಿದರು. ಶಾಲೆಗೆ ಕೊಡಲು ಅಭ್ಯಂತರವಿಲ್ಲ
ಇದು ಡಿಸಿ ಮನ್ನಾ ಜಾಗ ಎನ್ನುವುದಕ್ಕೆ ದಾಖಲೆ ಇದೆ. ಡಿಸಿ ಮನ್ನಾ ಜಾಗದಲಿತರಿಗೆ ಸೇರಿದ್ದು ನಮ್ಮ ಜಾಗಕ್ಕೆ ಬೇಲಿ
ಹಾಕುವ ಅಧಿಕಾರ ನಮಗಿದೆ. ಆದರೆ ತಹಶೀಲ್ದಾರರ ಅಧಿಕೃತ ಆದೇಶ ಇಲ್ಲದೆ ಬೇಲಿ ತೆಗೆದದ್ದು ತಪ್ಪು, ಬೇಲಿ ತೆಗೆಯಲು ಆದೇಶವಿದ್ದರೆ ತೆಗೆಯಲಿ ಆದರೆ ಪಾಯ ತೆಗೆಯಲು ಆದೇಶ ನೀಡಿಲ್ಲ. ಅದನ್ನು ನಾವು ವಿರೋಧಿಸುತ್ತೇವೆ. ಶಾಲೆಗೆ ಜಾಗ ಶಾಲೆಗೆ ಬಿಟ್ಟು ಕೊಡಲು ನಮ್ಮ ಅಭ್ಯಂತರ ಇಲ್ಲ; ಆದರೆ ಶಾಲಾ ಮಕ್ಕಳಿಗೆ ಮಾತ್ರ ಅಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಡಬೇಕು. ಆಟದ ಮೈದಾನ ಅಭಿವೃದ್ಧಿಪಡಿಸಲು ಜಿ.ಪಂ. ಅನುದಾನದಲ್ಲಿ ನಾನು ಕೂಡ 1 ಲಕ್ಷ ರೂ. ಅನುದಾನ ನೀಡುತ್ತೇನೆ, ಆದರೆ ತೆಗೆದ ಪಾಯ ಮುಚ್ಚಿ ಯಥಾಸ್ಥಿತಿ ಮಾಡಿ ಕೊಡಬೇಕು ಇಲ್ಲದಿದ್ದಲ್ಲಿ ಹೋರಾಟ ನಿಲ್ಲದು ಎಂದು ಡಿಎಸ್‌ಎಸ್ ಸಂಚಾಲಕ, ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಹೇಳಿದರು. ಪಾಯದ ಹೊಂಡಕ್ಕೆ ಮಣ್ಣು
ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಪಾಯ ತೆಗೆಯುವ ಕಾರ್ಯ ನಡೆದಿದ್ದು ಮುಕ್ಕಾಲು ಭಾಗ ಕೆಲಸ ಆಗಿದೆ. ತಹಶೀಲ್ದಾರರು ಬರುವ ವರೆಗೆ ಹೀಗೇ ಇರಲಿ; ಬಳಿಕ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳೋಣ ಎಂದು ತೀರ್ಮಾನಿಸಲಾಯಿತು. ಅದನ್ನು ವಿರೋಧಿಸಿದ ಹೋರಾಟಗಾರರು ಪಾಯ ಮುಚ್ಚದೆ ಜೇಸಿಬಿ ತೆಗೆಯಬಾರದು ಎಂದು ತಾಕೀತು ಮಾಡಿದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಸ್ಥಳಕ್ಕೆ ಆಗಮಿಸಿದ್ದು ಹೋರಾಟಗಾರರ ಮನವೊಳಿಸಲು ಪ್ರಯತ್ನಿಸಿದರು. ಯಾವುದಕ್ಕೂ ಬಗ್ಗದ ಹೋರಾಟಗಾರರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ದಸಂಸದ ಹೋರಾಟಕ್ಕೆ ಮಣಿದ ಶಾಲಾಭಿವೃದ್ಧಿ ಸಮಿತಿಯವರು ಸಂಜೆ ವೇಳೆಗೆ ಕಾಂಪೌಂಡ್‌ಗೆಂದು ತೆಗೆದ ಪಾಯವನ್ನು ಮುಚ್ಚಲಾರಂಭಿಸಿದ್ದಾರೆ.