Advertisement

“ಭ್ರೂಣಲಿಂಗ ಪತ್ತೆ ಪ್ರಕರಣ ಕಡಿಮೆ; ಸಂತಸದ ಸಂಗತಿ’

01:00 AM Feb 27, 2019 | Harsha Rao |

ಉಡುಪಿ: ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣಗಳು ಕಡಿಮೆಯಾಗುತ್ತಿರುವುದು ಸಂತಸದ ಸಂಗತಿ. ಈ ಬಗ್ಗೆ ಮಾಹಿತಿ ನೀಡುವಂತಹ ಕಾರ್ಯಕ್ರಮಗಳು ಇಂತಹ ಕಾರ್ಯಾಗಾರಗಳಿಂದ ನಡೆಯಬೇಕು ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಕ್ಷಮ ಪ್ರಾಧಿಕಾರ ಪಿಸಿ ಮತ್ತು ಪಿ.ಎನ್‌.ಡಿ.ಟಿ. ಉಡುಪಿ ಇದರ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಂಡ ವಿಧಿಸುವ ಅಧಿಕಾರ
ಆರೋಗ್ಯ ಅಧಿಕಾರಿ ರೋಹಿಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಜನರಿಗೆ ಆರೋಗ್ಯದ ಬಗ್ಗೆ ಅರಿವು ಅಗತ್ಯ. ಹೆಣ್ಣು ಮಗು ಎಂದು ತಿಳಿದು ಭ್ರೂಣ ಹತ್ಯೆ ಮಾಡುವಂತಹ ಕೆಲಸ ಶಿಕ್ಷಾರ್ಹ ಅಪರಾಧವಾಗಿದೆ. ನೋಂದಾಯಿತ ವೈದ್ಯರು ಈ ಕೆಲಸ ಮಾಡಿದರೆ 3 ವರ್ಷ ಜೈಲು ಅಥವಾ 50 ಸಾವಿರ ರೂ. ದಂಡ ವಿಧಿಸುವ ಅಧಿಕಾರವೂ ಇದೆ ಎಂದರು.

ಮಹಿಳೆಯರಿಗೆ ಪ್ರೋತ್ಸಾಹ ಅಗತ್ಯ
ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಪ್ರಸೂತಿ ತಜ್ಞರಾದ ಡಾ| ಪ್ರತಾಪ್‌ ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳವಾಗಬೇಕು. ಸಮಾಜದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದರು.

ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಮಾತನಾಡಿ, ಲಿಂಗತಾರತಮ್ಯದಿಂದ ಸಮಾಜದಲ್ಲಿ ಅನಾಚಾರ ಹೆಚ್ಚಾಗುತ್ತಿದೆ. ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಮುಂದುವರಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸ್ತ್ರೀರೋಗ ತಜ್ಞೆ ಡಾ| ಶುಭಗೀತಾ, ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ರಾಮರಾವ್‌ ಉಪಸ್ಥಿತರಿದ್ದರು. 
ತಾಲೂಕು ಅಧಿಕಾರಿ ನಾಗರತ್ನಾ ಸ್ವಾಗತಿಸಿದರು. ಡಾ| ಜಿ.ಶಂಕರ್‌ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್‌ ಪ್ರೊ| ಡಾ| ರಾಜೇಂದ್ರ ಕೆ. ಸಂಪನ್ಮೂಲ ವ್ಯಕ್ತಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next