Advertisement

ಹಬ್ಬದ ಕಸ ಎಲ್ಲೆಂದರಲ್ಲಿ ಸುರಿದರೆ ಭಾರೀ ದಂಡ

07:17 AM Jan 15, 2019 | Team Udayavani |

ಬೆಂಗಳೂರು: ಮಕರ ಸಂಕ್ರಾಂತಿಗೆ ಉದ್ಭವಿಸಬಹುದಾದ ಕಸದ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಎಲ್ಲೆಂದರಲ್ಲಿ ಕಸ ಎಸೆಯುವ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಭಾರಿ ದಂಡ ವಿಧಿಸಲು ಮುಂದಾಗಿದೆ.

Advertisement

ಹಬ್ಬದ ಹಿನ್ನೆಲೆಯಲ್ಲಿ ಬಾಳೆಕಂದು, ಕಬ್ಬು, ಹೂ ಮತ್ತಿತರ ಸಾಮಗ್ರಿಗಳು ಮಾರಾಟವಾಗದೆ ಇದ್ದರೆ ವ್ಯಾಪಾರಿಗಳು ಎಲ್ಲೆಂದರಲ್ಲಿ ಎಸೆದು ಹೋಗುವುದು ಸರ್ವೆ ಸಾಮಾನ್ಯ. ಅದರಿಂದಾಗಿ ಮಾರುಕಟ್ಟೆ ಪ್ರದೇಶಗಳಲ್ಲಿ ಕಸದ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ಮಾರಾಟವಾಗದಿದ್ದರೆ ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ, ಕಸ ಹಾಕಲು ಬಿಬಿಎಂಪಿ ನಿಗದಿ ಮಾಡುವ ಸ್ಥಳಗಳಲ್ಲೇ ಹಾಕಬೇಕು. ಇದನ್ನು ಮೀರಿದವರಿಗೆ ಸಾಮಾನ್ಯ ದಂಡಕ್ಕಿಂತ ದುಪ್ಪಟ್ಟು ದಂಡ ವಿಧಿಲು ನಿರ್ಧರಿಸಿದೆ.

ಅದೇ ರೀತಿ, ಸಾರ್ವಜನಿಕರು ತಮ್ಮ ಮನೆ, ಅಂಗಡಿಗಳಲ್ಲಿ ಪೂಜೆ ಮಾಡಿದ ನಂತರ ಉತ್ಪತ್ತಿಯಾಗುವ ಹಬ್ಬದ ತ್ಯಾಜ್ಯವನ್ನು ಬಾಗಿಲಿಗೆ ಬರುವ ಆಟೋ ಟಿಪ್ಪರ್‌ಗಳಿಗೇ ನೀಡಬೇಕು. ಅದು ಬಿಟ್ಟು, ಎಲ್ಲೆಂದರಲ್ಲಿ ಎಸೆದು ಬ್ಲ್ಯಾಕ್‌ಸ್ಪಾಟ್‌ ಸೃಷ್ಟಿಸಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೀಗೆ ಕಸ ಎಸೆಯುವವರ ಮೇಲೆ ನಿಗಾ ಇಡಲು ವಾರ್ಡ್‌ ಮಟ್ಟದಲ್ಲಿ ನೇಮಕ ಮಾಡಿರುವ ಮಾರ್ಷಲ್‌ಗ‌ಳಿಗೆ ಸೂಚಿಸಲಾಗಿದೆ ಎಂದೂ ಎಚ್ಚರಿಸಿದೆ.

ಪ್ರತಿ ಹಬ್ಬದಲ್ಲೂ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದು ಕಸದ ಸಮಸ್ಯೆ ಹೆಚ್ಚುವಂತೆ ಮಾಡುತ್ತಾರೆ. ಅಲ್ಲದೆ, ಹಬ್ಬ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿಗೆ ಕನಿಷ್ಠ ಎರಡರಿಂದ ಮೂರು ದಿನಗಳು ಬೇಕಾಗುತ್ತದೆ. ಆದ್ದರಿಂದ ಈ ಬಾರಿ ಕಸದ ಸಮಸ್ಯೆ ಉದ್ಭವವಾಗುವುದನ್ನು ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಮಾರುಕಟ್ಟೆ ಸೇರಿ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಹೆಚ್ಚುವರಿ ವಾಹನ, ಪೌರಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ. ಜತೆಗೆ ಎಲ್ಲೆಂದರಲ್ಲಿ ಕಸ ಎಸೆಯುವವರು ಮತ್ತು ವ್ಯಾಪಾರಿಗಳ ಮೇಲೂ ನಿಯಂತ್ರಣ ಹೇರಲಾಗುತ್ತಿದೆ ಎಂದು ತಿಳಿಸಿದೆ. 

ಅಕ್ರಮ ವಾಣಿಜ್ಯ ಚಟುವಟಿಕೆ ವಿರುದ್ಧ ಕ್ರಮಕ್ಕೆ ಸ್ವಾಗತ 
ಬೆಂಗಳೂರು:
ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ತಲೆಯೆತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ಉದ್ದಿಮೆಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಮುಚ್ಚಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ  ನಿರ್ದೇಶಕ ಎನ್‌.ಆರ್‌. ಸುರೇಶ್‌ ಒತ್ತಾಯಿಸಿದ್ದಾರೆ. 

Advertisement

ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ಹೋಟೆಲ್, ಕ್ಲಬ್‌, ಪಬ್‌, ಬಾರ್‌ ಆಂಡ್‌ ರೆಸ್ಟೋರೆಂಟ್‌, ಮಸಾಜ್‌ ಪಾರ್ಲರ್‌, ಐಟಿ ಕಚೇರಿ ಸೇರಿದಂತೆ ಮತ್ತಿತರ ವಾಣಿಜ್ಯ ಚಟುವಟಿಕೆಗಳನ್ನು ಮುಚ್ಚಲು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನಿರ್ದೇಶನ ನೀಡಿರುವುದು ಸ್ವಾಗತಾರ್ಹ. ಅಲ್ಲದೆ, ಅಕ್ರಮ ವಾಣಿಜ್ಯ ಸಂಸ್ಥೆಗಳಿಗೆ ನೀಡಿದ ವ್ಯಾಪಾರ ಪರವಾನಗಿಗಳನ್ನು ರದ್ದುಗೊಳಿಸಲು ಮತ್ತು ಮುಚ್ಚಲು ಬಿಬಿಎಂಪಿ ತೆಗೆದುಕೊಂಡ ಕ್ರಮ ಕೂಡ ಶ್ಲಾಘನೀಯ.

ವಸತಿ ಪ್ರದೇಶಗಳಲ್ಲಿರುವ ಅಕ್ರಮ ವಾಣಿಜ್ಯ ಸಂಸ್ಥೆಗಳು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗುತ್ತವೆ. ಜತೆಗೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ಪೂರೈಕೆ ಮೇಲೆ ಅನೌಪಚಾರಿಕ ಒತ್ತಡವನ್ನುಂಟು ಮಾಡುತ್ತವೆ. ಹೆಚ್ಚುವರಿವಾಗಿ ತ್ಯಾಜ್ಯ ಮತ್ತು ಹೆಚ್ಚು ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತವೆ. 

ಅಲ್ಲದೆ ಕೆಎಂಸಿ ಕಾಯಿದೆಯನ್ನು ಉಲ್ಲಂಘಿಸಿ, ನೆಲಮಾಳಿಗೆ ಪ್ರದೇಶಗಳನ್ನು ಕಾನೂನು ಬಾಹಿರವಾಗಿ ಅಕ್ರಮ ವಾಣಿಜ್ಯ ಚಟುವಟಿಕೆಗಳಿಗೆ ಪರಿವರ್ತಿಸುವ ಮೂಲಕ ಸಂಚಾರ ಮತ್ತು ಪಾರ್ಕಿಂಗ್‌ ಸಮಸ್ಯೆಗಳಿಗೆ ಕಾರಣವಾಗುವ ಕಟ್ಟಡ ಮಾಲೀಕರ ವಿರುದ್ಧವೂ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next