– ನೆಗೆದು ಬಿಧ್ದೋದ !
ಮತ್ತೆ , ಕಾರ್ ಯಾರ್ ಓಡಿಸ್ತಾರೆ ಸರ್?
– ಸನ್ನಿಲಿಯೋನ್ ಓಡಿಸ್ತಾರೆ…!!
ಈ ರೀತಿಯ ಫನ್ನೀ ಮಾತುಗಳು ಇಲ್ಲಿ ಲೆಕ್ಕವಿಲ್ಲ. ಇದಿಷ್ಟು ಸಾಕು, ಇದು ಜಗ್ಗೇಶ್ ಶೈಲಿಯ ಚಿತ್ರ ಅಂತ ಸಾಬೀತಾಗೋಕೆ. ಹಾಗಂತ, ಇದು ಜಗ್ಗೇಶ್ ಶೈಲಿಯ ಮಾತಿನ ಸಿನಿಮಾ ಅಂದುಕೊಳ್ಳುವಂತಿಲ್ಲ. ಇಲ್ಲಿ ಬದುಕಿನ ಮೌಲ್ಯವಿದೆ. ಸಂಬಂಧಗಳ ಆಳವಾದ ಅರ್ಥವಿದೆ. ವಾಸ್ತವತೆಯ ವಾಸನೆ ಇದೆ. ನೋವು-ನಲಿವುಗಳ ಮಿಶ್ರಣವಿದೆ.
Advertisement
ಸಿಹಿ-ಕಹಿಯ ನೂರಾರು ನೆನಪುಗಳ ಗುತ್ಛವಿದೆ. ನಗು, ಅಳು, ಭಾವುಕತೆ ಈ ಎಲ್ಲವೂ ಆ ಪ್ರೀಮಿಯರ್ ಪದ್ಮಿನಿ ಕಾರಲ್ಲಿದೆ! ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಆಪ್ತವೆನಿಸುವ, ಎದೆಭಾರವಾಗಿಸುವ ಮತ್ತು ಸೂಕ್ಷ್ಮಗ್ರಹಿಕೆಯ ಒಂದು ಕೌಟುಂಬಿಕ ಚಿತ್ರ. ಜಗ್ಗೇಶ್ ಅವರ ಚಿತ್ರಗಳು ಹೀಗೇ ಇರುತ್ತವೆ, ಹೀಗೇ ಇರಬೇಕು ಅಂದುಕೊಳ್ಳುವ ಮಂದಿಗೆ, “ಪದ್ಮಿನಿ’ ಬೇರೆಯದ್ದೇ ಚಿತ್ರಣವನ್ನು ಕಟ್ಟಿಕೊಡುತ್ತದೆ.
Related Articles
Advertisement
ಪ್ರಸ್ತುತ ದಿನಗಳಲ್ಲಿ ನಡೆಯುವಂತಹ ಘಟನೆಗಳನ್ನಿಲ್ಲಿ ನೆನಪಿಸಿದರೂ, ಒಂದು ವಿಶೇಷ ಸಂದೇಶ ಇಡೀ ಚಿತ್ರದ ಹೈಲೈಟ್. ಆ ಹೈಲೈಟ್ ಏನೆಂಬ ಕುತೂಹಲವಿದ್ದರೆ, ಯಾರ ಅಪ್ಪಣೆಯೂ ಇಲ್ಲದೆ “ಪ್ರೀಮಿಯರ್ ಪದ್ಮಿನಿ’ ನೋಡಿಬರಬಹುದು. ಹೊಂದಾಣಿಕೆ ಬದುಕು ಸಾಧ್ಯವೇ ಇಲ್ಲ ಅಂದಾಗ, ಮನುಷ್ಯನ ವ್ಯಕ್ತಿತ್ವ ಹೇಗೆಲ್ಲಾ ಬದಲಾಗುತ್ತದೆ ಎಂಬುದಕ್ಕೆ ಈ ಚಿತ್ರ ಕಣ್ಣೆದುರಿಗಿನ ಉದಾಹರಣೆ.
ಚಿಕ್ಕ ವಿಷಯವನ್ನು ದೊಡ್ಡದು ಮಾಡಿಕೊಂಡು ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುವ ಕಾಲಘಟ್ಟದಲ್ಲಿ, ಬದುಕಲ್ಲಿ ದೊಡ್ಡ ತಪ್ಪು ಆಗಿದ್ದರೂ, ಚೆನ್ನಾಗಿ ಬದುಕಿ ಬಾಳಬೇಕು ಎಂಬ ಆಶಯದ ಅಂಶಗಳು ಚಿತ್ರದ ಜೀವಾಳ. ಅಲ್ಲಲ್ಲಿ ಚಿತ್ರದ ವೇಗ ಕಡಿಮೆಯಾಯ್ತು ಅಂದುಕೊಳ್ಳುವಂತೆಯೇ, ಅಲ್ಲೊಂದು ಹಾಡು ಇಣುಕಿ ಹಾಕಿ, ನೋಡುಗರ ತಾಳ್ಮೆಯನ್ನು ಸಮಾಧಾನಿಸುತ್ತದೆ.
ಫ್ರೆಶ್ ಎನಿಸುವ ದೃಶ್ಯಾವಳಿಗಳು ಸಣ್ಣಪುಟ್ಟ ಎಡವಟ್ಟುಗಳನ್ನು ಇಲ್ಲಿ ಮುಚ್ಚಿ ಹಾಕುತ್ತವೆ. ಇದು ಸಂಬಂಧಗಳ ನಡುವಿನ ಕಥೆ ಹೊಂದಿದೆ. ವಿನಾಯಕ ಮತ್ತು ಶ್ರುತಿ ದಂಪತಿ ನಡುವೆ ಹೊಂದಾಣಿಕೆ ಸಮಸ್ಯೆ. ಅದು ವಿಚ್ಛೇದನವರೆಗೂ ಹೋಗುತ್ತದೆ. ವಿನಾಯಕ ಒಬ್ಬ ಅಸಹಾಯಕ. ಶ್ರುತಿ ಅದಾಗಲೇ ವಿವಾಹ ಆಗಿ, ಒಬ್ಬ ಮಗಳನ್ನೂ ಹೊಂದಿರುವ ಉದ್ಯಮಿಯೊಬ್ಬರನ್ನು ಮದುವೆ ಆಗಲು ನಿರ್ಧರಿಸಿದ್ದಾಳೆ.
ಇತ್ತ ವಿನಾಯಕ ದಂಪತಿಗೊಬ್ಬ ವಯಸ್ಸಿಗೆ ಬಂದ ಮಗನೂ ಇದ್ದಾನೆ. ಚಿಕ್ಕಂದಿನಿಂದಲೂ ಹೆತ್ತವರ ಪ್ರೀತಿ ಕಾಣದ ಅವನಿಗೆ ಅಪ್ಪ, ಅಮ್ಮ ಅಂದರೆ ಕೋಪ. ಅತ್ತ ವಿನಾಯಕನ ಪತ್ನಿ ವರಿಸಲು ಸಿದ್ಧವಾಗಿರುವ ಉದ್ಯಮಿ ಪುತ್ರಿ ಜೊತೆ ವಿನಾಯಕನ ಪುತ್ರನ ಗೆಳೆತನ ಶುರುವಾಗುತ್ತೆ. ಅಲ್ಲಿಂದ ಚಿತ್ರ ಇನ್ನೊಂದು ತಿರುವು ಪಡೆದುಕೊಳ್ಳುತ್ತೆ.
ಇಲ್ಲಿ ಕಾರು ಮಾಲೀಕ ಮತ್ತು ಚಾಲಕನ ನಡುವಿನ ಬಾಂಧವ್ಯದ ಹೂರಣವೂ ಇದೆ. ಒಂದು ಚಿತ್ರದಲ್ಲಿ ಮೂರು ಕಥೆಗಳು ಒಂದೇ ಟ್ರ್ಯಾಕ್‌ನಲ್ಲಿ ಸಾಗಿದರೂ, ಆ ಮೂರು ಕಥೆಗಳಿಗೂ ಕ್ಲೈಮ್ಯಾಕ್ಸ್‌ನಲ್ಲಿ ಲಿಂಕ್ ಕಲ್ಪಿಸಲಾಗಿದೆ. ಸಾಕಷ್ಟು ಭಾವಸಾರ ಹೊಂದಿರುವ “ಪದ್ಮಿನಿ’ಯಲ್ಲಿ ನೂರೆಂಟು ನೋವು ನಲಿವುಗಳದ್ದೇ ಚಿತ್ರಣ.
ಜಗ್ಗೇಶ್ ಅವರಿಲ್ಲಿ ತಮ್ಮ ನವರಸದ ಪಾಕವನ್ನೆಲ್ಲಾ ಉಣಬಡಿಸಿದ್ದಾರೆ. ನಗಿಸುತ್ತಾರೆ, ಅಳಿಸುತ್ತಾರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಒಬ್ಬ ಒಳ್ಳೆಯ ಗಂಡನಾಗಿ, ಕಾಳಜಿಯ ತಂದೆಯಾಗಿ, ಕಾರು ಮಾಲೀಕರಾಗಿ ಇಷ್ಟವಾಗುತ್ತಾರೆ. ಮಧುಬಾಲ ಪಾತ್ರದಲ್ಲಿ ಗಮನಸೆಳೆದರೆ, ಸುಧಾರಾಣಿ, ರಮೇಶ್ ಇಂದಿರಾ ಅವರು ಅಷ್ಟೇ ಇಷ್ಟವಾಗುತ್ತಾರೆ.
ಇನ್ನುಳಿದಂತೆ ಪ್ರಮೋದ್ ಚಾಲಕನಾಗಿ ಕೆಲವೆಡೆ ಭಾವುಕತೆ ಹೆಚ್ಚಿಸುತ್ತಾರೆ, ಹಿತಾ, ವಿವೇಕ್ ಸಿಂಹ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದವರಂತೆ ನಟನೆಯಲಿ ಸೈ ಎನಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೂಂದು ಪ್ಲಸ್. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಪದ್ಮಿನಿ ಕಾರಿನ ಮೈಲೇಜ್ ಹೆಚ್ಚಿಸಿದೆ.
ಚಿತ್ರ: ಪ್ರೀಮಿಯರ್ ಪದ್ಮಿನಿನಿರ್ಮಾಣ: ಶ್ರುತಿ ನಾಯ್ಡು
ನಿರ್ದೇಶನ: ರಮೇಶ್ ಇಂದಿರಾ
ತಾರಾಗಣ: ಜಗ್ಗೇಶ್, ಮಧುಬಾಲ, ಸುಧಾರಾಣಿ, ಪ್ರಮೋದ್, ಹಿತಾ, ವಿವೇಕ್ ಸಿಂಹ, ದತ್ತಣ್ಣ, ರಮೇಶ್ ಇಂದಿರಾ ಇತರರು * ವಿಜಯ್ ಭರಮಸಾಗರ