Advertisement

ಸರ್ಕಾರಿ ಕಾಲೇಜುಗಳ ಶುಲ್ಕ ನಿಗದಿ

11:27 PM May 10, 2019 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ವಿವಿಧ ಕೋರ್ಸ್‌ಗಳಿಗೆ 2019-20ನೇ ಶೈಕ್ಷಣಿಕ ಸಾಲಿಗೆ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಅರ್ಜಿ ಉಚಿತವಾಗಿ ದೊರೆಯಲಿದ್ದು, ನೋಂದಣಿ ಶುಲ್ಕ, ವಿಶ್ವವಿದ್ಯಾಲಯ ಪರೀಕ್ಷಾ ಶುಲ್ಕ ಹಾಗೂ ಕ್ರೀಡಾಭಿವೃದ್ಧಿ ಶುಲ್ಕವು ಆಯಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಸರ್ಕಾರದ ಆದೇಶ ಪ್ರಕಾರ ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಕ್ರೀಡಾಭಿವೃದ್ಧಿ ಶುಲ್ಕ ಹೊರತುಪಡಿಸಿ ಓರ್ವ ವಿದ್ಯಾರ್ಥಿಯಿಂದ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳು 2100 ರೂ.ಗಳಿಗಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಕಾಲೇಜುಗಳಲ್ಲಿ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸಿ, ಅದರ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು. ವಿವಿಧ ನಿಧಿ ಹಾಗೂ ರೇಂಜರ್‌, ರೋವರ್‌, ಎನ್‌ಎಸ್‌ಎಸ್‌ ಮೊದಲಾದ ಶುಲ್ಕವನ್ನು ಅವುಗಳಿಗೆ ಬಳಸಿ, ಆ ಸಂಬಂಧ ಇರುವ ನಿಬಂಧನೆಯನ್ನು ಕಡ್ಡಾಯವಾಗಿ ಪಾಲಿಸಲು ಪ್ರಾಂಶುಪಾಲರಿಗೆ ಸರ್ಕಾರ ನಿರ್ದೇಶಿಸಿದೆ.

ವಿದ್ಯಾರ್ಥಿ ವೇತನದ ಹಣದಲ್ಲಿ ಕಾಲೇಜು ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿಕೊಂಡು, ಉಳಿದ ಹಣವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕು. ಪ್ರತಿ ವಿದ್ಯಾರ್ಥಿಯಿಂದ ಪ್ರವೇಶಾತಿ ಸಂದರ್ಭದಲ್ಲಿ ಪ್ರವೇಶ ಶುಲ್ಕದ ಜತೆಗೆ 150ರೂ.ನಿಂದ 600ರೂ. ವರೆಗೆ ಮಾತ್ರ ಹೆಚ್ಚುವರಿ ಶುಲ್ಕ ಪಡೆಯಬಹುದಾಗಿದೆ.

ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಚಟುವಟಿಕೆ, ಗುರುತಿನ ಚೀಟಿ ಇತ್ಯಾದಿಗೆ ಶುಲ್ಕ ಸಂಗ್ರಹಿಸುವಾಗ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇಜಿನ ಸಮಿತಿಯು ಶುಲ್ಕ ನಿರ್ಧರಿಸಬೇಕು. ಪ್ರವೇಶ ಶುಲ್ಕ ಮತ್ತು ನೋಂದಣಿ ಶುಲ್ಕ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಮಾತ್ರ ಸಂಗ್ರಹಿಸಬೇಕು ಎಂದು ಎಚ್ಚರಿಕೆ ನೀಡಿದೆ.

Advertisement

ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯ್ತಿ: 2018 -19ನೇ ಸಾಲಿನಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರಿ, ಅರೆ ಸರ್ಕಾರಿ ಮತ್ತು ವಿಶ್ವವಿದ್ಯಾಲಯಗಳ ಶುಲ್ಕದಲ್ಲಿ ನೀಡಲಾಗಿರುವ ವಿನಾಯ್ತಿ 2019-20ನೇ ಸಾಲಿನಲ್ಲೂ ಮುಂದುವರಿಯಲಿದೆ. 2019-20ನೇ ಸಾಲಿನಲ್ಲಿ ಅರೆ ಸರ್ಕಾರಿ ಹಾಗೂ ವಿಶ್ವವಿದ್ಯಾಲಯಗಳ ಶುಲ್ಕವನ್ನು ವಿದ್ಯಾರ್ಥಿನಿಯರಿಂದ ವಸೂಲಿ ಮಾಡಿ, ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕ ವಸೂಲಿ ಪ್ರಕ್ರಿಯೆ ಮುಗಿದ ನಂತರ ಮರುಪಾವತಿ ಮಾಡಲು ಸೂಚಿಸಿದೆ.

ಯಾವುದಕ್ಕೆ ಎಷ್ಟು ಶುಲ್ಕ?
-ಪ್ರವೇಶ ಶುಲ್ಕ 80 ರೂ.
-ಬೋಧನಾ ಶುಲ್ಕ 940 ರೂ.
-ಪ್ರಯೋಗ ಶುಲ್ಕ 260 ರೂ.
-ವೈದ್ಯಕೀಯ ತಪಾಸಣಾ ಶುಲ್ಕ 30 ರೂ.
-ವರ್ಗಾವಣೆ ಪತ್ರ ಶುಲ್ಕ 40 ರೂ.
-ವಿದ್ಯಾಭ್ಯಾಸ ಪ್ರಮಾಣ ಪತ್ರ ಶುಲ್ಕ 20 ರೂ.
-ವಾಚನಾಲಯ ಶುಲ್ಕ 70 ರೂ.
-ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕ ತಲಾ 100 ರೂ.
-ಸರ್ಕಾರಿ ಕಾಲೇಜು ಅಭಿವೃದ್ಧಿ ಶುಲ್ಕ 200 ರೂ.
-ಶಿಕ್ಷಕರ ಕಲ್ಯಾಣಿ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ 50 ರೂ.
-ರೇಂಜರ್‌, ರೋವರ್‌ ಘಟಕ ಚಟುವಟಿಕೆ ಶುಲ್ಕ 50 ರೂ.
-ರೆಡ್‌ಕ್ರಾಸ್‌ ಸಂಸ್ಥೆ ಶುಲ್ಕ 50 ರೂ.
-ಎನ್‌ಎಸ್‌ಎಸ್‌ ಶುಲ್ಕ 90 ರೂ.

Advertisement

Udayavani is now on Telegram. Click here to join our channel and stay updated with the latest news.

Next