Advertisement

ಸಿಪಿಎಂಗೆ ನೆಲೆ ಕಳೆದುಕೊಳ್ಳುವ ಭಯ

02:10 AM Aug 04, 2017 | |

ದೇವರ ನಾಡೆಂದು ಕರೆಸಿಕೊಳ್ಳುವ ಕೇರಳವೀಗ ಅಕ್ಷರಶಃ ನರಕದ ರೂಪ ತಾಳಿದೆ. ಅಲ್ಲಿ ರಾಜಕೀಯ ಹತ್ಯೆಗಳು ಮಿತಿಮೀರುತ್ತಿವೆ. ಇತ್ತೀಚೆಗಷ್ಟೇ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶರ ಭೀಕರ ಹತ್ಯೆ ನಡೆದಿದೆ. ಕೇರಳದ ಕಲಹಕ್ಕೆ ಕಾರಣಗಳೇನು, ಅಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದೇಕೆ ಎನ್ನುವ ಬಗ್ಗೆ “ಇಂಡಿಯಾ ಟುಡೆ’ಯೊಂದಿಗೆ ಚರ್ಚಿಸಿದ್ದಾರೆ ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು. ಈ ಸಂದರ್ಶನದ ಆಯ್ದ ಭಾಗ ಇಲ್ಲಿದೆ…

Advertisement

ಕೇರಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶನ ಬರ್ಬರ ಕೊಲೆಯಾಗಿದೆ. ಸಿಪಿಎಂ ಕಾರ್ಯಕರ್ತರು ಈತನನ್ನು ಕೊಂದಿದ್ದಾರೆ ಎನ್ನಲಾಗುತ್ತಿದೆ. ಆರ್‌ಎಸ್‌ಎಸ್‌ ಕೇರಳದಲ್ಲಿ ಒಳದಾರಿಗಳನ್ನು ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ಜನರು ಸಹಜವಾಗಿಯೇ ಈ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎನ್ನುವುದು ಸಿಪಿಎಂ ಸರಕಾರದ ವಾದ. ಅಂದರೆ ಇವ್ಯಾವೂ ರಾಜಕೀಯ ಹತ್ಯೆಗಳಲ್ಲ ಎನ್ನುತ್ತಿದೆ ಸರಕಾರ…
ಕೇರಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ಇದೇ ಮೊದಲೇನೂ ನಡೆದಿಲ್ಲ. 1969ರಿಂದಲೂ ಹತ್ಯೆಗಳು ನಡೆಯುತ್ತಲೇ ಇವೆ. ನಾವು ಇಷ್ಟು ವರ್ಷಗಳಿಂದ ಈ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದೇವೆ. ಆದರೆ ಈಗ ದೇಶಕ್ಕೆ, ಮತ್ತು ಅದರಲ್ಲೂ ಮುಖ್ಯವಾಗಿ ಮಾಧ್ಯಮಗಳಿಗೆ ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎನ್ನುವುದು ಅರ್ಥವಾಗಿದೆ. ಕೆಲವು ಘಟನೆಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿರುವುದು ನಿಜವೇ. ಆದರೂ ಯಾವುದೇ ಪ್ರಕರಣವನ್ನೂ ಕ್ರಿಮಿನಲ್‌ ಕಾನ್ಸ್‌ ಪಿರಸಿ(ಸೆಕ್ಷನ್‌ 120) ವ್ಯಾಪ್ತಿಯಲ್ಲಿ ತಂದಿಲ್ಲ. ವೈಯಕ್ತಿಕ ದ್ವೇಷ ಎಂದು ಪ್ರಕರಣ ದಾಖಲಿಸಲಾಗಿದೆ. 

ರಾಜೇಶ್‌ ಕೊಲೆಗೆ ಕಾರಣವೇನಿರಬಹುದು? ಈ ಪ್ರಕರಣದ ಆಯಾಮಗಳನ್ನು ನೀವು ಹತ್ತಿರದಿಂದ ಗಮನಿಸುತ್ತಿದ್ದೀರಿ, ಹೀಗಾಗಿ ಈ ವಿಷಯದಲ್ಲಿ ಕಾರ್ಯಕರ್ತರಿಂದ ನಿಮಗೆ ಏನೇನು ಮಾಹಿತಿ ಲಭಿಸಿವೆ ?
ರಾಜೇಶ್‌ ವಿರುದ್ಧ ಒಂದೇ ಒಂದು ಅಪರಾಧಿ ಪ್ರಕರಣವೂ ದಾಖಲಾಗಿಲ್ಲ. ಆತ ಮಾಡಿದ ಒಂದೇ ಒಂದು ತಪ್ಪೆಂದರೆ ಸಿಪಿಎಂನ ಬೇಡಿಕೆಯೊಂದನ್ನು ವಿರೋಧಿಸಿದ್ದು. “”ಆರ್‌ಎಸ್‌ಎಸ್‌ ತನ್ನ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಕೇಸುಗಳನ್ನು ಹಿಂಪಡೆಯಬೇಕು” ಎಂದು ಸಿಪಿಎಂ ಕೆಲವು ದಿನಗಳ ಹಿಂದೆ ಹೇಳಿತ್ತು. ಆದರೆ ರಾಜೇಶ್‌ ಇದನ್ನು ವಿರೋಧಿಸಿದ್ದರು. ಕೇಸ್‌ ಹಿಂಪಡೆಯಬಾರದು ಎಂದು ಹೇಳಿದ್ದೇ ಅವರು ಮಾಡಿದ ತಪ್ಪು ನೋಡಿ!  ಇನ್ನು ಸಿಪಿಎಂ ಗೂಂಡಾಗಳು ಆರ್‌ಎಸ್‌ಎಸ್‌ ಜನರನ್ನು ಏಕೆ ಕೊಲ್ಲುತ್ತಿದ್ದಾರೆ ಎನ್ನುವ ಪ್ರಶ್ನೆ…ಏನಾಗುತ್ತಿದೆಯೆಂದರೆ ಸಮಾಜದ ಕೆಳ ಸ್ತರದಲ್ಲಿರುವ ಜನರೂ ಈಗ ಆರ್‌ಎಸ್‌ಎಸ್‌ನ ಭಾಗವಾಗತೊಡಗಿದ್ದಾರೆ. ಈ ಸಂಗತಿ ಸಿಪಿಎಂಗೆ ಸವಾಲಾಗಿ ಪರಿಣಮಿಸಿದೆ. ಯಾರೂ ಆರ್‌ಎಸ್‌ಎಸ್‌ ಸೇರಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿ ಭಯ ಹುಟ್ಟಿಸಲಾಗುತ್ತಿದೆ. 

ಬಿಜೆಪಿಗೆ ಸಹಾಯ ಮಾಡುವುದಕ್ಕೆ ಆರ್‌ಎಸ್‌ಎಸ್‌ ಹೆಣೆದಿರುವ ತಂತ್ರವಿದು ಎಂದು ಕೇರಳದ ಮುಖ್ಯಮಂತ್ರಿ ಮತ್ತು ಎಡ ಪಕ್ಷಗಳ ನಾಯಕರೆಲ್ಲ ದೂರುತ್ತಿದ್ದಾರೆ. 
ನೋಡಿ ಕೇರಳದ ಯಾವ ಭಾಗದಲ್ಲೂ ಆರ್‌ಎಸ್‌ಎಸ್‌ ಅಧಿಕಾರದಲ್ಲಿಲ್ಲ. ಸಿಪಿಎಂ ಅಧಿಕಾರದಲ್ಲಿದೆಯಲ್ಲವೇ? ಪ್ರಕರಣಗಳನ್ನು ತನಿಖೆ ಮಾಡಿ ಅದರಲ್ಲಿ ಆರ್‌ಎಸ್‌ಎಸ್‌ ತಂತ್ರವಿದೆ ಎಂದು ಜಗತ್ತಿಗೆ ತೋರಿಸಲಿ ನೋಡೋಣ? ಸಿಪಿಎಂ ಗೂಂಡಾಗಳು ಕೇವಲ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನಷ್ಟೇ ಕೊಂದಿಲ್ಲ, ಅವರು ಕಾಂಗ್ರೆಸ್‌, ಸಿಪಿಐ, ಮುಸ್ಲಿಂ ಲೀಗ್‌ನ ಕೆಲಸಗಾರರನ್ನೂ ಕೊಲೆಗೈದಿದ್ದಾರೆ, ಅಲ್ಲದೇ ಸಿಪಿಎಂನಿಂದ ಚದುರಿ ಹೋದ ಗುಂಪುಗಳ ಜನರನ್ನೂ ಅವರು ಹತ್ಯೆ ಮಾಡಿದ್ದಾರೆ. ಪಶ್ಚಿಮ ಬಂಗಾಲದಲ್ಲೂ ಸಿಪಿಎಂ ಅಧಿಕಾರದಲ್ಲಿತ್ತು. ಅಲ್ಲೇಕೆ ಆರ್‌ಎಸ್‌ಎಸ್‌ಗೆ ಹೀಗೆ ಆಗಲಿಲ್ಲ?

ಆದರೆ ಒಂದಂತೂ ಸತ್ಯ, ಆರ್‌ಎಸ್‌ಎಸ್‌ ಕೇರಳದಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ತನ್ನ ಶಾಖೆಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ…
ಹೌದು, ಇದು ಸತ್ಯ. ಅದಾಗಲೇ ಆರ್‌ಎಸ್‌ಎಸ್‌ ಕೇರಳದ ಅನೇಕ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದೆ. ಈಗಲ್ಲಿ ನಮ್ಮ 4,000 ಶಾಖೆಗಳಿವೆ. ಆರ್‌ಎಸ್‌ಎಸ್‌ ಸ್ವಯಂಸೇವಕರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಹೀಗಾಗಿ ಎಲ್ಲಿ ಹಿಂದೂ ಸಮಾಜದ ಮತ ಬೇಸ್‌ ಅನ್ನು ಕಳೆದುಕೊಳ್ಳು ತ್ತೇವೋ ಎನ್ನುವ ಭಯ ಸಿಪಿಎಂಗೆ. ಸತ್ಯವೇನೆಂದರೆ ಸಿಪಿಎಂನ ಬೆಂಬಲಿಗರಲ್ಲಿ 98 ಪ್ರತಿಶತ ಹಿಂದೂಗಳೇ ಇದ್ದಾರೆ. ಆ ಪಕ್ಷವನ್ನು ಮುಸಲ್ಮಾನರು ಮತ್ತು ಕ್ರೈಸ್ತರು ಬೆಂಬಲಿಸುವುದಿಲ್ಲ. ಹೀಗಾಗಿ ಆರ್‌ಎಸ್‌ಎಸ್‌ನಿಂದ ತನ್ನ ಹಿಂದೂ ಸಮುದಾಯದ ಬೆಂಬಲ ಕಳೆದುಕೊಳ್ಳುತ್ತೇವೆಂಬ ಭಯ ಸಿಪಿಎಂಗಿದೆ.

Advertisement

ಹಾಗಿದ್ದರೆ ಇದು ರಾಜಕೀಯ ಸಮಸ್ಯೆ ಎಂದು ಒಪ್ಪಿಕೊಳ್ಳುತ್ತೀರಾ?
ಹೀಗೆ ಯೋಚಿಸುತ್ತಿರುವುದು ಅವರು ಅಂತ ನಾನು ಹೇಳುತ್ತಿರೋದು. ನಾವು ಅನೇಕ  ಸಾಮಾಜಿಕ, ಆರ್ಥಿಕ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇವೆ…

ಸ್ಥಳೀಯ ಸಿಪಿಎಂ ನಾಯಕರು ಆರ್‌ಎಸ್‌ಎಸ್‌ ಮೇಲೆ ಬಹಳಷ್ಟು ಆರೋಪ ಮಾಡುತ್ತಾರೆ. ಅವರ ಪ್ರಕಾರ, ಸಂಘದಿಂದಾಗಿ 3000 ಸಿಪಿಎಂ ಕಾರ್ಯಕರ್ತರು ಅಂಗವಿಕಲರಾಗಿದ್ದಾರೆ, 10 ಸಾವಿರ ಸಿಪಿಎಂ ಕಾರ್ಯಕರ್ತರ ಮನೆಗಳ ಮೇಲೆ ದಾಳಿಗಳಾಗಿವೆಯಂತೆ. ಅಲ್ಲದೇ ಕನ್ಹನ್‌ ಗಢದ 8 ವರ್ಷದ ಬಾಲಕ ಫ‌ಹಾದ್‌ನನ್ನು, 68 ವರ್ಷದ ಸರೋಜಿನಿ ಅಮ್ಮ ಎಂಬಾಕೆಯನ್ನೂ  ಆರ್‌ಎಸ್‌ಎಸ್‌ ಕೊಂದಿದೆ ಎನ್ನುವುದು ಸಿಪಿಎಂ ಆರೋಪ…ನೋಡಿ ನನ್ನ ಬಳಿಯೂ ಅಂಕಿ ಸಂಖ್ಯೆಗಳಿವೆ. ಇದು ಅಂಕಿ ಸಂಖ್ಯೆಗಳ ಆಟವಲ್ಲ. ಹೇಗೆ ಅವರು ಆರ್‌ಎಸ್‌ಎಸ್‌ನವರ ಮನೆಗಳ ಮೇಲೆ ಪೆಟ್ರೋಲ್‌ ಸುರಿದು ಸುಟ್ಟುಹಾಕಿದ್ದಾರೆ, ಮಹಿಳೆಯರನ್ನು ಕೊಂದಿದ್ದಾರೆ ಎಂದು ನಾನೂ ಹೇಳಬಲ್ಲೆ. ಅಲ್ಲದೆ ಹೇಗೆ ಸದಾನಂದ ಮಾಸ್ಟರ್‌ ಅವರ ಎರಡೂ ಕಾಲುಗಳನ್ನು ಸಿಪಿಎಂನವರು ಕಡಿದುಹಾಕಿದ್ದಾರೆ ಎನ್ನುವುದನ್ನೂ ನಾವು ಹೇಳಬಹುದು. ಇತ್ತೀಚೆಗೆ ರಾಜೇಶ್‌ನನ್ನೂ ಬರ್ಬರವಾಗಿ ಕೊಲ್ಲಲಾಗಿದೆ. ಆತನ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ನನ್ನ ಮುಖ್ಯ ಪ್ರಶ್ನೆಯೆಂದರೆ, ಅದೇಕೆ ಸಿಪಿಎಂ ಎಲ್ಲರ ಬಗ್ಗೆಯೂ ದ್ವೇಷ ಬೆಳೆಸಿಕೊಂಡಿದೆ ಎನ್ನುವುದು. ಇನ್ನು ಆರ್‌ಎಸ್‌ಎಸ್‌ ತನ್ನ ಸಂಘಟನಾ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ವಿಷಯಕ್ಕೆ ಬರುವುದಾದರೆ, ಸಾಂವಿಧಾನಿಕವಾಗಿ ನಮ್ಮ ಸಂಘಟನೆಯನ್ನು ವಿಸ್ತರಿಸುವ ಎಲ್ಲಾ ಹಕ್ಕೂ ಇದೆ.  ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಕೆಲಸ ಮಾಡುವುದು ಸಿಪಿಎಂನ ಸಂಸ್ಕೃತಿ.

ಆರ್‌ಎಸ್‌ಎಸ್‌ ಮೊದಲಿನಿಂದಲೂ ಉದ್ದೇಶಪೂರ್ವಕವಾಗಿ ಸಿಪಿಎಂ ಕಾರ್ಯಕರ್ತರನ್ನು ಕೊಲ್ಲುತ್ತಲೇ ಬಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೇ ಹೇಳುತ್ತಿದ್ದಾರೆ…
ಹಾಗಿದ್ದರೆ ಇಷ್ಟು ವರ್ಷಗಳವರೆಗೆ ಅವರೇಕೆ ಈ ವಿಷಯವೆತ್ತಲಿಲ್ಲ? ನಾವು ಮೊದಲಿನಿಂದಲೂ ಕೇರಳದಲ್ಲಾಗುತ್ತಿರುವ ರಾಜಕೀಯ ಹತ್ಯೆಗಳ ಬಗ್ಗೆ ಮಾತನಾಡುತ್ತಲೇ ಬಂದಿದ್ದೇವೆ. ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಜಂತರ್‌ ಮಂತರ್‌ ಮುಂದೆ ನಾವು ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದೆವು. ಅದಕ್ಕಿಂತ ಮೊದಲೂ ನಾವು ಈ ಬಗ್ಗೆ ಬರೆಯುತ್ತಾ ಬಂದಿದ್ದೇವೆ. ನಾವು ಜಗತ್ತಿನ ಮುಂದೆ ಸತ್ಯವನ್ನು ತೆರೆದಿಡುತ್ತಾ ಹೋಗುತ್ತಿರುವುದನ್ನು ನೋಡಿ ನಮ್ಮ ಮೇಲೆ ಅವರು ಪ್ರತಿ ಆರೋಪ ಮಾಡಿ, ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರಷ್ಟೆ.  

ಮೊದಲು ಕಣ್ಣೂರಿನಲ್ಲಿ ನಡೆಯುತ್ತಿದ್ದ ಇಂಥ ಹತ್ಯೆಗಳು ಈಗ ತ್ರಿವೇಂಡ್ರಂನಲ್ಲಿ ಹೆಚ್ಚಾಗಿವೆ. ಇದಕ್ಕೆ ಕಾರಣ ಏನಿರಬಹುದು?
ನಾವೂ ಇದನ್ನು ಗಮನಿಸುತ್ತಿದ್ದೇವೆ. ಮೊದಲು ಇಂಥ ಘಟನೆಗಳಿಗೆ ಅಧಿಕೇಂದ್ರವಾಗಿದ್ದದ್ದು ಕಣ್ಣೂರು. ಈಗ ನಿಧಾನಕ್ಕೆ ಒಂದು ಕುತಂತ್ರದ ರೂಪದಲ್ಲಿ ಇದು ತ್ರಿವೇಂಡ್ರಂಗೆ ಕಾಲಿಟ್ಟಿದೆ. ಇದಕ್ಕೊಂದು ಪ್ರಮುಖ ಕಾರಣವಿದೆ.  ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಸಿಪಿಎಂನ ಕಾರ್ಯಕರ್ತರು ಜಾಮೀನು ಪಡೆದು ಹೊರಬಂದಿದ್ದಾರೆ. ಇವರು ಕಣ್ಣೂರಿಗೆ ಪ್ರವೇಶಿಸಬಾರದು ಎಂದು ಕೋರ್ಟ್‌ ಹೇಳಿದೆ. ಹೀಗಾಗಿ ಇವರೆಲ್ಲ ತ್ರಿವೇಂಡ್ರಂ ಅನ್ನು ತಮ್ಮ ಚಟುವಟಿಕೆಯ ಕೇಂದ್ರಸ್ಥಾನವಾಗಿಸಿಕೊಂಡಿದ್ದಾರೆ. 

ಆದರೆ ಆರ್‌ಎಸ್‌ಎಸ್‌ ಕಾರ್ಯಕರ್ತರಿಂದ ಸಿಪಿಎಂನವರ ಮೇಲೆ ದಾಳಿ ನಡೆದಿದೆ ಎನ್ನುವ ವಾಸ್ತವವನ್ನು ಅಲ್ಲಗಳೆಯಲು ಸಾಧ್ಯವಿಲ್ಲವಲ್ಲ?
ಇಷ್ಟು ವರ್ಷಗಳಲ್ಲಿ ಕೇರಳದಲ್ಲಿ 287 ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆಯಾಗಿದೆ. ಕಳೆದ 13 ತಿಂಗಳಲ್ಲೇ 13 ಕಾರ್ಯಕರ್ತರ ಕೊಲೆಯಾಗಿದೆ. ನೋಡಿ ಇವಕ್ಕೆಲ್ಲ ಪ್ರತೀಕಾರವಾಗಿ ಕೆಲವು ಘಟನೆಗಳು ನಡೆದಿರಬಹುದು. ಹಾಗೆ ನೋಡಿದರೆ, ತಪ್ಪು ಮಾಡಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ನಾವು ಅವರ ಕೃತ್ಯವನ್ನು ಬೆಂಬಲಿಸುವುದಿಲ್ಲ. ನಾವು ಯಾವುದೇ ರೀತಿಯ ಹಿಂಸೆಯನ್ನೂ ಬೆಂಬಲಿಸುವುದಿಲ್ಲ. ಪ್ರಜಾಪ್ರಭುತ್ವಿಯ ಸಮಾಜದಲ್ಲಿ ಹಿಂಸೆಗೆ ಜಾಗವಿರಬಾರದು. ಅದಕ್ಕೇ ನಾವು ಎಲ್ಲ ರೀತಿಯ ಹಿಂಸಾಚಾರವನ್ನೂ ವಿರೋಧಿಸುತ್ತಿದ್ದೇವೆ. ಜಿಹಾದಿಗಳ ಹಿಂಸಾಚಾರ, ನಕ್ಸಲರ ಹಿಂಸಾಚಾರ, ಸಿಪಿಎಂನ ಹಿಂಸಾಚಾರ ಎಲ್ಲದಕ್ಕೂ ನಮ್ಮ ವಿರೋಧವಿದೆ. 

ಇದೆಲ್ಲ ನೋಡಿದಾಗ, ಕೇರಳದಲ್ಲಿ ಬಿಜೆಪಿಗೆ ಅಖಾಡ ನಿರ್ಮಾಣ ಮಾಡಿಕೊಡಲು ಸಂಘ ಪರಿವಾರ ಹೆಣೆದ ತಂತ್ರವಿರಬಹುದು ಎಂದು ಜನ (ಕೇರಳೇತರರು) ಭಾವಿಸುತ್ತಿದ್ದಾರೆ…
ನೋಡಿ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಗೆ ಅಧಿಕಾರಕ್ಕೆ ಬರಲು ತನ್ನದೇ ಆದ ಪ್ರಜಾಪ್ರಭುತ್ವಿàಯ, ಚುನಾವಣಾ ಕಾರ್ಯತಂತ್ರಗಳಿರುತ್ತವೆ. ಸಿಪಿಎಂ ಅನ್ನು ಬೇರು ಮಟ್ಟದಿಂದ ಕೀಳಲು ಇಂಥವನ್ನೆಲ್ಲ ಮಾಡುವ ಅಗತ್ಯ ಆರ್‌ಎಸ್‌ಎಸ್‌ಗಂತೂ ಇಲ್ಲ, ಜನರೇ ಅದನ್ನು ಕಿತ್ತೆಸೆಯುತ್ತಾರೆ. ಏಕೆಂದರೆ ಕಳೆದ ಒಂದು ದಶಕದ ಅದರ ಆಡಳಿತವನ್ನು ನೋಡಿದರೆ ಕೇರಳದ ಅಭಿವೃದ್ಧಿ ನಿಯತಾಂಕಗಳೆಲ್ಲ ಕೆಳಕ್ಕೆ ಕುಸಿದಿರುವುದು ಕಾಣಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next