“ಒಂದಲ್ಲ ಒಂದು ದಿನ ನನ್ನ ಮಗ ಚಿರಾಗ್ ಬಿಹಾರದ ಮುಖ್ಯಮಂತ್ರಿ ಹುದ್ದೆಗೇರುವುದನ್ನು ನೋಡಬೇಕು. ಇನ್ನು ಎರಡು ಅಥವಾ ಮುಂದಿನ 20-25 ವರ್ಷಗಳ ಬಳಿಕ ಅದು ಈಡೇರಬಹುದೇನೋ? ದೇಶದ ಪ್ರಮುಖ ನಾಯಕರ ಸಾಲಿನಲ್ಲಿ ಆತ ಪರಿಗಣಿತನಾಗ ಬೇಕು. ಇದು ನೂರಕ್ಕೆ ನೂರು ಸತ್ಯ’
ಹೀಗೆಂದು ಸಂದರ್ಶನವೊಂದರಲ್ಲಿ ಹೇಳಿ ಕೊಂಡದ್ದು ಗುರುವಾರ ಅಸುನೀಗಿದ ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವ, ಲೋಕಜನ ಶಕ್ತಿ ಪಕ್ಷದ ಸಂಸ್ಥಾಪಕ, ದೇಶದ ಪ್ರಮುಖ ದಲಿತ ನಾಯಕ ರಾಂ ವಿಲಾಸ್ ಪಾಸ್ವಾನ್.
ತಂದೆಯೊಬ್ಬರು ಪುತ್ರನ ಬಗ್ಗೆ ಕಟ್ಟಿದ್ದ ಕನಸು ಈಡೇರಲಿಲ್ಲ. ಇಷ್ಟು ಮಾತ್ರವಲ್ಲ 2005ರಲ್ಲಿ ಬಿಹಾರದ ಈಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಪಾಸ್ವಾನ್‌ಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರಂತೆ. ಆದರೆ ಅವರು ಅದನ್ನು ತಿರಸ್ಕರಿಸಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಹುದ್ದೆಗೆ ಏರಿಸುವಂತೆ ನಿತೀಶ್, ಲಾಲು ಯಾದವ್‌ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ.
ಪಾಸ್ವಾನ್ ಹುಟ್ಟಿದ್ದು 1946 ಜು.5 ರಂದು. ಖಗಾರಿಯಾ ಜಿಲ್ಲೆ ಅವರ ಹುಟ್ಟೂರು. ಕಾನೂನು ಪದವಿ, ಎಂ.ಎ. ಶಿಕ್ಷಣ. ಕುತೂಹಲವೆಂದರೆ 1969ರಲ್ಲಿ ಅವರು ಬಿಹಾರ ಪೊಲೀಸ್ ಇಲಾ ಖೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿಎಸ್‌ಪಿ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಸೆಳೆದದ್ದು ರಾಜಕೀಯ ಕ್ಷೇತ್ರ. ಸಮಾಜವಾದಿ ಸಿದ್ಧಾಂತದ ಪ್ರತಿಪಾದಕ ಜಯಪ್ರಕಾಶ ನಾರಾಯಣರ ಕಟ್ಟಾ ಬೆಂಬಲಿಗರಾಗಿದ್ದ ಪಾಸ್ವಾನ್, 1969ರಲ್ಲಿ ಮೊದಲ ಬಾರಿಗೆ ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಯಿಂದ ಶಾಸಕರಾದರು. 1974ರಲ್ಲಿ ಲೋಕದಳ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.
50 ವರ್ಷಗಳ ರಾಜಕೀಯ ಜೀವನ: ಪಾಸ್ವಾನ್ ಅವರು ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಹಾಜಿಪುರ ಕ್ಷೇತ್ರದಿಂದ 1977ರಲ್ಲಿ ಲೋಕಸಭೆ ಪ್ರವೇಶಿಸಿದರು. 1980, 1989, 1996, 1998, 1999, 2004, 2014ರ ಚುನಾವಣೆಯಲ್ಲಿ ಗೆದ್ದರು. 2020ರಲ್ಲಿ ಮಾತ್ರ ಅವರು ಬಿಹಾರದಿಂದ ರಾಜ್ಯಸಭೆಗೆ 2019ರ ಜೂ.28ರಂದು ಆಯ್ಕೆಯಾಗಿದ್ದರು. ಎಲ್ಲ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಸೌಹಾರ್ದ ಸಂಬಂಧ ಹೊಂದಿದ್ದು ಅವರ ಶಕ್ತಿ. ಪಕ್ಷಗಳ ಮೆಚ್ಚಿನ ನಾಯಕ ಪಾಸ್ವಾನ್ ಇನ್ನೇನಿದ್ದರೂ ನೆನಪು ಮಾತ್ರ.
ಒಂದು ದೇಶ, 1 ಪಡಿತರ
2000ನೇ ಇಸ್ವಿಯಲ್ಲಿ ಪಾಸ್ವಾನ್ ಲೋಕಜನಶಕ್ತಿ ಪಕ್ಷ ಸ್ಥಾಪಿಸಿದರು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ರಾಸಾಯ ನಿಕ ಮತ್ತು ರಸಗೊಬ್ಬರ ಸಚಿವರಾದರು. ಇದಕ್ಕಿಂತ ಮೊದಲು ಅಟಲ್ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದರು. ಎಚ್.ಡಿ.ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ನೇತೃತ್ವದ ಸರಕಾರದಲ್ಲಿ ಅವರು ರೈಲ್ವೇ ಸಚಿವರಾಗಿದ್ದರು. 1989ರಲ್ಲಿ ವಿ.ಪಿ.ಸಿಂಗ್ ಸರಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಸಚಿವರಾದರು. ಒಂದು ಹಂತದಲ್ಲಿ ಪ್ರಧಾನಿ ಹುದ್ದೆಗೆ ಪಾಸ್ವಾನ್ ಹೆಸರು ಕೂಡ ಕೇಳಿ ಬಂದಿದ್ದರೂ, ಅದಕ್ಕೆ ಹೆಚ್ಚು ಪುಷ್ಟಿ ಸಿಗಲಿಲ್ಲ. ಪಾಸ್ವಾನ್ ಅವರು ಗ್ರಾಹಕ ವ್ಯವಹಾರಗಳ ಖಾತೆ ಸಚಿವರಾಗಿದ್ದಾಗಲೇ “ಒಂದು ದೇಶ; ಒಂದು ಪಡಿತರ ಚೀಟಿ’ ಜಾರಿಯಾಯಿತು.