Advertisement
ತಲಘಟ್ಟಪುರದ ಅಂಜನಾಪುರದ ನಿವಾಸಿ ಶ್ರೀನಿವಾಸಮೂರ್ತಿ (38) ಆತ್ಮಹತ್ಯೆಗೆ ಯತ್ನಿಸಿದ್ದು, ಒಂದೂವರೆ ವರ್ಷದ ಸಾಯಿಚರಣ್ ಎಂಬ ಮಗು ಮೃತಪಟ್ಟಿದೆ. ಐದು ವರ್ಷದ ಚೇತನ್‌ಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
Related Articles
Advertisement
ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಪ್ರೇಮಲತಾ ಅವರೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕುಡಿತ ಬಿಡುವಂತೆ ಬುದ್ದಿ ಹೇಳಿದ್ದರೂ ಕುಡಿದು ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಆಕೆ 8 ತಿಂಗಳ ಹಿಂದೆ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳನ್ನು ಹೊಸಕೋಟೆಯಲ್ಲಿರುವ ತವರು ಮನೆಯಲ್ಲಿ ಬಿಟ್ಟು ಗಾರ್ಮೆಂಟ್ಸ್ ಗೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಪ್ರತಿವಾರ ಮಕ್ಕಳನ್ನು ಕರೆದೊಯ್ಯುತ್ತಿದ್ದ: ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದ ಶ್ರೀನಿವಾಸಮೂರ್ತಿ ವಾರಾಂತ್ಯದಲ್ಲಿ ತನ್ನ ಇಬ್ಬರು ಮಕ್ಕಳನ್ನು ಹೊಸಕೋಟೆಯಿಂದ ಕರೆತಂದು ಎರಡು ದಿನ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಶನಿವಾರ (ಅ.28) ಕೂಡ ಮಕ್ಕಳನ್ನು ಕರೆತಂದ ಶ್ರೀನಿವಾಸಮೂರ್ತಿ ತಡರಾತ್ರಿ ಮದ್ಯದ ಅಮಲಿನಲ್ಲಿ ಮಲಗಿದ್ದ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬಳಿಕ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಡರಾತ್ರಿ 3 ಗಂಟೆ ಸುಮಾರಿಗೆ ಬೆಂಕಿಯ ಕೆನ್ನಾಲಿಗೆಯ ನೋವಿನಿಂದ ನರಳಾಡುತ್ತಿದ್ದ ಮಕ್ಕಳ ಚೀರಾಟ ಕೇಳಿ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಸಾಯಿಚರಣ್ ಮೃತಪಟ್ಟರೆ, ಚೇತನ್ ಶೇ.90ರಷ್ಟು ಸುಟ್ಟ ಗಾಯಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶ್ರೀನಿವಾಸಮೂರ್ತಿಗೆ ಶೇ.30 ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತಲ್ಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2ನೇ ವಿವಾಹವಾದ ಪ್ರೇಮಲತಾ: ಪ್ರೇಮಲತಾಗೆ ಈ ಮೊದಲು ಮದುವೆಯಾಗಿತ್ತು. ಕೆಲ ವರ್ಷಗಳ ಹಿಂದೆ ಪ್ರೇಮಲತಾಳನ್ನು ಪರಿಚಿತ ವ್ಯಕ್ತಿ ಜತೆ ಈಕೆಯ ಪೋಷಕರು ಮದುವೆ ಮಾಡಿಸಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೆಲ ವರ್ಷಗಳ ಬಳಿಕ ಕೌಟುಂಬಿಕ ಕಲಹ ಉಂಟಾಗಿ, ಪತಿಯನ್ನು ತೊರೆದು ಪ್ರೇಮಲತಾ ತವರು ಮನೆಯಲ್ಲಿ ವಾಸಿಸುತ್ತಿದ್ದರು.
ನಂತರ ಇಬ್ಬರು ಮಕ್ಕಳನ್ನು ಪತಿಯೇ ಸಾಕುತ್ತಿದ್ದರು. ಈ ವಿಚಾರವನ್ನು ಪ್ರೇಮಲತಾ, ತನ್ನನ್ನು ಪ್ರೀತಿಸುತ್ತಿದ್ದ ಶ್ರೀನಿವಾಸಮೂರ್ತಿಗೂ ತಿಳಿಸಿದ್ದರು. ಅವಿವಾಹಿತನಾಗಿದ್ದ ಶ್ರೀನಿವಾಸ್‌ಮೂರ್ತಿ ಈಕೆಯ ಪೋಷಕರ ಮನವೊಲಿಸಿ ಪ್ರೇಮಲತಾಳನ್ನು ಮದುವೆಯಾಗಿ ಅಂಜನಾಪುರದಲ್ಲಿರುವ ತನ್ನ ಬಾಡಿಗೆಯಲ್ಲಿ ವಾಸವಾಗಿದ್ದರು.