Advertisement

ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭ

12:40 PM Jul 29, 2017 | |

ನವಲಗುಂದ: ಮಹದಾಯಿ ಯೋಜನೆ ಜಾರಿಗೆ ಹಾಗೂ ರೈತಪರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ರೈತಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರು ಮತ್ತು ನಿವೃತ್ತ ಶಿಕ್ಷಕ ಡಿ.ವಿ. ಕುರಹಟ್ಟಿ ಶುಕ್ರವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 

Advertisement

ಇಬ್ಬರೂ ಹೋರಾಟಗಾರರು ಅನ್ನಾಹಾರ ತ್ಯಜಿಸಿದ್ದು, ಲೋಕನಾಥ ಅವರು ಉಪವಾಸ ಸತ್ಯಾಗ್ರಹ ವೇಳೆ ಕೇವಲ ಕಳಸಾ-ಬಂಡೂರಿ ನಾಲೆ ನೀರನ್ನು ಮಾತ್ರ ಸೇವನೆ ಮಾಡುತ್ತೇನೆಂದು ಶಪಥ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳಸಾ-ಬಂಡೂರಿ ನೀರು ತರಲು ರೈತ ಮುಖಂಡ ಗುರು ರಾಯನಗೌಡರ ತೆರಳಿದ್ದಾರೆ. 

ಈ ವೇಳೆ ಲೋಕನಾಥ ಹೆಬಸೂರ ಮಾತನಾಡಿ, ಪೊಲೀಸರ ಲಾಠಿ ಏಟು ತಿಂದ ಅಮಾಯಕರಿಗೆ ವರ್ಷ ಕಳೆದರೂ ಸೂಕ್ತ ಪರಿಹಾರ ವಿತರಿಸಿಲ್ಲ. ಮಹದಾಯಿ  ಯೋಜನೆ ಜಾರಿಯಾಗುವ ವರೆಗೆ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದರು. ಡಿ.ವಿ. ಕುರಹಟ್ಟಿ ಮಾತನಾಡಿ, ಒಂದು ವೇಳೆ ನಾವು ಈ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರೆ ಮಹದಾಯಿ-ಮಲಪ್ರಭಾ ನದಿ ದಡದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕೆಂದರು. 

ಯೋಜನೆ ನನೆಗುದಿಗೆ ತಳ್ಳಿದ ಜೋಶಿ: ರೈತ ಮುಖಂಡ ಬಸವರಾಜ ಸಾಬಳೆ ಮಾತನಾಡಿ, ಸಂಸದ ಪ್ರಹ್ಲಾದ ಜೋಶಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಕಿವಿ ಕಡಿದು ಮಹದಾಯಿ ಯೋಜನೆಯನ್ನು ನನೆಗುದಿಗೆ ತಳ್ಳಿದ್ದಾರೆ. ಪ್ರಥಮ ಬಾರಿಗೆ ಸರ್ವಪಕ್ಷ ನಿಯೋಗ ಕರೆದೊಯ್ದ ಸಂದರ್ಭದಲ್ಲಿ ಜೋಶಿ ಅವರು ಪ್ರಧಾನಿಗೆ ಮನವರಿಕೆ ಮಾಡಲು  ಹಿಂದೇಟು ಹಾಕಿದ್ದರು.

ಪರಿಣಾಮ ಎರಡು ವರ್ಷಗಳಿಂದ ಮಹದಾಯಿಗಾಗಿ ನಿರಂತರ ಹೋರಾಟ ನಡೆಸುವ ಸಂದರ್ಭ ಬಂದಿದೆ. ಮೂರೂ ಪಕ್ಷಗಳು ರೈತರನ್ನು ಒಡೆದಾಳುತ್ತಿವೆ ಎಂದು ದೂರಿದರು. ರೈತ ಮುಖಂಡ ರಮೇಶ ನವಲಗುಂದ ಮಾತನಾಡಿ, ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು. 

Advertisement

ಮನವಿಗೆ ಜಗ್ಗದ ಹೋರಾಟಗಾರರು: ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ವಿ. ಮಾಡಳ್ಳಿ ಉಪವಾಸ ಕೈಬಿಡುವಂತೆ ಮಾಡಿದ ಮನವಿಗೆ ಹೋರಾಟಗಾರರು ಜಗ್ಗಲಿಲ್ಲ. ರಾಜ್ಯ  ಸರಕಾರದ ಮಟ್ಟದಲ್ಲಿರುವ ಸಮಸ್ಯೆ ಪರಿಹರಿಸಲು ಕಾಂಗ್ರೆಸ್‌ ಬದ್ಧವಾಗಿದೆ. 

ಪಕ್ಷತೀತವಾಗಿ ಮಹಾದಾಯಿ ಯೋಜನೆ ಜಾರಿಗೊಳಿಸುವಂತೆ ಪ್ರಧಾನಿ ಅವರಿಗೆ ಮನವರಿಕೆ ಮಾಡಲು ಒತ್ತಡ ಹೇರೋಣ. ನಿಮ್ಮ ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ಮಾಡಳ್ಳಿ ಮನವಿ ಮಾಡಿದರು. ಅದಕ್ಕೆ ಒಪ್ಪದ ರೈತ ಹೋರಾಟಗಾರರು ಬೇಡಿಕೆ ಈಡೇರುವ ವರೆಗೂ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಪಟ್ಟುಹಿಡಿದರು. 

ರೈತ ಮುಖಂಡರಾದ ಸುಭಾಸ್‌ ಚಂದ್ರಗೌಡ ಪಾಟೀಲ, ಆರ್‌.ಜಿ. ಪಾಟೀಲ, ವೆಂಕನಗೌಡ ಪಾಟೀಲ, ದೇವೇಂದ್ರಪ್ಪ ಹಳ್ಳದ, ಆರ್‌.ಎಂ. ನಾಯ್ಕರ, ಯಲ್ಲಪ್ಪ ದಾಡಿಬಾಯಿ, ಗುರು ರಾಯನಗೌಡರ, ಚಂದ್ರಶೇಖರ ಕಿಲಾರಿಮಠ, ಶಿವಾನಂದ ಬರ್ದವಾಡ, ಅಪ್ಪಣ್ಣ ನರಗುಂದ, ಯಲ್ಲಪ್ಪ ದಾಡಿಬಾಯಿ, ಬಸಯ್ಯ ಮಠಪತಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next