ಬೆಂಗಳೂರು: ರೈತರ ಸಾಲ ಮನ್ನಾದ ಜತೆಗೆ ಇತರೆ ಕಾರ್ಯಕ್ರಮಗಳನ್ನೂ ಮುಂದುವರಿಸಿಕೊಂಡು
ಹೋಗಬೇಕಿರುವುದರಿಂದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು
ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಇದರಿಂದಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜು.5ರಂದು ಮಂಡಿಸುವ ಬಜೆಟ್‌ನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಇಲ್ಲ. ಬೆಳೆ ಸಾಲ ಮಾತ್ರ ಮನ್ನಾ ಆಗಲಿಗೆ ಎಂಬುದು ಸ್ಪಷ್ಟವಾಗಿದೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಲು ಸರ್ಕಾರ ಬದ್ಧವಾಗಿದೆ. ಆದರೆ, ಸಂಪೂರ್ಣ ಸಾಲ ಮನ್ನಾ ಮಾಡಲು ಸಾಕಷ್ಟು ಮೊತ್ತ ಬೇಕಾಗಿದ್ದು, ಹಾಗೆ ಮಾಡಿದರೆ ಇತರೆ ಕಾರ್ಯ ಕ್ರಮಗಳ ಅನುದಾನವನ್ನು ಸಾಕಷ್ಟು ಕಡಿಮೆ ಮಾಡಬೇಕಾಗುತ್ತದೆ. ಹಾಗೆಂದು ಒಂದೇ ಬಾರಿ ಈ ರೀತಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮೇಲಾಗಿ ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿಮೆ ಮಾಡಿದರೆ ರಸ್ತೆ ಅಭಿವೃದ್ಧಿ ಸೇರಿ ಜನರಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದರು.