Advertisement

Dharawad: ಸರ್ಕಾರ ಕೂಡಲೆ ಬರಗಾಲ ಘೋಷಿಸಲು ರೈತ ಸಂಘ ಆಗ್ರಹ

03:09 PM Aug 20, 2023 | Team Udayavani |

ಧಾರವಾಡ: ರಾಜ್ಯದಲ್ಲಿ ಮಳೆ-ಬೆಳೆಯ ಕೊರತೆಯಿಂದ ರೈತ ಸಮುದಾಯ ಸಂಕಷ್ಟದಲ್ಲಿದ್ದು, ರೈತರ ನೆರವಿಗೆ ಸರಕಾರ ಮುಂದಾಗಬೇಕಿದೆ. ಈ ಕೂಡಲೇ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವ ಮೂಲಕ ಬರಗಾಲದ ಪರಿಹಾರ ನೀಡುವ ಕೆಲಸ ಸರಕಾರ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಹೇಳಿದರು.

Advertisement

ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರಕಾರ ಮಾಹಿತಿ ಕೊಟ್ಟ ಬಳಿಕ ಕೇಂದ್ರ ತಂಡವು ಆಗಮಿಸಿ, ಬರ ವೀಕ್ಷಣೆ ಮಾಡುತ್ತದೆ. ಆ ಬಳಿಕ ಈ ತಂಡವು ಕೇಂದ್ರಕ್ಕೆ ವರದಿ ಸಲ್ಲಿಸಿದ ಮೇಲೆ ಬರಗಾಲದ ಪರಿಹಾರ ಸಿಗುತ್ತದೆ. ಈ ಪ್ರಕ್ರಿಯೆ ಎಲ್ಲವೂ ಮುಗಿದು ಬರಗಾಲದ ಪರಿಹಾರ ಬರುವಷ್ಟರಲ್ಲಿ ರೈತನ ಜೀವವೇ ಹೋಗಿರುತ್ತದೆ ಎಂದು ವಿಷಾದಿಸಿದರು.

ರೈತರಿಗೆ ಇಂತಹ ಸಂಕಷ್ಟದಲ್ಲಿ ನೆರವು ನೀಡುವತ್ತ ಸಹಕಾರಿ ಆಗಲು ಶಾಶ್ವತ ಠೇವಣಿ ಇಡುವಂತಹ ಕೆಲಸ ಸರಕಾರದಿಂದ ಆಗಬೇಕಿದೆ. ಇದರಿಂದ ಬೇಗ ಪರಿಹಾರ ದೊರೆಯಲು ಸಹಕಾರಿ ಆಗಲಿದೆ. ಇನ್ನು ರಾಜ್ಯ ಸರಕಾರವು ರೈತರ ಸಂಕಷ್ಟಕ್ಕೆ ಧಾವಿಸುವ ಕೆಲಸ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡುವುದರ ಜತೆಗೆ ಬರಗಾಲದ ಪರಿಹಾರ ಬೇಗ ಸಿಗುವಂತೆ ಮಾಡಬೇಕು. ಇನ್ನು ಮುಂಗಾರು ಮಳೆಯಿಲ್ಲದೇ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿ ಇರುವ ರೈತರಿಗೆ ಪರಿಹಾರ ನೀಡುವುದರ ಜತೆಗೆ ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಸರಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಳೆ-ಬೆಳೆಯಿಲ್ಲದೇ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದು, ರೈತರ ಸಂಕಷ್ಟ ಅರಿಯದ ಬ್ಯಾಂಕ್‌ಗಳು ಸಾಲ ವಸೂಲಾತಿಯಲ್ಲಿ ತೊಡಗಿವೆ. ಹೀಗಾಗಿ ಸಾಲ ಮನ್ನಾ ಮಾಡಬೇಕು. ಅದಕ್ಕೂ ಮುನ್ನ ಬರಪೀಡಿತ ಪ್ರದೇಶದ ರೈತರಿಂದ ಮಾಡುತ್ತಿರುವ ಸಾಲ ವಸೂಲಾತಿಗೆ ತಡೆ ನೀಡಬೇಕು. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕೆಲಸ ಆಗಬೇಕು ಎಂದರು.

ರಾಜ್ಯದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಮನದಟ್ಟು ಮಾಡಲು ರೈತರ ನಿಯೋಗವು ಆ.೨೫ ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ಈ ನಿಯೋಗದಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಸೇರಿದಂತೆ ರಾಷ್ಟ್ರಮಟ್ಟದ ರೈತ ಮುಖಂಡರೂ ಪಾಲ್ಗೊಳ್ಳಲಿದ್ದು, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದರ ಜತೆಗೆ ರೈತ ಜೀವನ ಸುಧಾರಣೆಗೆ ಬೇಕಿರುವ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡಲಾಗುವುದು ಎಂದರು.

Advertisement

ಜಿಲ್ಲಾ ಕಾರ್ಯಕರ್ತರ ಸಭೆ-ಕಾರ್ಯಾಗಾರ : ಇನ್ನೂ ಈ ಪತ್ರಿಕಾಗೋಷ್ಠಿಯ ಬಳಿಕ ಕರ್ನಾಟಕ ರಾಜ್ಯ ರೈತ ಸಂಘದಿಂದ ಧಾರವಾಡ ಜಿಲ್ಲೆಯಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವ ದೃಷ್ಠಿಯಿಂದ ಚರ್ಚಿಸಲು ಜಿಲ್ಲಾ ಕಾರ್ಯಕರ್ತರ ಸಭೆ ಹಾಗೂ ಕಾರ್ಯಾಗಾರವು ನಗರದ ಸಮಾಜ ಪರಿವರ್ತನ ಸಮುದಾಯ ಭವನದಲ್ಲಿ ಜರುಗಿತು.

ಈ ಕಾರ್ಯಾಗಾರಕ್ಕೆ ಸಂಘದ ಗೌರವಾಧ್ಯಕ್ಷ ಚಾಮರಾಸ ಮಾಲೀಪಾಟೀಲ ಚಾಲನೆ ನೀಡಿದರೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆವರು, ರೈತ ಚಳುವಳಿಯ ಹುಟ್ಟು, ಬೆಳವಣಿಗೆ ಮತ್ತು ಕಾರ್ಯಕರ್ತರಿಗೆ ಇರಬೇಕಾದ ಸಾಂಘಿಕ ಶಿಸ್ತು, ಬದ್ದತೆ ಕುರಿತು ವಿಷಯ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಅವರು ಸಂಘದ ಸಂವಿಧಾನದ ವಿಚಾರ ಕುರಿತು ಮಾತನಾಡಿದರು. ಇದಾದ ಬಳಿಕ ನಡೆದ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲೆಯಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಜಿಲ್ಲೆಯ ಸಮಸ್ಯೆಗಳ ವಿರುದ್ದ ಹೋರಾಟ ರೂಪಿಸುವ ಬಗ್ಗೆ ಚರ್ಚಿಸದಲ್ಲದೇ, ಜಿಲ್ಲಾ ಸಮಿತಿ ಪುನರ್ ರಚನೆ ಮತ್ತು ಯುವ ಘಟಕ, ಮಹಿಳಾ ಘಟಕ ರಚಿಸಲಾಯಿತು. ಈ ಸಂದರ್ಭದಲ್ಲಿ ನಾಗಪ್ಪ ಹುಂಡಿ, ಈರಣ್ಣ ಬಳಿಗೇರ ಸೇರಿದಂತೆ ಜಿಲ್ಲೆ, ತಾಲೂಕಿನ ವಿವಿಧ ಪದಾಽಕಾರಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.

ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿ ಅಽಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರಕಾರದ ಭರವಸೆ ಹುಸಿಯಾಗಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವತ್ತ ದಿಟ್ಟ ಕ್ರಮಗಳು ಆಗಿಲ್ಲ. ಇನ್ನು ರೈತರ ಸಂಕಷ್ಟಕ್ಕೂ ಸರಕಾರ ನಿರ್ಲಕ್ಷ್ಯ ಭಾವ ತಾಳಿರುವುದು ಸರಿಯಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು, ಹೀಗಾಗಿ ರಾಜ್ಯ ಸರಕಾರವು ಈ ಕೂಡಲೇ ರೈತರ ಸಂಕಷ್ಟಗಳಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು.
-ಚಾಮರಸ ಮಾಲೀ ಪಾಟೀಲ್, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಇದನ್ನೂ ಓದಿ: Cheems: ಲಕ್ಷಾಂತರ ‌ಮಂದಿಯನ್ನು ನಗಿಸಿದ ʼಚೀಮ್ಸ್ʼ ಖ್ಯಾತಿಯ ನಾಯಿ ಸಾವು; ಕಾಡಿದ ಕ್ಯಾನ್ಸರ್

Advertisement

Udayavani is now on Telegram. Click here to join our channel and stay updated with the latest news.

Next