Advertisement

ರೈತರ 45 ಸಾವಿರ ಕೋಟಿ ಸಾಲಮನ್ನಾ ಶತಃಸಿದ್ಧ

07:17 AM Mar 02, 2019 | Team Udayavani |

ಮೈಸೂರು: ಹೈನುಗಾರಿಕೆ ಪ್ರೋತ್ಸಾಹಿಸುವ ಸಲುವಾಗಿ ಹಾಲಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ ಒಂದು ರೂ. ಹೆಚ್ಚಳ ಮಾಡಿದ್ದು, ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಆಲನಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಮೆಗಾ ಡೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಆರಂಭದಲ್ಲಿ ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 2 ರೂ. ನೀಡಲಾಗುತ್ತಿತ್ತು. ಅದನ್ನು 4 ರೂ., 5 ರೂ.ಗಳಿಗೆ ಹೆಚ್ಚಳ ಮಾಡಿದ್ದು, ತಮ್ಮ ಸರ್ಕಾರ ಪ್ರೋತ್ಸಾಹಧನವನ್ನು ಇನ್ನೂ ಒಂದು ರೂಪಾಯಿ ಹೆಚ್ಚಳ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದು, ಏಪ್ರಿಲ್‌ 1 ರಿಂದ ಪ್ರತಿ ಲೀಟರ್‌ ಹಾಲಿಗೆ 6 ರೂಪಾಯಿ ಸರ್ಕಾರದ ಪ್ರೋತ್ಸಾಹ ಧನ ಸಿಗಲಿದೆ ಎಂದರು.

ಉಚಿತ ವಿದ್ಯುತ್‌: ಕೇಂದ್ರ ಸರ್ಕಾರ ಡಿಪಿಟಿ ಯೋಜನೆಯಡಿ ರಾಜ್ಯದ ರೈತರಿಗೆ 2098 ಕೋಟಿ ರೂ. ಕೊಡಲಿದೆ. ಆದರೆ, ರಾಜ್ಯ ಸರ್ಕಾರ ಹೈನುಗಾರರಿಗೆ ಕೊಡುತ್ತಿರುವ ಪ್ರೋತ್ಸಾಹ ಧನವೇ 2500 ಕೋಟಿ ರೂ. ಆಗಲಿದೆ. ಜೊತೆಗೆ ರೈತರಿಗೆ ಉಚಿತ ವಿದ್ಯುತ್‌ ನೀಡಲು ಸಬ್ಸಿಡಿಗೆ 11 ಸಾವಿರ ಕೋಟಿ ನೀಡಲಾಗುತ್ತಿದೆ ಎಂದರು.

ಸಾಲಮನ್ನಾ: ರಾಜ್ಯದ ರೈತರ 45 ಸಾವಿರ ಕೋಟಿ ಸಾಲಮನ್ನಾ ಬಗ್ಗೆ ಯಾವುದೇ ಅನುಮಾನ ಬೇಡ. ಒಂದು ಲಕ್ಷ ರೂ.ಗಳವರೆಗೆ ಸಹಕಾರ ಬ್ಯಾಂಕುಗಳಲ್ಲಿನ ಸಾಲಮನ್ನಾ, 2 ಲಕ್ಷ ರೂ.ಗಳವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ ಆಗಲಿದೆ.

ರಾಜ್ಯದ 40 ಲಕ್ಷ ರೈತ ಕುಟುಂಬಗಳ ಪೈಕಿ ಫೆ.26ರವರೆಗೆ 10.40 ಲಕ್ಷ ರೈತ ಕುಟುಂಬಗಳ ಸಾಲಮನ್ನಾ ಆಗಿದೆ. ಹೀಗಾಗಿ ಸಾಲಮನ್ನಾ ಬಗ್ಗೆ ಅನುಮಾನಬೇಡ. ಆದರೆ, ಒಂದೇ ಬಾರಿಗೆ ಸಾಲಮನ್ನಾ ಮಾಡಲಾಗಲ್ಲ. ಅದಕ್ಕೆ ಮಾಹಿತಿಗಳನ್ನು ಪಡೆಯಬೇಕಾಗಿರುವುದರಿಂದ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದರು.

Advertisement

ಮೆಗಾ ಡೇರಿಗೆ 50 ಕೋಟಿ ನೆರವು: ಹಿಂದಿನ ಸರ್ಕಾರಗಳು ಮೈಸೂರಿನಲ್ಲಿ ಮೆಗಾಡೇರಿ ಸ್ಥಾಪಿಸುವ ತೀರ್ಮಾನ ಮಾಡಿದ್ದರೂ ಕೆಲಸ ಆಗಿರಲಿಲ್ಲ. ಮೈಸೂರು ಹಾಲು ಒಕ್ಕೂಟ 41 ಕೋಟಿ ರೂ., ಆರ್‌ಕೆವೈಬಿ ಅನುದಾನ 6 ಕೋಟಿ ರೂ., ಎನ್‌ಡಿಡಿಬಿಯಿಂದ 80 ಕೋಟಿ ರೂ. ಸಾಲ ಪಡೆದು 128 ಕೋಟಿ ರೂ. ವೆಚ್ಚದಲ್ಲಿ ಮೆಗಾಡೇರಿ ನಿರ್ಮಿಸಿದ್ದು,

ಎರಡನೇ ಹಂತದಲ್ಲಿ 59 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಪುಡಿ ಘಟಕ ಸ್ಥಾಪಿಸಲು ಉದ್ದೇಶಿಸಿದೆ. ಮೆಗಾಡೇರಿ ಸ್ಥಾಪನೆಯಿಂದ ಹಾಲು ಸಂಗ್ರಹಣೆ ಮತ್ತು ಮಾರಾಟಕ್ಕೆ ಉತ್ತಮ ವ್ಯವಸ್ಥೆಯಾಗಿದ್ದು , ಮೈಸೂರು ಹಾಲು ಒಕ್ಕೂಟದ ಅಭಿವೃದ್ಧಿಗಾಗಿ 50 ಕೋಟಿ ರೂ. ನೆರವು ನೀಡುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

50 ಪೈಸೆ ಏರಿಕೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಏಪ್ರಿಲ್‌ 1 ರಿಂದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ರೈತರಿಂದ ಖರೀಸಿಸುವ ಹಾಲಿಗೆ ಪ್ರತಿ ಲೀಟರ್‌ಗೆ 50 ಪೈಸೆ ಹೆಚ್ಚಳ ಮಾಡಲು ತೀರ್ಮಾನಿಸಿದೆ ಎಂದರು. ಇದೇ ಸಂದರ್ಭದಲ್ಲಿ ಸಾಲಮನ್ನಾ ಯೋಜನೆಯಡಿ ಸಹಕಾರ ಬ್ಯಾಂಕುಗಳಲ್ಲಿ ಸಾಲಮನ್ನಾ ಆದ ರೈತರಿಗೆ ಋಣಮುಕ್ತ ಪತ್ರ ನೀಡಲಾಯಿತು.

ಕಾಯಕ ಯೋಜನೆಯಡಿ 12 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ 1.10 ಕೋಟಿ ಮೊತ್ತದ ಸಾಲದ ಚೆಕ್‌ ವಿತರಿಸಲಾಯಿತು. ಕಾರ್ಮಿಕ ಇಲಾಖೆವತಿಯಿಂದ ನೀಡಲಾಗುವ ಕಾರ್ಮಿಕ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಸಚಿವರಾದ ಸಾ.ರಾ.ಮಹೇಶ್‌, ಬಂಡೆಪ್ಪ ಕಾಶೆಂಪೂರ, ಶಾಸಕರಾದ ಅಡಗೂರು ಎಚ್‌.ವಿಶ್ವನಾಥ್‌, ಡಾ.ಯತೀಂದ್ರ, ಅನಿಲ್‌ಕುಮಾರ್‌, ಅಶ್ವಿ‌ನ್‌ಕುಮಾರ್‌, ಬಿ.ಹರ್ಷವರ್ಧನ್‌, ಕೆ.ಮಹದೇವ್‌, ವಿಧಾನಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಮೈಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್‌ ಮೊದಲಾದವರು ಉಪಸ್ಥಿತರಿದ್ದರು.

ಗೊಂದಲದಗೂಡಾದ ಕಾರ್ಯಕ್ರಮ: ಮೆಗಾಡೇರಿ ಉದ್ಘಾಟನಾ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಗಮಿಸಿದಾಗ ಸಂಜೆ 5.30ಗಂಟೆ ಆಗಿತ್ತು. ನಗರದಲ್ಲಿ ಇನ್ನೂ ಎರಡು ಕಾರ್ಯಕ್ರಮಗಳಿಗೆ ಹೋಗಬೇಕಾದ ಒತ್ತಡದಲ್ಲಿದ್ದರಿಂದ ನಾಡಗೀತೆಯನ್ನೂ ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸ್ವಾಗತ, ನಿರೂಪಣೆ ಎಲ್ಲವನ್ನೂ ಸಚಿವ ಜಿ.ಟಿ.ದೇವೇಗೌಡರೇ ಮಾಡಲು ನಿಂತು ಋಣಮುಕ್ತ ಪತ್ರ, ಕಾಯಕ ಯೋಜನೆ ಹೀಗೆ ಎಲ್ಲಾ ಫ‌ಲಾನುಭವಿಗಳನ್ನೂ ಒಟ್ಟಿಗೇ ವೇದಿಕೆಗೆ ಕರೆಯುತ್ತಿದ್ದರಿಂದ ಏನು ನಡೆಯುತ್ತಿದೆ ಎಂಬುದೇ ತಿಳಿಯದಂತಾಗಿತ್ತು.

ಕಾರ್ಯಕ್ರಮಕ್ಕಾಗಿ ದೂರದ ಊರುಗಳಿಂದ ಬೆಳಗ್ಗೆಯೇ ವಾಹನಗಳನ್ನು ಮಾಡಿಕೊಂಡು ಬಂದಿದ್ದ ಹೈನುಗಾರರು ಮುಖ್ಯಮಂತ್ರಿಯವರು ಬರುವುದು ತಡವಾಗಿದ್ದರಿಂದ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಅರ್ಧದಷ್ಟು ಜನರು ತಮ್ಮ ಊರುಗಳತ್ತ ಹೊರಟರು.

Advertisement

Udayavani is now on Telegram. Click here to join our channel and stay updated with the latest news.

Next