Advertisement

ರೈತರೆಂದರೆ ಕೇಂದ್ರ-ರಾಜ್ಯ ಸರ್ಕಾರಕ್ಕೆ ತಾತ್ಸಾರ: ಭೂತಯ್ಯ

12:28 PM Jul 04, 2017 | |

ಚಿತ್ರದುರ್ಗ: ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಎಪಿಎಂಸಿ ಮಾರುಕಟ್ಟೆಯ ರೈತ ಭವನದಿಂದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಆಡಳಿತಾರೂಢ ಸರ್ಕಾರಗಳು ರೈತರ ಬಗ್ಗೆ ಕಾಳಜಿ ಹೊಂದಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ  ನಿಲುವು ಕೈಬಿಟ್ಟು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ದೇಶದ ಯಾವೊಬ್ಬ ರೈತರು ತಮಗಾಗಿ ಸಾಲ ಮಾಡುತ್ತಿಲ್ಲ. ದೇಶಕ್ಕೆ ಅನ್ನ ಹಾಕಲು ಸಾಲ ಮಾಡಿ ಬಿತ್ತನೆ ಮಾಡುತ್ತಾರೆ. ಆದರೆ ಪ್ರಕೃತಿ ವೈಪರೀತ್ಯ, ಮಳೆ 
ಅಭಾವದಂತಹ ಹತ್ತಾರು ಸಮಸ್ಯೆಗಳಿಂದ ಸಾಲದ  ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಗೂಬೆ ಕೂರಿಸಿಕೊಂಡು ಸಾಲ ಮನ್ನಾ ಮಾಡಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದರು. 

ರೈತಸಂಘದ ಜಿಲ್ಲಾಧ್ಯಕ್ಷ ನುಲೇನೂರು ಎಂ. ಶಂಕರಪ್ಪ ಮಾತನಾಡಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಹ್ಮಣ್ಯ, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌, ನಬಾರ್ಡ್‌ ಸೇರಿದಂತೆ ಮತ್ತಿತರರು
ರೈತರ ಸಾಲ ಮನ್ನಾ ಮತ್ತು ರೈತರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿ ಅವಮಾನ ಮಾಡಿದ್ದಾರೆ. ರೈತ ವರ್ಗ ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ತಮ್ಮ ಹೇಳಿಕೆಗಳನ್ನು ವಾಪಸ್‌ ಪಡೆದು ರೈತರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷದ ಮುಂಗಾರು-ಹಿಂಗಾರು ಎರಡು ಅವಧಿಯಲ್ಲಿ ಮಳೆ ಬಾರದೆ ಸಾಕಷ್ಟು ನಷ್ಟ ಉಂಟಾಗಿದೆ. ಅದರ ಹಿಂದಿನ 5 ವರ್ಷ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಮುಂಗಾರು ಮಳೆ ಬಿದ್ದಿಲ್ಲ. ಹೀಗಾಗಿ
ರೈತರು ಮತ್ತಷ್ಟು ಆತಂಕದಲ್ಲಿದ್ದು ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಆಗಬೇಕು. ಪ್ರಕೃತಿ ವಿಕೋಪಗಳಿಂದ ರೈತರು ಸಾಲದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿಯ ಸಹವಾಸವೇ ಬೇಡ ಎಂದು ಗುಳೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನಿವೃತ್ತ ಪ್ರಾಂಶುಪಾಲ ಜೆ. ಯಾದವ ರೆಡ್ಡಿ, ಸಿ.ಆರ್‌. ತಿಮ್ಮಣ್ಣ, ಬಸ್ತಿಹಳ್ಳಿ ಸುರೇಶ್‌ಬಾಬು, ಬಿ.ಟಿ. ಹನುಮಂತಪ್ಪ, ಪ್ರವೀಣಕುಮಾರ್‌ ಇದ್ದರು. 

Advertisement

ಪ್ರಮುಖ ಬೇಡಿಕೆಗಳಿವು…
ಎನ್‌ಪಿಎ ಮತ್ತು ಒಟಿಎಸ್‌ ಮಾನದಂಡಗಳಿಂದ ರೈತರನ್ನು ಹೊರಗಿಡಬೇಕು. ರೈತರಿಗೆ ಬಿತ್ತನೆ ಸಂದರ್ಭದಲ್ಲಿ ಹೊಸ ಸಾಲ ನೀಡಬೇಕು. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಪ್ರಧಾನಮಂತ್ರಿಗಳ ಫಸಲ್‌ ಬಿಮಾ ಯೋಜನೆ ಅಡಿ ವಿಮಾ ಕಂತು ಕಟ್ಟಿರುವ ರೈತರಿಗೆ ವಿಮೆ ಹಣ ಇನ್ನೂ ಬಂದಿಲ್ಲ. ಬೆಳೆ ಹಾನಿ ಪರಿಹಾರದಲ್ಲೂ ತಾರತಮ್ಯ ಆಗಿದ್ದು,
ಇದನ್ನು ಸರಿಪಡಿಸಬೇಕು. ಮುದ್ರಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಗ್ರಾಮೀಣ ನಿರುದ್ಯೋಗಿ 
ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಡಿಸೆಂಬರ್‌ ವೇಳೆಗೆ ವಿವಿ ಸಾಗರ ಮತ್ತು ವೇದಾವತಿ ನದಿಗೆ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು
ಒತ್ತಾಯಿಸಿದರು.

ಪ್ರಧಾನಮಂತ್ರಿ ಮೋದಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಕೈಗಾರಿಕೆಗಳು ಹಾಗೂ 
ಬಹುರಾಷ್ಟ್ರೀಯ ಕಂಪನಿಗಳ 6 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡುವ ಮೂಲಕ ರೈತರ ಕಣ್ಣಿಗೆ ಸುಣ್ಣ, ಉದ್ಯಮಿಗಳ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. 
 ಕೆ.ಪಿ. ಭೂತಯ್ಯ, ರೈತಸಂಘದ ರಾಜ್ಯ ಉಪಾಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next