ಉಡುಪಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರಕಾರಕ್ಕೆ ಭತ್ತ ನೀಡಿ ರೈತನಿಗೆ ಇನ್ನೂ ಸರಕಾರದಿಂದ ಹಣವೇ ಬಂದಿಲ್ಲ. ಅಧಿಕಾರಿಗಳಿಂದಲೂ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿಯೇ ರೈತ ತನ್ನ ಶ್ರಮದ ಹಣಕ್ಕಾಗಿ ಕೇಂದ್ರ ಸಚಿವರ ಕಚೇರಿಯ ಕದ ತಟ್ಟಿದ್ದಾರೆ.
ಸ್ಥಳೀಯವಾಗಿ ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ವಿತರಣೆಗೆ ಅನುಕೂಲ ಆಗುವಂತೆ ಸ್ಥಳೀಯ ರೈತರು ಬೆಳೆಯುವ ಎಂಒ4 ಮೊದಲಾದ ಭತ್ತವನ್ನು ಕೇಂದ್ರ ಸರಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಕಳೆದ ವರ್ಷ ಅವಕಾಶ ಮಾಡಿಕೊಟ್ಟಿತ್ತು. ಉಭಯ ಜಿಲ್ಲೆಯಲ್ಲೂ ಖರೀದಿಗೆ ಕೇಂದ್ರಗಳನ್ನು ತೆರೆಯಲಾಗಿತ್ತು. ನಾಲ್ಕು ರೈತರು ಭತ್ತ ನೀಡಲು ಹೆಸರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಒಬ್ಬರು ಮಾತ್ರ ಭತ್ತ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಗ್ರಾಮದ ರೈತರೊಬ್ಬರು 31 ಕ್ವಿಂಟಾಲ್ ಭತ್ತವನ್ನು ಉಡುಪಿ ಎಪಿಎಂಸಿ ಖರೀದಿ ಕೇಂದ್ರದ ಮೂಲಕ ರಾಜ್ಯ ಆಹಾರ ನಿಗಮಕ್ಕೆ ನೀಡಿದ್ದಾರೆ. ಆದರೆ 31 ಕ್ವಿಂಟಾಲ್‌ಗೆ 78,926 ರೂ. ಸರಕಾರದಿಂದ ಬರಬೇಕಿತ್ತು. ಇನ್ನೂ ಬಂದಿಲ್ಲ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳಿಗೆ ಮೇಲಿಂದ ಮೇಲೆ ಕರೆ ಮಾಡಿದರೂ ಹಣ ಮಾತ್ರ ಬರುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಈ ರೀತಿಯಲ್ಲಿ ಸತಾಯಿಸುವುದು ಸರಿಯಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಬಹುಪಾಲು ರೈತರು ತಾವು ಬೆಳೆದ ಭತ್ತವನ್ನು ಖಾಸಗಿ ಮಿಲ್‌ಗಳಿಗೆ ನೀಡುವುದಕ್ಕೂ ಇದು ಒಂದು ಕಾರಣವಾಗಿದೆ. ಸರಕಾರಿಂದ ಹಣ ಬರುವಾಗ ವಿಳಂಬವಾಗುತ್ತದೆ ಮತ್ತು ಖರೀದಿಯ ಖಾತ್ರಿ ಇರು ವುದಿಲ್ಲ. ಖರೀದಿ ಪ್ರಕ್ರಿಯೆಯೂ ವಿಳಂಬವಾಗುತ್ತದೆ. ಆದರೆ ಮಿಲ್‌ನವರು ನಿರ್ದಿಷ್ಟ ಸಮಯದಲ್ಲಿ ಹಣ ನೀಡುತ್ತಾರೆ ಅಥವಾ ಮುಂಗಡವಾಗಿಯೂ ಹಣ ಪಾವತಿಸುವ ವ್ಯವಸ್ಥೆಯಿದೆ. ಬಿತ್ತನೆ ಸಂದರ್ಭದಲ್ಲಿ ನೆರವಿಗೆ ಬರುತ್ತಾರೆ. ಆದರೆ, ಸರಕಾರ ಭತ್ತ ಪಡೆದು ತಿಂಗಳುಗಳೇ ಕಳೆದರೂ ಹಣ ಮಾತ್ರ ನೀಡುತ್ತಿಲ್ಲ. ನಿತ್ಯವೂ ತನ್ನ ಹಣಕ್ಕಾಗಿ ಅಧಿಕಾರಿಗಳಿಗೆ ಕರೆ ಮಾಡಬೇಕಾದ ಸಂಕಷ್ಟ ರೈತರಿಗೆ ಎದುರಾಗುತ್ತಿದೆ.
ತಾಂತ್ರಿಕ ಸಮಸ್ಯೆ
ತಾಂತ್ರಿಕ ಸಮಸ್ಯೆಯಿಂದ ಹಣ ನೀಡುವುದು ಸ್ವಲ್ಪ ವಿಳಂಬವಾಗಿದೆ. ಈ ಸಂಬಂಧ ಕಡತ ಈಗಾಗಲೇ ಕೇಂದ್ರ ಕಚೇರಿಗೆ ಹೋಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಡುಪಿ, ದ.ಕ. ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ ಅವರು ತಿಳಿಸಿದರು.