ವಿಜಯಪುರ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿರುವ ಕಾರಣ ಎಲ್ಲೆಡೆ ಭೂಮಿಯಲ್ಲಿ ಬೆಳೆದು ನಿಂತಿರುವ ಬೆಳೆಯಿಂದ ರೈತರ ಮೊಗದಲ್ಲಿ ಮಂದಹಾಸವಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ತನ್ನ ಜಮೀನಿನಲ್ಲಿ ಮೈದುಂಬಿ ನಿಂತಿರುವ ಬೆಳೆ ಸಮೃದ್ಧಿಗಾಗಿ ಎಳ್ಳ ಅಮಾವಾಸ್ಯೆ ದಿನ ಭೂದೇವಿಗೆ ಉಡಿ ತುಂಬಿ, ಚರಗ ಚಲ್ಲಿ ಸಂತೃಪ್ತರಾಗುತ್ತಾರೆ. ಈ ಬಾರಿಯೂ ಸಂಭ್ರಮದಿಂದಲೇ ರೈತರು ಎಳ್ಳ ಅಮಾವಾಸ್ಯೆಯ ಚರಗ ಆಚರಿಸಿದರು.
ಜಿಲ್ಲೆಯ ಎಲ್ಲೆಡೆಯೂ ರೈತರು ಎತ್ತಿನ ಬಂಡಿ, ಟ್ರ್ಯಾಕ್ಟರ್ ಮಾತ್ರವಲ್ಲ ಶ್ರೀಮಂತ ರೈತರು ವೈಭವಯುತ ಕಾರುಗಳು, ಚಕ್ಕಡಿ ಹಾಗೂ ಸ್ವಂತ ವಾಹನ ಇಲ್ಲದ ರೈತರು ಬಾಡಿಗೆ ವಾಹನಗಳಲ್ಲಿ ತಮ್ಮ ಜಮೀನಿಗೆ ತೆರಳಿ ಭೂದೇವಿಗೆ ಭಕ್ತಿಯಿಂದ ಉಡಿ ತುಂಬಿ, ಚರಗ ಚಲ್ಲಿ, ಭೂಮಾತೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
ರೈತ ಮಹಿಳೆಯರು ನಾಲ್ಕಾರು ದಿನಗಳಿಂದ ಮನೆಯಲ್ಲಿ ಹಬ್ಬಕ್ಕಾಗಿಯೇ ತಯಾರಿಸಿದ ವಿಶೇಷ ಸಿಹಿ ಖಾದ್ಯ ಎಳ್ಳು ಹೋಳಿಗೆ ಜೊತೆಗೆ, ಹೂರಣದ ಹೋಳಿಗೆ, ಸೇಂಗಾ ಹೋಳಿಗೆ, ಕರಚಿ ಕಾಯಿ ಸೇರಿದಂತೆ ಹತ್ತು ಹಲವು ಸಿಹಿ ಖಾದ್ಯ, ನಾಲ್ಕಾರು ಬಗೆಯ ತರಕಾರಿ, ಎಳ್ಳು ಹಚ್ಚಿದ ಜೋಳದ, ಸಜ್ಜೆ ರೊಟ್ಟಿ, ಚಪಾತಿ, ಸೇಂಗಾ, ಗುರೆಳ್ಳು, ಅಗಸೆ ಸೇರಿದಂತೆ ಹಲವು ಬರೆಗಯ ಹಿಂಡಿ ಹೀಗೆ ವಿವಿಧ ಬಗೆಯ ಅಡುಗೆಯನ್ನು ಭೂದೇವಿಗೆ ನೈವೇದ್ಯ ಮಾಡಿ, ಸಮರ್ಪಿಸಿ, ತನ್ನ ಜಮೀನಿನಲ್ಲಿ ಬೆಳೆದು ನಿಂತಿರುವ ಪೈರು ಕೊಯ್ಲಿನ ಸಂದರ್ಭದಲ್ಲಿ ಹುಲುಸಾಗಿ ಅಕ ಇಳುವರಿ ಮೂಲಕ ನಮ್ಮ ಅಭ್ಯುಯ ಕರುಣಿಸು ಎಂದು ಭೂದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಎಳ್ಳ ಅಮವಾಸ್ಯೆ ಹಬ್ಬಕ್ಕಾಗಿಯೇ ಎಲ್ಲ ರೈತರು ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಹಬ್ಬಕ್ಕೆ ಆಹ್ವಾನಿಸುವ ಜೊತೆಗೆ, ತಮ್ಮ ಆಪ್ತರು, ಹಿತೈಷಿಗಳು ಹೀಗೆ ಹತ್ತಿರದ ಒಡನಾಡಿಗಳನ್ನೆಲ್ಲ ಹಬ್ಬ ನೆಪದಲ್ಲಿ ಹೊಲದಲ್ಲಿ ಊಟ ಮಾಡುವ ವಿಶಿಷ್ಟ ಅನುಭವ ಪಡೆಯಲು ಕರೆದೊಯ್ದು ಬಾಂಧವ್ಯ ವೃದ್ಧಿಸಿಕೊಂಡು ಸಂಭ್ರಮಿಸಿದರು.
ಮಳೆರಾಯ ಕಣ್ತೆರೆದು, ಭೂದೇವಿ ಮೈದುಂಬಿಕೊಂಡು ಹರಸಿದರೆ ಮಾತ್ರ ರೈತನ ಮನೆ ಮನ ಸಂತಸವಾಗಿರುತ್ತದೆ. ದೇಶಕ್ಕೆ ಅನ್ನ ಸಿಗುತ್ತದೆ. ಹೀಗಾಗಿ ದೇಶಕ್ಕೆ ಅನ್ನ ನೀಡುವ ಭೂಮಾತೆಗೆ ಉಡಿ ತುಂಬುವ ಈ ವಿಶಿಷ್ಟ ಹಬ್ಬ ಆಚರಿಸುವುದ ರೈತರ ಪಾಲಿಗೆ ಇನ್ನಿಲ್ಲದ ಸಂಭ್ರಮದ ಸಂಗತಿ ಎಂದು ಎಳ್ಳ ಅಮಾವಾಸ್ಯೆಯ ಚರಗ ಹಬ್ಬದ ಕುರಿತು ಕತಕನಹಳ್ಳಿಯ ಬಸವರಾಜ ಶಿವಸಂಗಪ್ಪ ಹಂಜಿ ವಿವರಿಸುತ್ತ ಸಂತಸ ಹಂಚಿಕೊಂಡರು. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಉತ್ತಮ ಮಳೆ ಆಗಿದೆ. ಜಿಲ್ಲೆಯ ಎಲ್ಲೆಡೆ ಉತ್ತಮ ಬೆಳೆಯೂ ಇದೆ. ಹೀಗಾಗಿ ರೈತರು ಹುಮಸ್ಸಿನಿಂದ ಹೊಲಕ್ಕೆ ಹೋಗಲು ಕಾತರತೆ ತೋರುತ್ತಿದ್ದಾನೆ ಎಂದು ಸಂಗಪ್ಪ ಬಬಲೇಶ್ವರ ಹೇಳುತ್ತಾರೆ.