Advertisement

ಉಡುಪಿ: ಪತ್ನಿ,ಮಗುವನ್ನು ತಿರಸ್ಕರಿಸಿದ ಕುಟುಂಬ

09:07 AM Aug 26, 2022 | Team Udayavani |

ಉಡುಪಿ: ನಗರದಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಬಾದಾಮಿ ಮೂಲದ ಅಯ್ಯಪ್ಪ (28) ಅವರು ಹೃದಯಘಾತದಿಂದ ಮೃತಪಟ್ಟಿದ್ದು, ಇದರ ಬೆನ್ನಲ್ಲೆ ಅವರ ಕುಟುಂಬದವರು ಅಯ್ಯಪ್ಪ ಅವರ ಪತ್ನಿ ಮತ್ತು ಮಗುವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಸಖಿ ಕೇಂದ್ರಕ್ಕೆ ದಾಖಲಿಸಿ ಆಶ್ರಯ ಕಲ್ಪಿಸಲಾಗಿದೆ.

Advertisement

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಮುತುವರ್ಜಿಯಲ್ಲಿ ಮಹಿಳೆ ಮತ್ತು 20 ದಿನದ ಮಗು ಸದ್ಯ ನಿಟ್ಟೂರಿನ ಸಖೀ ಕೇಂದ್ರದ ಆಶ್ರಯದಲ್ಲಿದ್ದಾರೆ. ಅಯ್ಯಪ್ಪ ಅವರು ಉಡುಪಿಯಲ್ಲಿ ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿದ್ದು, ಗುರುವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಾಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಪ್ರೀತಿಸಿ ವಿವಾಹ:

ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರ ಮದುವೆಗೆ ಎರಡೂ ಕಡೆಯಿಂದಲೂ ವಿರೋಧವಿತ್ತು ಎನ್ನಲಾಗಿದೆ. ಅಯ್ಯಪ್ಪ ಅವರು ನಿಧನರಾದ ಸುದ್ದಿಯನ್ನು ಅವರ ಮನೆಯವರಿಗೆ ತಿಳಿಸಿದಾಗ ಮೃತದೇಹವನ್ನು ಸ್ವೀಕರಿಸಲು ಒಪ್ಪಿಸಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳಲು ಮನವಿ:

Advertisement

ಅನಿವಾರ್ಯವಾಗಿ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸಖಿ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಹೆರಿಗೆಯಾಗಿ ಕೇವಲ 20 ದಿನಗಳಾಗಿದ್ದು, ಬಾಣಂತನದ ಆರೈಕೆಯಲ್ಲಿರಬೇಕಾದ ಮಹಿಳೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಈಕೆಯ ಔಷಧೋಪಾಚಾರ ಹಾಗೂ ಸೂಕ್ತ ಆರೈಕೆ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಬೇಕು. ಪ್ರೇಮ ವಿವಾಹವಾಗಿರುವುದರಿಂದ ಎರಡೂ ಕಡೆಯ ಕುಟುಂಬದ ಜತೆಗೆ ಮಾತುಕತೆ ನಡೆಸಿ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗು ಬೀದಿ ಪಾಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕರಣವನ್ನು ಮುತುವರ್ಜಿಯಿಂದ ನಿಭಾಯಿಸಿ ತಾಯಿ, ಮಗುವಿಗೆ ರಕ್ಷಣೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next