Advertisement

ಅಂಬಿಗ ಸಮಾಜದ 9 ಕುಟುಂಬಗಳಿಗೆ ಬಹಿಷ್ಕಾರ!

06:00 AM Nov 12, 2018 | |

ಕುಮಟಾ: ಜಗತ್ತು ಎಷ್ಟೇ ಪ್ರಗತಿ ಮಾರ್ಗದಲ್ಲಿ ಸಾಗಿದರೂ ಜಾತಿಕಟ್ಟು, ಸಾಮಾಜಿಕ ಬಹಿಷ್ಕಾರದಂತಹ ಕೆಟ್ಟ ಪದ್ಧತಿ ಇಂದಿಗೂ ಜೀವಂತವಾಗಿವೆ. ಇದಕ್ಕೆ ಜ್ವಲಂತ ಉದಾಹರಣೆ ಕುಮಟಾ ತಾಲೂಕಿನ ಕತಗಾಲ ಪಂಚಾಯತ್‌ ವ್ಯಾಪ್ತಿಯ ಉಪ್ಪಿನಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

Advertisement

ಉಪ್ಪಿನಪಟ್ಟಣದಲ್ಲಿ ಅಂಬಿಗ ಪರಮೇಶ್ವರ ಬೀರಪ್ಪ ಅಂಬಿಗ ಎಂಬುವವರಿಗೆ ಕಾರಣಾಂತರದಿಂದ 7-8 ವರ್ಷದ ಹಿಂದೆಯೇ ಜಾತಿಕಟ್ಟು ಅಥವಾ ಬಹಿಷ್ಕಾರ ಹಾಕಲಾಗಿದೆ. 2 ವರ್ಷದ ಹಿಂದೆ ಪರಮೇಶ್ವರನ ಸಹೋದರ ಗಣಪತಿ ಬೀರಪ್ಪ ಅಂಬಿಗನಿಗೆ ಪ್ರೀತಿಸಿದ ಯುವತಿಯೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಸ್ವಸಮಾಜದ ಯಜಮಾನ ನಾರಾಯಣ ಹನುಮಂತ ಅಂಬಿಗ ಅವರ ಒಪ್ಪಿಗೆಯನ್ನೂ ಹಲವು ಬಾರಿ ಕೇಳಲಾಗಿತ್ತು. ಆದರೆ ಒಪ್ಪಿಗೆ ಸಿಗಲಿಲ್ಲ. ಯಜಮಾನನ ಒಪ್ಪಿಗೆಯಿಲ್ಲದೇ ಇದ್ದರೂ ಹೆಣ್ಣು ಮಗಳಿಗೆ ಅನ್ಯಾಯವಾಗಬಾರದೆಂದು ಮದುವೆ ಮಾಡಿದ್ದರು.

ಮದುವೆಗೆ ಊರಿನ ಕುಟುಂಬಗಳು ತೆರಳಿದ್ದೇ ಜಾತಿಯ ಯಜಮಾನನ ಕೆಂಗಣ್ಣಿಗೆ ಗುರಿಯಾಗಿದೆ. ನನ್ನ ಒಪ್ಪಿಗೆ ಪಡೆಯದೇ ಮದುವೆಗೆ ಹೋಗಿದ್ದಾರೆಂದು ಮದುವೆ ನಡೆದ ವರ್ಷದ ನಂತರ ಒಟ್ಟು 9 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ವಿಶೇಷವೆಂದರೆ ಗಣಪತಿ ಅಂಬಿಗನ ಮದುವೆಗೆ ಹೋದ ಒಂದೇ ಕಾರಣಕ್ಕೆ ಸ್ವತಃ ಯಜಮಾನನ ಹೆಂಡತಿಯ ಅಕ್ಕ ಲಕ್ಷ್ಮೀ ಅಂಬಿಗ  ಕುಟುಂಬಕ್ಕೂ ಬಹಿಷ್ಕಾರ ಹಾಕಲಾಗಿದೆ. ಗಣಪತಿ ಅಂಬಿಗ ಅವರ ಮದುವೆಗೆ ಹೋಗಿರುವ ಮಾದೇವ ವೆಂಕಪ್ಪ ಅಂಬಿಗ, ಗಣಪತಿ ವೆಂಕಪ್ಪ ಅಂಬಿಗ, ಉಲ್ಲಾಸ ನಾಗಪ್ಪ ಅಂಬಿಗ, ನಾಗೇಶ ಬೀರಪ್ಪ ಅಂಬಿಗ, ಅಪ್ಪಯ್ಯ ಸುಬ್ಬು ಅಂಬಿಗ, ಉಮೇಶ ಈಶ್ವರ ಅಂಬಿಗ, ಕೃಷ್ಣಪ್ಪ ಬೀರಪ್ಪ ಅಂಬಿಗ, ಲಕ್ಷ್ಮಣ ವೆಂಕಪ್ಪ ಅಂಬಿಗ, ಸುಬ್ರಾಯ ಗಣಪು ಅಂಬಿಗ ಕುಟುಂಬಕ್ಕೆ ಬಹಿಷ್ಕಾರ ವಿಧಿಸಲಾಗಿದೆ.

ರಿಕ್ಷಾ ಹತ್ತಲೂ ನಿರ್ಬಂಧ: ಬಹಿಷ್ಕೃತರ ಮನೆಗೆ ಯಾರೂ ಹೋಗುವಂತಿಲ್ಲ, ಮಾತನಾಡುವಂತಿಲ್ಲ. ನಿಯಮ ಮೀರಿದರೆ ಭಾರೀ ದಂಡ ತೆರಬೇಕಾಗುತ್ತದೆ. ದಂಡ ಕಟ್ಟದಿದ್ದರೆ ಅವರಿಗೂ ಬಹಿಷ್ಕಾರ. ಅಂಬಿಗ ಸಮಾಜದಲ್ಲಿ ಜಾತಿ ಮುಖಂಡರಿಗೆ ಮಹತ್ವದ ಸ್ಥಾನವಿದೆ. ಅವರು ಹಾಕಿದ ಗೆರೆಯನ್ನು  ಯಾರೂ ದಾಟುವುದಿಲ್ಲ. ಸದ್ಯ ತಾಲೂಕಿನ 18 ಹಳ್ಳಿಗಳಲ್ಲಿ ಇರುವ ಪ್ರತಿ ಅಂಬಿಗ ಸಮಾಜದ ಮುಖಂಡರಿಗೆ ಬಹಿಷ್ಕೃತರ ಯಾದಿ ತಲುಪಿದೆ. ಬೇರೆ ಊರಿನಲ್ಲಿರುವ ಸಂಬಂಧಿಕರೂ ಮನೆಗೆ ಸೇರಿಸುವುದಿಲ್ಲ. ತಾಯಿ ಮನೆಗೆ ಬಂದ ಗರ್ಭಿಣಿಯನ್ನೂ ಉಳಿಯಗೊಡದಂಥ ಅಮಾನವೀಯತೆ ನಡೆದಿದೆ. ಕತಗಾಲದಲ್ಲಿ ಬಾಡಿಗೆ ರಿಕ್ಷಾ ಚಲಾಯಿಸುತ್ತಿರುವ ಗಣಪತಿ ಅಂಬಿಗನ ರಿಕ್ಷಾ ಹತ್ತುವುದಕ್ಕೂ ನಿರ್ಬಂಧ ಹೇರಲಾಗಿದೆ.

ವಧು-ವರ ಸಿಗುತ್ತಿಲ್ಲ
ಇದೆಲ್ಲವೂ ಒಂದೆಡೆಯಾದರೆ ಬಹಿಷ್ಕೃತರ  ಕುಟುಂಬದಲ್ಲಿ ಹಲವರು ಮದುವೆಗೆ ಬಂದ ಯುವತಿಯರಿದ್ದಾರೆ. ಇವರಿಗೆ ಸ್ವಸಮಾಜದ ಯಾರೂ ವರ ಕೊಡದಂಥ ಬಿಕ್ಕಟ್ಟು ನಿರ್ಮಾಣವಾಗಿದೆ. ಮದುವೆಗೆ ಬಂದ ಯುವಕರ ಸ್ಥಿತಿಯೂ ಭಿನ್ನವಾಗಿಲ್ಲ. ಮಾನವೀಯ ಸಂಬಂಧಗಳ ಜೊತೆ ಚೆಲ್ಲಾಟ ನಡೆದಿದ್ದು, ಬಹಿಷ್ಕೃತರ  ಕುಟುಂಬಗಳ ಮೇಲೆ ಮಾನಸಿಕ ಹಾಗೂ ಸಾಮಾಜಿಕ ದೌರ್ಜನ್ಯವೇ ನಡೆಯುತ್ತಿದೆ. ಜಾತಿ ಬಹಿಷ್ಕಾರದಿಂದ ಮುಕ್ತಿ ಕೊಡಿಸುವಂತೆ ಕೋರಿ ಸರಕಾರಕ್ಕೆ, ಅಧಿಕಾರಿಗಳಿಗೆ ಮನವಿ ಮೂಲಕ ಕೋರಲಾಗಿದ್ದರೂ ಸಂಬಂಧಪಟ್ಟವರು  ವಿಚಾರಿಸಲು ಬಂದಿಲ್ಲ. ದೂರವಾಣಿ ಕರೆಗೂ ಸಿಗುತ್ತಿಲ್ಲ. ದೂರು ಕೊಟ್ಟರೆಂದು ಜಾತಿ ಮುಖಂಡರು ಇನ್ನಷ್ಟು ಕ್ರುದ್ಧಗೊಳ್ಳುವ ಸಾಧ್ಯತೆ ಇದ್ದು ಬಹಿಷ್ಕೃತ ಕುಟುಂಬಗಳಿಗೆ ರಕ್ಷಣೆಯ ಅಗತ್ಯ ಇದೆ.

Advertisement

ನಮ್ಮಿಂದ ತಪ್ಪಾಗಿದ್ದರೆ ತಿಳಿ ಹೇಳಲಿ. ಕಾನೂನು ಪ್ರಕಾರ ಶಿಕ್ಷೆ ಕೊಡಲಿ. ಜಾತಿ ಬಹಿಷ್ಕಾರದಂಥ ಶಿಕ್ಷೆಯಿಂದ ನಮಗೆ ಮುಕ್ತಿಬೇಕು. ಇನ್ಯಾವತ್ತೂ ಯಾರ ಮೇಲೂ ಬಹಿಷ್ಕಾರ ಹಾಕಬಾರದು. ನಮಗೆ ನ್ಯಾಯ ಕೊಡಿಸಿ.
– ಗಣಪತಿ ಅಂಬಿಗ, ನೊಂದ ನಿವಾಸಿ

ಮರಳಿ ಜಾತಿ ಸೇರುವುದಕ್ಕೆ ಒಂದೊಂದು ಕುಟುಂಬದಿಂದಲೂ ಹತ್ತಾರು ಸಾವಿರ ದಂಡ ಕೇಳಲಾಗುತ್ತಿದೆ. ದಿನವೂ ದುಡಿದು ಬದುಕುವ ನಮ್ಮ ಬಳಿ ಅಷ್ಟೆಲ್ಲ ಹಣ ಎಲ್ಲಿಂದ ಬರಬೇಕು. ಇಷ್ಟಕ್ಕೂ ನಾವು ಮಾಡಿದ ತಪ್ಪಾದರೂ ಏನು?
– ಶಿವು ಅಂಬಿಗ, ಬಹಿಷ್ಕಾರಕ್ಕೊಳಗಾದ ವ್ಯಕ್ತಿ

– ಶಂಕರ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next