Advertisement

ಕಣ್ಣಿಲ್ಲದೇ ಕಂಗೆಟ್ಟ ಕುಟುಂಬಕ್ಕೆ ಬೇಕಿದೆ ಬೆಳಕು

10:56 PM Dec 13, 2019 | Lakshmi GovindaRaj |

ರಾಯಚೂರು: ಮನೆಯಲ್ಲಿ ಒಬ್ಬರು ಅಂಗ ನ್ಯೂನತೆಯಿಂದ ಬಳಲಿದರೆ ನೋಡಲಾಗದು. ಅಂಥದ್ದರಲ್ಲಿ ಕುಟುಂಬದಲ್ಲಿ ಮೂರು ಜನ ದೃಷ್ಟಿ ಸಮಸ್ಯೆಯಿಂದ ಹಾಗೂ ಒಬ್ಬರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ! ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂಥದ್ದೊಂದು ಕುಟುಂಬ ಸಂಕಷ್ಟದಲ್ಲಿ ಕಾಲ ದೂಡುತ್ತಿದೆ. ಬಸಮ್ಮ ಎಂಬಾಕೆ ಹೆರಿಗೆ ವೇಳೆ ದೃಷ್ಟಿ ಕಳೆದುಕೊಂಡಿದ್ದು, ಮಕ್ಕಳಿಗೂ ಆ ಕಾಯಿಲೆ ಬಂದಿದೆ.

Advertisement

ಗಂಡ ಪಾರ್ಶ್ವವಾಯುನಿಂದ ಬಳಲುತ್ತಿದ್ದು, ದುಡಿಯಲು ಶಕ್ತರಾಗಿಲ್ಲ. ಕಣ್ಣು ಕಳೆದುಕೊಂಡ ತಾಯಿಗೂ ಯಾವುದೇ ಕೆಲಸವಿಲ್ಲ. ಈಗ ಇಬ್ಬರು ಮಕ್ಕಳು ಕೂಡ ಅನುವಂಶಿಕ ಕಾಯಿಲೆಗೆ ತುತ್ತಾಗಿದ್ದಾರೆ. ಮಗಳು ಜ್ಯೋತಿಗೆ ಕಣ್ಣು ಕಾಣದಂತಾಗಿದ್ದು, ಮಗ ನವೀನಕುಮಾರ ದೃಷ್ಟಿಯಲ್ಲಿ ದೋಷ ಕಂಡುಬಂದಿದ್ದು, ಶೇ.40ರಷ್ಟು ದೃಷ್ಟಿ ಹೀನತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರ ಜತೆಗೆ ಮತ್ತೂಬ್ಬ ಮಗನಿಗೂ ಈಗಾಗಲೇ ದೃಷ್ಟಿ ಮಂದವಾಗುತ್ತಿದ್ದು, ಈ ಕಾಯಿಲೆಗೆ ತುತ್ತಾಗುವ ಆತಂಕ ಎದುರಾಗಿದೆ.

ಮಗಳು ಜನಿಸಿದಾಗ ತಾಯಿ ಬಸಮ್ಮಗೆ ಸಮಸ್ಯೆಯಾಗಿ ಎರಡು ಕಣ್ಣುಗಳನ್ನು ತೆಗೆಯಲಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಹೊಣೆ ಮಗಳು ಜ್ಯೋತಿ ಹೆಗಲೇರಿದ್ದು, ವ್ಯಾಸಂಗ ತೊರೆದು ತಂದೆ-ತಾಯಿ ನೋಡಿಕೊಳ್ಳುವುದೇ ಕೆಲಸವಾಗಿತ್ತು. ಆದರೆ, ಆಕೆಗೂ ದೃಷ್ಟಿ ದೋಷ ಆವರಿಸಿ, ಈಗ ಕಣ್ಣು ಕಾಣುತ್ತಿಲ್ಲ. ಮಗ ನವೀನ್‌ಕುಮಾರನಲ್ಲಿ ದೃಷ್ಟಿ ದೋಷ ಕಂಡು ಬಂದಿದ್ದು, ಶಾಲೆಯಲ್ಲಿ ಶಿಕ್ಷಕರು ಗುರುತಿಸಿ ವೈದ್ಯರಿಗೆ ತೋರಿಸಿದಾಗ; ಚಿಕಿತ್ಸೆ ಕೊಡಿಸದಿದ್ದರೆ ಈ ಬಾಲಕನ ದೃಷ್ಟಿಯೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೊನೆಯ ಮಗ ಪೇತರಪ್ಪಗೂ ಈ ಕಾಯಿಲೆ ಬರಬಹುದು ಎಂದೂ ಎಚ್ಚರಿಸಿದ್ದಾರೆ. ಪಾಲಿಕೋನಿಯಾ ಸಮಸ್ಯೆ: ಇದು ನರದೌರ್ಬಲ್ಯದಿಂದಲೂ ಬರುವ ಸಮಸ್ಯೆಯಾಗಿದ್ದು, ಪಾಲಿಕೋನಿಯಾ ಎಂಬ ಕಾಯಿಲೆ ಇರಬೇಕು ಎಂದು ವೈದ್ಯರು ಅಂದಾಜಿಸಿದ್ದಾರೆ. ನರಗಳು ದುರ್ಬಲಗೊಂಡಾಗ ಅದರ ಪರಿಣಾಮ ದೃಷ್ಟಿ ಮೇಲಾಗುವ ಸಾಧ್ಯತೆ ಇರುತ್ತದೆ. ಇದರ ಮುನ್ಸೂಚನೆ ಬರುತ್ತಿದ್ದಂತೆ ಚಿಕಿತ್ಸೆ ಕೊಡಿಸಬೇಕು.

ಆರಂಭದಲ್ಲಿ ಚಿಕಿತ್ಸೆ ನೀಡಿದಲ್ಲಿ ಕಾಯಿಲೆಯಿಂದ ಗುಣಮುಖರಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಕಡು ಬಡತನದಲ್ಲಿ ದಿನ ದೂಡುತ್ತಿರುವ ಈ ಕುಟುಂಬಕ್ಕೆ ಚಿಕಿತ್ಸೆ ಕೊಡಿಸುವಷ್ಟು ಶಕ್ತಿಯಿಲ್ಲ. ಮಾಸಾಶನ ಬರುತ್ತಿದೆಯಾದರೂ ಇಡೀ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ದಾನಿಗಳು ನೆರವಿಗೆ ಬಂದು ಈ ಸಮಸ್ಯೆ ನಿವಾರಿಸಿದಲ್ಲಿ ಕುಟುಂಬ ಬಹುದೊಡ್ಡ ಸಮಸ್ಯೆಯಿಂದ ಪಾರಾದಂತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next